ಯುಎಇ: ಫ್ಲೈದುಬೈ ವಿಮಾನದಲ್ಲಿ (fly dubai attack) ಭಯೋತ್ಪಾದಕ ದಾಳಿಗೆ (terror attack) ಒಳಗಾಗಿದ್ದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smit Machchhar) ಅವರು ಇತ್ತೀಚೆಗೆ ಯುಎಇಯ (UAE) ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ತಲೆ ಮೇಲಿನ ಗಾಯದ ಗುರುತುಗಳು ಹತ್ತಿರದಿಂದ ಕಂಡು ಬಂದಿದೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (UAE President Sheikh Mohamed bin Zayed Al Nahyan) ಅವರು ಕ್ಯಾಪ್ಟನ್ ಮಚ್ಛಾರ್ ಮತ್ತು ಅವರ ಸಿಬ್ಬಂದಿ ವರ್ಗದವರಿಗೆ 'ಫಸ್ಟ್ ಕ್ಲಾಸ್ ಆರ್ಡರ್ ಆಫ್ ಜಾಯೆದ್ II' (First Class Order of Zayed II ) ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಕಳೆದ ಸೆಪ್ಟೆಂಬರ್ 30 ರಂದು ದುಬೈನಿಂದ ಇಸ್ರೇಲ್ ನ ಟೆಲ್ ಅವೀವ್ಗೆ ಸಾಗುತ್ತಿದ್ದ ಫ್ಲೈದುಬೈ ಎಫ್ ಝೆಡ್ 1073 ವಿಮಾನದ ಕಾಕ್ಪಿಟ್ನಲ್ಲಿ ಒಮನ್ ಮೂಲದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ನಡೆಸಿದ್ದನು.ಇದರಿಂದ ತಲೆಬುರುಡೆ ಮುರಿತಕ್ಕೆ ಒಳಗಾಗಿದ್ದ ಮಚ್ಚಾರ್ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಅವರುಚೇತರಿಸಿಕೊಂಡಿದ್ದಾರೆ.
ವಿಮಾನದ ಮೇಲೆ ನಡೆದ ದಾಳಿಯಿಂದ ಪ್ರಯಾಣಿಕರನ್ನು ರಕ್ಷಿಸಲು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಮಾಡಿರುವ ಪ್ರಯತ್ನಗಳನ್ನು ಗುರುತಿಸಿ ಅವರು ಮತ್ತು ಅವರ ಸಹಾಯಕರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ 'ಫಸ್ಟ್ ಕ್ಲಾಸ್ ಆರ್ಡರ್ ಆಫ್ ಜಾಯೆದ್ II' ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಸಮಾರಂಭದ ವೇಳೆ ಕ್ಯಾಪ್ಟನ್ ಮಚ್ಛಾರ್ ಅವರ ತಲೆಯ ಮೇಲೆ ಹೊಲಿಗೆಗಳು ಕೆಮರಾ ಕಣ್ಣಲ್ಲಿ ಸೆರೆಯಾಗಿದೆ. ಕಾಕ್ಪಿಟ್ನಲ್ಲಿ ತುರ್ತು ಸಮಯದ ಬಳಕೆಗೆಂದು ಇರಿಸಲಾಗಿದ್ದ ಕೊಡಲಿಯಿಂದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಮಾಮ್ ಅಲ್-ಹಮ್ಮಾಮಿ ದಾಳಿ ನಡೆಸಿದ್ದನು. ಈ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡರೂ ಕೂಡ ಮಚ್ಚಾರ್ ಅವರು ಕಾಕ್ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಸಿಬ್ಬಂದಿ ಮತ್ತು ಪ್ರಯಾಣಿಕರು ಒಳ ಬಂದು ಅವರ ಮತ್ತು ವಿಮಾನದ ರಕ್ಷಣೆಗೆ ನಿಂತರು. ಹೀಗಾಗಿ ದೊಡ್ಡ ದುರಂತವೊಂದು ತಪ್ಪಿತು.
ದುಬೈನ ಕ್ರೌನ್ ಪ್ರಿನ್ಸ್ , ಉಪ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರಾದ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಪ್ರಶಸ್ತಿ ಪದಕಗಳನ್ನು ಪ್ರದಾನ ಮಾಡಿ, ಅವರ ಕಾರ್ಯವೈಖರಿ ಮತ್ತು ಜವಾಬ್ದಾರಿ ಪ್ರಜ್ಞೆಯನ್ನು ಅವರು ಶ್ಲಾಘಿಸಿದರು.
ಯುಎಇಯ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿರುವ 'ಫಸ್ಟ್ ಕ್ಲಾಸ್ ಆರ್ಡರ್ ಆಫ್ ಜಾಯೆದ್ II' ಅನ್ನು ವಿಶಿಷ್ಟ ಸೇವೆ, ಧೈರ್ಯ, ದ್ವಿಪಕ್ಷೀಯ ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ನೀಡಿದ ಕೊಡುಗೆಗಾಗಿ ನೀಡಲಾಗುತ್ತದೆ. ಈ ಸಮಾರಂಭದಲ್ಲಿ ಕ್ಯಾಪ್ಟನ್ ಮಚ್ಛಾರ್ ಮತ್ತು ಅವರ ಸಿಬ್ಬಂದಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ನೂರಾರು ಜನರ ಜೀವ ಉಳಿಸಿದ ಪೈಲಟ್ಗೆ ಸ್ಮಿತ್ಗಾಗಿ ತುಜ್ ಮೇ ರಬ್ ದಿಕ್ತಾಹೇ ಹಾಡು ಹಾಡಿದ ಇಸ್ರೇಲಿ ಗಾಯಕ!
ಫ್ಲೈ ದುಬೈ ದಾಳಿಯ ಬಳಿಕ ಕ್ಯಾಪ್ಟನ್ ಮಚ್ಚಾರ್ ಅವರಿಗೆ ಗುಜರಾತ್ ಸರ್ಕಾರವು 'ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದೆ. ಇಸ್ರೇಲ್ ಸರ್ಕಾರವು ಕೂಡ ಅವರಿಗೆ ನಾಗರಿಕ ವೀರತ್ವಕ್ಕಾಗಿ 'ಅಧ್ಯಕ್ಷೀಯ ಪ್ರಶಸ್ತಿ' ನೀಡುವುದಾಗಿ ಘೋಷಿಸಿದೆ.