ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಮ ಮಂದಿರ ದೇಣಿಗೆ ಕಳ್ಳತನ ವಿವಾದ: ಅಯೋಧ್ಯೆಯಲ್ಲಿ ಮಠಾಧೀಶರೊಂದಿಗೆ ಸಭೆ ನಡೆಸಲಿರುವ ಆರ್‌ಎಸ್‌ಎಸ್, ವಿಎಚ್‌ಪಿ ನಾಯಕರು

Ram Mandir Donation Theft Controversy: ರಾಮ ಮಂದಿರದಲ್ಲಿ ದೇಣಿಗೆ ಸಂಗ್ರಹದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಅದರ ಅಂಗಸಂಸ್ಥೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಯ ಉನ್ನತ ನಾಯಕರು ಅಯೋಧ್ಯೆಯಲ್ಲಿ ಸುಮಾರು 300 ಶ್ರೀಗಳೊಂದಿಗೆ ಸಭೆ ನಡೆಸಲಿದ್ದಾರೆ.

ಅಯೋಧ್ಯೆಯಲ್ಲಿ ಮಠಾಧೀಶರೊಂದಿಗೆ ಸಭೆ ನಡೆಸಲಿರುವ RSS, VHP

ಸಾಂದರ್ಭಿಕ ಚಿತ್ರ -

Priyanka P
Priyanka P Jul 23, 2026 5:19 PM

ಅಯೋಧ್ಯೆ, ಜು.23: ರಾಮ ಮಂದಿರದಲ್ಲಿ ದೇಣಿಗೆ ಸಂಗ್ರಹದಲ್ಲಿ ಅಕ್ರಮ (Ram Mandir Donation Theft Controversy) ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಅಂಗಸಂಸ್ಥೆ ವಿಶ್ವ ಹಿಂದೂ ಪರಿಷತ್ (VHP) ಯ ಉನ್ನತ ನಾಯಕರು ಅಯೋಧ್ಯೆಯಲ್ಲಿ ಸುಮಾರು 300 ಶ್ರೀಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯು 2027ರ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ (Uttar Pradesh) ವಿಧಾನಸಭಾ ಚುನಾವಣೆಗೆ ಮುನ್ನ ಅಕ್ರಮಗಳಿಂದ ಉಂಟಾಗಬಹುದಾದ ರಾಜಕೀಯ ಪರಿಣಾಮಗಳನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ಕಂಡುಬರುತ್ತಿದೆ.

ದೇಣಿಗೆ ಹಣದ ಕಳ್ಳತನದಿಂದ ಆಘಾತಕ್ಕೊಳಗಾಗಿರುವ ಹಿಂದೂ ಸಮುದಾಯಕ್ಕೆ ಭರವಸೆ ನೀಡುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿದೆ ಎಂದು ಹೇಳಲಾಗಿದೆ. ಸಭೆಗೆ ಹಿಂದೂ ಸನ್ಯಾಸಿಗಳು ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಪ್ರತಿನಿಧಿಸುವ ಸುಮಾರು 300 ಮಠಾಧೀಶರು ಸೇರುವ ನಿರೀಕ್ಷೆಯಿದೆ. ಆರ್‌ಎಸ್‌ಎಸ್ ನಾಯಕರಾದ ಜೋಶಿ ಮತ್ತು ಕೃಷ್ಣ ಗೋಪಾಲ್, ರಾಮ ಮಂದಿರವನ್ನು ನಿರ್ವಹಿಸುವ ಶ್ರೀ ರಾಮ ಜನ್ಮಭೂಮಿ ತಿರ್ಥ ​​ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಈವರೆಗೆ ತೆಗೆದುಕೊಂಡ ಕ್ರಮಗಳು, ಅಕ್ರಮಗಳನ್ನು ಪರಿಶೀಲಿಸಲು ರಚಿಸಲಾದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಸಂಶೋಧನೆಗಳು ಮತ್ತು ಭಕ್ತರಲ್ಲಿ ಗೊಂದಲ ಹಾಗೂ ಅಪನಂಬಿಕೆಯನ್ನು ಹೋಗಲಾಡಿಸುವ ಕ್ರಮಗಳ ಕುರಿತು ಸಭೆಯು ಗಮನಹರಿಸಲಿದೆ ಎಂದು ಆರ್‌ಎಸ್‌ಎಸ್ ಪದಾಧಿಕಾರಿಗಳು ತಿಳಿಸಿದ್ದಾರೆ. ಬಿಜೆಪಿಯ ಪ್ರಮುಖ ಹಿಂದೂ ಬೆಂಬಲಿಗರಲ್ಲಿ ಉಂಟಾಗಿರುವ ಆತಂಕವನ್ನು ನಿವಾರಿಸುವ ಉದ್ದೇಶದಿಂದ ಆರ್‌ಎಸ್‌ಎಸ್ ಮತ್ತು ವಿಎಚ್‌ಪಿ ನಡೆಸುತ್ತಿರುವ ಪ್ರಯತ್ನದ ಭಾಗವಾಗಿ, ಸಾಧು-ಸಂತರ ಸಲಹೆಗಳನ್ನು ಆಧರಿಸಿ ಮುಂದಿನ ಕಾರ್ಯಯೋಜನೆಯನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ: ಪ್ರತಿ ರೂಪಾಯಿಯನ್ನೂ ಟ್ರ್ಯಾಕ್ ಮಾಡಲು ಎಐ ವ್ಯವಸ್ಥೆಗೆ ಶಿಫಾರಸು ಸಾಧ್ಯತೆ

ಉತ್ತರ ಪ್ರದೇಶದಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳುವ ಆಶಯವನ್ನು ಹೊಂದಿರುವುದರಿಂದ, ದೇಣಿಗೆ ಸಂಗ್ರಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಆರ್‌ಎಸ್‌ಎಸ್ ಮತ್ತು ಅದರ ಸಂಘಟನೆಗಳ ಜಾಲ ಅಥವಾ ಸಂಘ ಪರಿವಾರಕ್ಕೆ ಪ್ರಮುಖ ಕಳವಳವಾಗಿವೆ. ಈ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ ಸಲ್ಲಿಸಿದ್ದಾರೆ. ಆರೋಪಿ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್, ರಾಯ್ ಅವರ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಬಂಧಿತ ಆರೋಪಿಗಳಲ್ಲಿ ಮಿಶ್ರಾ ಅವರ ಇಬ್ಬರು ಸಂಬಂಧಿಕರು ಕೂಡ ಸೇರಿದ್ದಾರೆ.

ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವು ಸಂಘ ಪರಿವಾರದ ಪ್ರಮುಖ ಸೈದ್ಧಾಂತಿಕ ವಿಷಯವಾಗಿದೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ವಿಷಯದ ಪರಿಣಾಮಗಳ ಬಗ್ಗೆ ಬಿಜೆಪಿಯೊಳಗೆ ಕಳವಳಗಳಿವೆ. ಹೀಗಾಗಿ ಈ ಸಭೆ ಮಹಳ ಮಹತ್ವ ಪಡೆದಿದೆ.