Awami League: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಮತ್ತೊಂದು ಶಾಕ್; ಅವಾಮಿ ಲೀಗ್ ಪಕ್ಷಕ್ಕೆ ನಿಷೇಧ ಹೇರಿದ ಸರ್ಕಾರ
Sheikh Hasina: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರಿಗೆ ಅಲ್ಲಿನ ಮಧ್ಯಂತರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಶನಿವಾರ (ಮೇ 10) ಶೇಕ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ ಅನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಶೇಕ್ ಹಸೀನಾ.

ಢಾಕಾ: ಆತಂಕರಿಕ್ಷ ಕ್ಷೋಭೆ ಕಾಣಿಸಿಕೊಂಡ ಬೆನ್ನಲ್ಲೇ ಕಳೆದ ವರ್ಷ ದೇಶಬಿಟ್ಟು ಪಲಾಯನ ಮಾಡಿದ್ದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ (Sheikh Hasina) ಅವರಿಗೆ ಅಲ್ಲಿನ ಮಧ್ಯಂತರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಮುಹಮ್ಮದ್ ಯೂನಸ್ (Muhammad Yunus) ನೇತೃತ್ವದ ಮಧ್ಯಂತರ ಸರ್ಕಾರ ಶನಿವಾರ (ಮೇ 10) ಶೇಕ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ (Awami League) ಅನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ದೇಶದ ಭಯೋತ್ಪಾದನಾ ವಿರೋಧಿ ಕಾನೂನಿನಡಿ ಅಧಿಕೃತವಾಗಿ ಪಕ್ಷವನ್ನು ನಿಷೇಧಿಸಲಾಗಿದೆ.
ಯೂನಸ್ ಕಚೇರಿಯ ಹೇಳಿಕೆಯ ಪ್ರಕಾರ, ನಿಷೇಧದ ಕುರಿತು ಔಪಚಾರಿಕ ಗೆಜೆಟ್ ಅಧಿಸೂಚನೆಯನ್ನು ಮುಂದಿನ ದಿನಗಳಲ್ಲಿ ಹೊರಡಿಸಲಾಗುತ್ತದೆ. ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯಲ್ಲಿ (ICT) ಅವಾಮಿ ಲೀಗ್‌ನ ವಿಚಾರಣೆ ಪೂರ್ಣಗೊಳ್ಳುವವರೆಗೆ ನಿಷೇಧವು ಜಾರಿಯಲ್ಲಿರುತ್ತದೆ ಎಂದು ಪ್ರಕಟಣೆ ದೃಢಪಡಿಸಿದೆ. ಈ ಕ್ರಮವು ರಾಷ್ಟ್ರದ "ಭದ್ರತೆ ಮತ್ತು ಸಾರ್ವಭೌಮತ್ವವನ್ನು" ರಕ್ಷಿಸುವ ಗುರಿಯನ್ನು ಹೊಂದಿದೆ ಎಂದೂ ಹೇಳಿದೆ.
Major decision this evening by #Bangladesh's interim government to effectively ban the Awami League, in effect, acquiescing/capitulating/bowing down/succumbing (choose your verb) to demands of students and islamic groups. More on this to come .... pic.twitter.com/hhwmPTqSFA
— David Bergman (@TheDavidBergman) May 10, 2025
ಅವಾಮಿ ಲೀಗ್ ಆಡಳಿತದ ಪತನಕ್ಕೆ ಕಾರಣವಾದ 2024ರ ಜುಲೈಯಲ್ಲಿ ನಡೆದ ದಂಗೆಯ ಸಾಕ್ಷಿಗಳು, ದೂರುದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಸರ್ಕಾರ ಉಲ್ಲೇಖಿಸಿದೆ. ಯೂನಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಐಸಿಟಿ ಕಾನೂನಿಗೆ ತಿದ್ದುಪಡಿಗಳನ್ನು ಮಾಡಲಾಗಿದೆ. ರಾಜಕೀಯ ಪಕ್ಷಗಳು, ಅವುಗಳ ಸಂಸ್ಥೆಗಳು ಮತ್ತು ಅಂಗಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲು ನ್ಯಾಯಮಂಡಳಿಗೆ ಅಧಿಕಾರ ನೀಡಲಾಯಿತು.
1949ರಲ್ಲಿ ಸ್ಥಾಪನೆಯಾದ ಅವಾಮಿ ಲೀಗ್ ಪೂರ್ವ ಪಾಕಿಸ್ತಾನದ ಸ್ವಾಯತ್ತತೆ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿತು ಮತ್ತು 1971ರ ವಿಮೋಚನಾ ಯುದ್ಧವನ್ನು ಮುನ್ನಡೆಸಿದ ಇತಿಹಾಸವನ್ನು ಹೊಂದಿದೆ.
ಈ ಸುದ್ದಿಯನ್ನೂ ಓದಿ: Sheikh Hasina: ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ಮರಳುತ್ತಾರಾ ಶೇಖ್ ಹಸೀನಾ?
ಭಾರತಕ್ಕೆ ಪಲಾಯನ
77 ವರ್ಷದ ಹಸೀನಾ ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಅವರು ಭಾರತಕ್ಕೆ ಪಲಾಯನ ಮಾಡಿದ್ದರು. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಶೇಖ್ ಹಸೀನಾ ಅವರನ್ನು ಮರಳಿ ಕರೆತರಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಹಸೀನಾ ಅವರ ಪಾಸ್‌ಪೋರ್ಟ್ ಕೂಡ ರದ್ದುಗೊಂಡಿದೆ. ಅವರನ್ನು ಹಸ್ತಾಂತರಿಸುವಂತೆ ಭಾರತ ಸರ್ಕಾರಕ್ಕೂ ಬಾಂಗ್ಲಾದೇಶ ಪತ್ರ ಬರೆದಿತ್ತು. ಆದರೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೆಲವು ತಿಂಗಳ ಹಿಂದೆ ಢಾಕಾದಲ್ಲಿರುವ ಶೇಖ್ ಹಸೀನಾ ಅವರ ತಂದೆಯ ನಿವಾಸವನ್ನು ಧ್ವಂಸಗೊಳಿಸಿ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದೆ. ಶೇಖ್ ಹಸೀನಾ ತಂದೆ, ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಸ್ಮಾರಕವನ್ನೂ ಧ್ವಂಸಗೊಳಿಸಿತ್ತು.
ಅಲ್ಲದೆ ಕೆಲವು ದಿನಗಳ ಹಿಂದೆಯಷ್ಟೇ ಢಾಕಾ ನ್ಯಾಯಾಲಯವು ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳು ಸೇರಿದಂತೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಿತ್ತು. ಗಡಿಪಾರಾಗಿ ಭಾರತದಲ್ಲಿರುವ ಹಸೀನಾ ಅವರ ಧನ್ಮೊಂಡಿ ನಿವಾಸ 'ಸುದಾಸಧನ್' ಮತ್ತು ಅವರ ಕುಟುಂಬ ಸದಸ್ಯರು ಹೊಂದಿರುವ ಇತರ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಆದೇಶ ನೀಡಿತ್ತು.