India-Pak War: ಬಯಲಾಯ್ತು ಚೀನಾದ ಮಹಾ ಕುತಂತ್ರ; ಅಪರೇಷನ್ ಸಿಂದೂರ್ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಬಲ ನೀಡಿದ್ದ ಚೀನಾ
ಭಾರತ-ಪಾಕ್ ಸಮರವನ್ನು ತನ್ನ ಶಸ್ತ್ರಾಸ್ತ್ರಗಳ ಬಲ ಪ್ರಯೋಗಕ್ಕೆ ವೇದಿಕೆಯನ್ನಾಗಿಸಿದ್ದ ಕುತಂತ್ರಿ ಚೀನಾ ಪಾಕಿಸ್ತಾನಕ್ಕೆ ಸಹಾಯ ಹಸ್ತ ನೀಡಿತ್ತುಎನ್ನುವ ವಿಚಾರ ಬೆಳಕಿಗೆ ಬಂದಿದೆ. ರಫೇಲ್ ವಿರುದ್ಧವೂ ಜಾಗತಿಕ ಮಟ್ಟದಲ್ಲಿ ಚೀನಾದಿಂದ ಅಪಪ್ರಚಾರ ಮಾಡಲಾಗಿದೆ ಅಂಶ ಬಯಲಾಗಿದೆ.
ಎಚ್‌ಕ್ಯು 9 -
ನವದೆಹಲಿ: ಏಷ್ಯಾದ ಮೇಲೆ ಪ್ರಭುತ್ವ ಸಾಧಿಸಲು ಹವಣಿಸುತ್ತಿರುವ ಮತ್ತು ವಿಶ್ವದ ದೊಡ್ಡಣ್ಣನಾಗುವ ಕನಸು ಕಾಣುತ್ತಿರುವ ನಮ್ಮ ನೆರೆ ರಾಷ್ಟ್ರ ಚೀನಾ (China) ದಿನೇ ದಿನೆ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತಯಾರಿ, ಪರೀಕ್ಷೆ ಮತ್ತು ಸಂಗ್ರಹದತ್ತ ದಾಪುಗಾಲಿಡುತ್ತಿದೆ. ಇದೀಗ ಇಂತಹ ಚೀನಾದ ಕುತಂತ್ರ ಬುದ್ದಿಯೊಂದು ಹೊರಬಿದ್ದಿದ್ದು, ಇತ್ತೀಚೆಗೆ ನಡೆದ ಭಾರತ-ಪಾಕ್ ಕಿರು ಸಮರದ (Indo-Pak War) ಸಂದರ್ಭದಲ್ಲಿ ತನ್ನ ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಪರೀಕ್ಷಿಸುವ ಮೂಲಕ ಅವಕಾಶವಾದಿತನವನ್ನು ಮೆರೆದ ಘಟನೆಯೊಂದು ವರದಿಯಾಗಿದೆ.
ಈ ಮಾಹಿತಿ ಅಮೆರಿಕದ ದ್ವಿಪಕ್ಷೀಯ ಕಮಿಷನ್‌ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪುನರ್ ಪರಿಶೀಲನಾ ಆಯೋಗದ ವರದಿಯಲ್ಲಿ ಈ ಮಾಹಿತಿ ಉಲ್ಲೇಖವಾಗಿದ್ದು, ಭಾರತ – ಪಾಕ್ ನಡುವಿನ ನಾಲ್ಕುದಿನಗಳ ಸಮರದ ಸಂದರ್ಭದಲ್ಲಿ ಚೀನಾವು ತನ್ನ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಪರೀಕ್ಷೆಗೊಳಪಡಿಸಿ ಅದರ ಕಾರ್ಯಕ್ಷಮತೆಯನ್ನು ಜಾಹೀರುಗೊಳಿಸಿದೆ ಎಂದು ಹೇಳಿದೆ.
ಭಾರತ-ಪಾಕ್ ಸಮರದಲ್ಲಿ ಚೀನಾದ ಎಚ್.ಕ್ಯು-9 ಏರ್ ಡಿಫೆನ್ಸ್ ಸಿಸ್ಟಮ್. ಪಿ.ಎಲ್.-15 ಏರ್ ಟು ಮಿಸೈಲ್ ಗಳು ಮತ್ತು ಜೆ-10 ಫೈಟರ್ ಏರ್ ಕ್ರಾಫ್ಟ್ ಗಳನ್ನು ಮುಕ್ತವಾಗಿ ಬಳಸಲಾಗಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಡ ಹಗಲೇ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ; ಆರೋಪಿ ಸೆರೆ
ಈ ಘರ್ಷಣೆ ವೇಳೆ ತನ್ನ ಡಿಫೆನ್ಸ್ ಸಾಮರ್ಥ್ಯವನ್ನು ರಿಯಲ್ ವರ್ಲ್ಡ್‌ನಲ್ಲಿ ಪರಿಚಯಿಸಿದ ಬಳಿಕ ಚೀನಾ ಕಳೆದ ಜೂನ್‌ನಲ್ಲಿ ತನ್ನ 40 ಜೆ-35 ಫಿಫ್ತ್ ಜನರೇಷನ್ ಫೈಟರ್ ಜೆಟ್, ಕೆ.ಜೆ.-500 ಏರ್ ಕ್ರಾಫ್ಟ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡುವ ಆಫರ್ ನೀಡಿತ್ತು ಎಂಬ ಆಘಾತಕಾರಿ ಅಂಶ ಈ ವರದಿಯಲ್ಲಿ ಉಲ್ಲೇಖಗೊಂಡಿದೆ.
ಭಾರತ-ಪಾಕ್ ಘರ್ಷಣೆಗೆ ಕದನ ವಿರಾಮ ಬಿದ್ದ ಒಂದು ವಾರಗಳ ಬಳಿಕ, ಚೀನಾ ರಾಯಭಾರ ಕಚೇರಿಯು ಈ ಸಮರದಲ್ಲಿ ತನ್ನ ಶಸ್ತ್ರಾಸ್ತ್ರಗಳ ಯಶಸ್ವಿ ಪ್ರಯೋಗದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿತ್ತು ಎಂದೂ ಸಹ ಸಮಿತಿ ವಿಚಾರಣೆ ಮತ್ತು ಸಂಶೋಧನೆ ಮೂಲಕ ಪ್ರಕಟಗೊಳ್ಳುವ ಈ ವರದಿಯಲ್ಲಿ ಹೇಳಲಾಗಿದೆ.
ಕಳೆದ ಮೇಯಲ್ಲಿ ನಡೆದಿದ್ದ ಈ ಸಂಘರ್ಷವನ್ನು ಆ ವರದಿಯಲ್ಲಿ ‘ಪ್ರಚ್ಛನ್ನ ಯುದ್ಧ’ ಎಂದು ಕರೆಯಲಾಗಿದ್ದು, ಚೀನಾ ಈ ಸಮರದಲ್ಲಿ ಕುಮ್ಮಕ್ಕು ನೀಡುವ ಪಾತ್ರವನ್ನು ವಹಿಸಿತ್ತು ಎಂದು ಹೇಳಲಾಗಿದೆ.
ಫ್ರೆಂಚ್ ಗುಪ್ತಚರ ವರದಿಗಳ ಪ್ರಕಾರ ಚೀನಾವು ರಫೇಲ್ ವಿರುದ್ಧ ತಪ್ಪು ಮಾಹಿತಿ ನೀಡುವ ಕ್ಯಾಂಪೇನ್ ನಡೆಸಿತ್ತು ಮತ್ತು ಆ ಮೂಲಕ ಜಗತ್ತಿನಲ್ಲಿ ರಫೇಲ್ ಯುದ್ಧ ವಿಮಾನಗಳ ಮಾರಾಟಕ್ಕೆ ಅಡ್ಡಗಾಲು ಹಾಕಿ ತನ್ನ ಜೆ-35 ಯುದ್ಧ ವಿಮಾನಗಳ ಮಾರಾಟವನ್ನು ಉತ್ತೇಜಿಸಿತ್ತು ಮತ್ತು ಈ ಉದ್ದೇಶಕ್ಕಾಗಿ ಚೀನಾವು ಫೇಕ್ ಸೋಶಿಯಲ್ ಮೀಡಿಯಾ ಅಕೌಂಟ್ ಮೂಲಕ ರಫೇಲ್ ವಿರುದ್ಧ ನೆಗೆಟಿವ್ ಮಾಹಿತಿಗಳನ್ನು ಬಿತ್ತರಿಸುವ ಕೆಲಸವನ್ನು ಮಾಡುತ್ತಿದೆ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದ ಹೊದ ಕುತಂತ್ರಿ ಚೀನಾ, ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಬಹುತೇಕ ಮಾತುಕತೆ ಮುಗಿಸಿದ್ದ ಇಂಡೋನೇಷ್ಯಾವನ್ನು ಮನವೊಲಿಸಿ ರಫೇಲ್ ಖರೀದಿಯಿಂದ ಹಿಂದೆ ಸರಿಯುವಂತೆ ಅಲ್ಲಿನ ಚೀನಾ ರಾಯಭಾರಿ ಕಚೇರಿಯು ಮಾಡಿತ್ತು ಎಂದು ಆ ವರದಿಯಲ್ಲಿ ಹೇಳಲಾಗಿದೆ. ಆದರೆ ಈ ವರದಿಯನ್ನು ಚೀನಾ ಸಂಪೂರ್ಣವಾಗಿ ತಳ್ಳಿ ಹಾಕಿದ್ದು, ಇದೊಂದು ತಪ್ಪು ಮಾಹಿತಿ ಎಂದು ಹೇಳಿಕೊಂಡಿದೆ.