Mahesh Shetty Thimarodi: ಮಹೇಶ್ ತಿಮರೋಡಿಗೆ ತಾತ್ಕಾಲಿಕ ರಿಲೀಫ್; ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ
High Court: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಸಿಕ್ಕಿರುವುದು ಏರ್ ಗನ್ ಆಗಿದೆ. ಅದಕ್ಕೆ ಲೈಸೆನ್ಸ್ ಅಗತ್ಯವಿಲ್ಲದಿದ್ದರೂ ಕೇಸ್ ದಾಖಲಿಸಲಾಗಿದೆ ಎಂದು ಅವರ ಪರ ವಕೀಲರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್, ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ಮುಂದೂಡಿದೆ.
-
Prabhakara R
Oct 24, 2025 10:36 PM
ಬೆಂಗಳೂರು: ಶಸ್ತ್ರಾಸ್ತ್ರ ಕಾಯ್ದೆಯಡಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಈ ಮೂಲಕ ಮಹೇಶ್ ಶೆಟ್ಟಿ ತಿಮರೋಡಿಗೆ (Mahesh Shetty Thimarodi) ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗಿದ್ದ ಎಫ್ಐಆರ್ ರದ್ದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿ, ಮಧ್ಯಂತರ ತಡೆಯನ್ನು ನೀಡಿ ಆದೇಶಿಸಿದೆ.
ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಸಿಕ್ಕಿರುವುದು ಏರ್ ಗನ್ ಆಗಿದೆ. ಅದಕ್ಕೆ ಲೈಸೆನ್ಸ್ ಅಗತ್ಯವಿಲ್ಲದಿದ್ದರೂ ಕೇಸ್ ದಾಖಲಿಸಲಾಗಿದೆ. ಅರ್ಜಿದಾರರಿಗೆ ಕಿರುಕುಳ ನೀಡುವ ಏಕೈಕ ಉದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಮರೋಡಿ ಪರ ವಕೀಲರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ನವೆಂಬರ್ 3ನೇ ವಾರಕ್ಕೆ ಮುಂದೂಡಿಕೆ ಮಾಡಿದೆ.
ಈ ಸುದ್ದಿಯನ್ನೂ ಓದಿ | Physical Abuse: ಇನ್‌ಸ್ಟಾಗ್ರಾಂನಲ್ಲಿ ಬಾಲಕಿಯನ್ನು ಪರಿಚಯಿಸಿಕೊಂಡು ಲೈಂಗಿಕ ದೌರ್ಜನ್ಯ; ನಾಲ್ವರು ಅಂದರ್
ಏನಿದು ಪ್ರಕರಣ?
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ಪೊಲೀಸರು, ಆ.26ರಂದು ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಶೋಧ ನಡೆಸಿದ ವೇಳೆ ಎರಡು ತಲವಾರುಗಳು ಮತ್ತು ಒಂದು ಬಂದೂಕು ಸೇರಿದಂತೆ ಒಟ್ಟು 44 ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಈ ಬಗ್ಗೆ ತನಿಖಾ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿತ್ತು. ನಂತರ ಎಸ್ಐಟಿ ಅಧಿಕಾರಿಗಳು ಸೆ.16ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿ, ತಿಮರೋಡಿ ತಮ್ಮ ಮನೆಯಲ್ಲಿ ಅಕ್ರಮವಾಗಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಮುಂದಿನ ತನಿಖೆ ನಡೆಸಬೇಕು ಎಂದು ಕೋರಿದ್ದರು. ಈ ದೂರಿನ ಆಧಾರದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿತ್ತು.