ಇಸ್ಲಾಮಾಬಾದ್: ಅಮೆರಿಕದ (America) ಷರತ್ತುಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಇರಾನ್ (iran) ಹೇಳಿದೆ. ಪಾಕಿಸ್ತಾನದ ಇಸ್ಲಾಮಾಬಾದ್ (Islamabad) ನಲ್ಲಿ ನಡೆದ ಮಾತುಕತೆ ವೇಳೆ ಅಮೆರಿಕದ ಉಪಾಧ್ಯಕ್ಷ ( US Vice President) ಜೆ.ಡಿ. ವ್ಯಾನ್ಸ್ (JD Vance) ನೇತೃತ್ವದ ನಿಯೋಗವು ಅಸಮಂಜಸ ಬೇಡಿಕೆಗಳನ್ನು ಇಟ್ಟಿದೆ ಎಂದು ಹೇಳಿರುವ ಇರಾನ್, ಅಮೆರಿಕದೊಂದಿಗಿನ ಮಾತುಕತೆ ವಿಫಲವಾಗಿದೆ. ಅಮೆರಿಕದ ಷರತ್ತುಗಳನ್ನು ಸ್ವೀಕರಿಸದಿರಲು ನಾವು ನಿರ್ಧರಿಸಿದ್ದೇವೆ ಎಂದು ತಿಳಿಸಿದೆ. ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಪ್ರಾರಂಭವಾದ ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮ ಮಾತುಕತೆ ಕಳೆದೆರಡು ದಿನಗಳಿಂದ ಇಸ್ಲಾಮಾಬಾದ್ ನಲ್ಲಿ ನಡೆಯುತ್ತಿದೆ. ಇದರ ಬಳಿಕ ಭಾನುವಾರ ಇರಾನ್ ಈ ಹೇಳಿಕೆಯನ್ನು ನೀಡಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಸಮಂಜಸವಾದ ಬೇಡಿಕೆಗಳನ್ನು ಇಟ್ಟಿವೆ. ಇರಾನಿನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಕಳೆದ 21 ಗಂಟೆಗಳ ಕಾಲ ನಿರಂತರವಾಗಿ ಇರಾನಿನ ನಿಯೋಗವು ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ. ಆದರೆ ಇರಾನಿನ ನಿಯೋಗದ ಮನವಿಗಳನ್ನು ತಿರಸ್ಕರಿಸಿರುವ ಅಮೆರಿಕದ ಬೇಡಿಕೆಗಳನ್ನು ನಾವು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಮಾತುಕತೆ ಯಾವುದೇ ನಿರ್ಧಾರಕ್ಕೆ ಬರಲಾರದೆ ಕೊನೆಗೊಂಡಿದೆ ಎಂದು ಇರಾನ್ ತಿಳಿಸಿದೆ.
ಕೆಟ್ಟ ಸುದ್ದಿ; ಅಮೆರಿಕ- ಇರಾನ್ ಕದನ ವಿರಾಮ ಮಾತುಕತೆ ವಿಫಲ ಎಂದ ಜೆಡಿ ವ್ಯಾನ್ಸ್
ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್ ನ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ, ಇಸಾಮಾಬಾದ್ ನಲ್ಲಿ ಮಾತುಕತೆ ಒಪ್ಪಂದದಲ್ಲಿ ಕೊನೆಯಾಗಬಹುದು ಎನ್ನುವ ನಿರೀಕ್ಷೆ ಯಾರಿಗೂ ಇರಲಿಲ್ಲ. ಇದು ನಮ್ಮ ಮತ್ತು ಪಾಕಿಸ್ತಾನದ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಮಾತುಕತೆಯಲ್ಲಿ ಭಾಗಿಯಾಗಿರುವ ಇತರ ನಮ್ಮ ಮಿತ್ರರಾಷ್ಟ್ರಗಳೊಂದಿಗಿನ ಸ್ನೇಹ ಮುಂದುವರಿಯುತ್ತವೆ ಎನ್ನುವ ವಿಶ್ವಾಸ ಟೆಹರಾನ್ ಗೆ ಇದೆ ಎಂದು ಹೇಳಿದರು.
ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆ ಕುರಿತು ವರದಿ ಮಾಡಿರುವ ಇರಾನ್‌ನ ಮಾಧ್ಯಮವೊಂದು ವಿಶ್ವದ ಪ್ರಮುಖ ತೈಲ ಮಾರ್ಗವಾದ ಹೊರ್ಮುಜ್ ಜಲಸಂಧಿ ಮತ್ತು ಪರಮಾಣು ಸಂಗ್ರಹ ವಿಚಾರದಲ್ಲಿ ಇರಾನ್ ಒಪ್ಪಲು ಸಾಧ್ಯವಾಗದ ಬೇಡಿಕೆಗಳನ್ನು ಅಮೆರಿಕ ಇಟ್ಟಿದೆ ಎಂದು ಹೇಳಿದೆ.
ಇರಾನ್ ನೊಂದಿಗಿನ ಮಾತುಕತೆ ಮುಗಿಸಿ ಹೊರಡುತ್ತಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು, ಅಂತಿಮ ಮತ್ತು ಅತ್ಯುತ್ತಮ ಕೊಡುಗೆಯೊಂದಿಗೆ ನಾವು ಇಸ್ಲಾಮಾಬಾದ್‌ನಿಂದ ಹೋರಾಡುತ್ತಿದ್ದೇವೆ. ನಮ್ಮ ಬೇಡಿಕೆಗಳನ್ನು ಇರಾನಿಯನ್ನರು ಸ್ವೀಕರಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ ಎಂದು ತಿಳಿಸಿದರು. ಇದರ ಬಳಿಕ ಇರಾನ್ ಅಮೆರಿಕ ಬೇಡಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಇರಾನ್ ಪ್ರತಿಕ್ರಿಯೆ ಬಳಿಕ ಮಾತನಾಡಿದ ಜೆ.ಡಿ. ವ್ಯಾನ್ಸ್, ಇದು ಇರಾನ್‌ಗೆ ಕೆಟ್ಟ ಸುದ್ದಿ. ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದದಿರುವುದು ಸೇರಿದಂತೆ ಅಮೆರಿಕದ ನಿಯಮಗಳನ್ನು ಸ್ವೀಕರಿಸದಿರಲು ಇರಾನ್ ನಿರ್ಧರಿಸಿದೆ. ಇದು ಅಮೆರಿಕ ಸಂಯುಕ್ತ ಸಂಸ್ಥಾನಕ್ಕಿಂತ ಇರಾನ್‌ಗೆ ಕೆಟ್ಟ ಸುದ್ದಿ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.
ಸುಮಾರು ಒಂದು ದಶಕದ ಬಳಿಕ ಇರಾನ್ ಮತ್ತು ಯುಎಸ್ ಅಧಿಕಾರಿಗಳು ನೇರ ಮಾತುಕತೆ ನಡೆಸಿದ್ದು, ಇರಾನ್ ಜೊತೆಗಿನ ಮಾತುಕತೆ ವೇಳೆ ತಾವು ಸಾಕಷ್ಟು ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ವ್ಯಾನ್ಸ್ ತಿಳಿಸಿದರು. 1979 ರ ಇಸ್ಲಾಮಿಕ್ ಕ್ರಾಂತಿಯ ಅನಂತರದ ನಡೆದ ಈ ಉನ್ನತ ಮಟ್ಟದ ಸಭೆಯ ಮೇಲೆ ಸಂಪೂರ್ಣ ವಿಶ್ವವೇ ಕಣ್ಣಿಟ್ಟಿತ್ತು.
ಇರಾನ್ ಮಾಜಿ ಸರ್ವಾಧಿಕಾರಿ ಖಮೇನಿ ಭಾರತೀಯ ಮೂಲದವರೆ? ಭಾರತದ ಈ ಗ್ರಾಮದ ನಂಟು ಬೆಳೆದಿದ್ದೇಗೆ?
ಅಮೆರಿಕದ ನಿಯೋಗದಲ್ಲಿ ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಭಾಗವಹಿಸಿದ್ದರೆ 71 ಸದಸ್ಯರ ಇರಾನಿನ ನಿಯೋಗದಲ್ಲಿ ಸಂಸದೀಯ ಸ್ಪೀಕರ್ ಮೊಹಮ್ಮದ್ ಬಕರ್ ಖಲಿಬಾಫ್ ಮತ್ತು ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಗ್ಚಿ ಇದ್ದರು.