ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಇರಿದಿದ್ದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಇಸ್ರೇಲ್‌ನಲ್ಲಿ ವಿಮಾನ ಅಪಘಾತಕ್ಕೀಡುಮಾಡುವ ಉದ್ದೇಶ ಹೊಂದಿದ್ದ: ಬೆಚ್ಚಿಬೀಳಿಸುವ ಇನ್ನಷ್ಟು ಸಂಚು ಬಯಲು

Flydubai co-pilot: ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಇರಿದಿದ್ದ ಸಹ ಪೈಲಟ್ ಇಸ್ರೇಲ್‌ನಲ್ಲಿ ವಿಮಾನ ಅಪಘಾತಕ್ಕೀಡುಮಾಡುವ ಉದ್ದೇಶ ಹೊಂದಿದ್ದ ಎಂದು ತಿಳಿದುಬಂದಿದೆ. ವರದಿ ಪ್ರಕಾರ, ಈ ಸಹ-ಪೈಲಟ್‌ನನ್ನು ಹಮಾಮ್ ಅಲ್‌ ಹಮ್ಮಾಮಿ ಎಂದು ಗುರುತಿಸಲಾಗಿದೆ. ಒಮಾನ್ ಪ್ರಜೆಯಾಗಿರುವ ಅಲ್‌ ಹಮ್ಮಾಮಿ ತಂದೆ ಒಮಾನ್ ಮೂಲದವರಾಗಿದ್ದು, ತಾಯಿ ಸಿರಿಯಾದವರು. ಯುಎಇನಲ್ಲಿ ಈತ ಜನಿಸಿದ್ದಾನೆ.

ಸಾಂದರ್ಭಿಕ ಚಿತ್ರ

ಮಸ್ಕತ್, ಅ. 3: ಫ್ಲೈದುಬೈ ವಿಮಾನದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ (Smit Machchhar) ಅವರಿಗೆ ಇರಿದಿದ್ದ ಸಹ ಪೈಲಟ್ ಇಸ್ರೇಲ್‌ನಲ್ಲಿ ವಿಮಾನ ಅಪಘಾತಕ್ಕೀಡು ಮಾಡುವ ಉದ್ದೇಶ ಹೊಂದಿದ್ದ ಎಂದು ತಿಳಿದುಬಂದಿದೆ. ದುಬೈಯಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ವಿಮಾನವನ್ನು ಅಪಘಾತಕ್ಕೀಡು ಮಾಡಲು ಪ್ರಯತ್ನಿಸಿ, ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ಮಾಡಿದ್ದ ಫ್ಲೈದುಬೈ ಕೋ-ಪೈಲಟ್‌ನನ್ನು ಒಮಾನ್‌ನಲ್ಲಿ ವಿಮಾನ ಹಾರಿಸುವುದರಿಂದ ನಿಷೇಧಿಸಲಾಗಿತ್ತು ಎಂದು ತಿಳಿದು ಬಂದಿದೆ. ಆತ ಉಗ್ರಗಾಮಿ ವಿಚಾರಧಾರೆಗಳನ್ನು ಅಳವಡಿಸಿಕೊಂಡಿದ್ದಾನೆ ಎಂಬ ಆತಂಕದ ಹಿನ್ನೆಲೆಯಲ್ಲಿ ಆತನ ತಾಯ್ನಾಡು ಒಮಾನ್‌ನಲ್ಲಿ ಆತನಿಗೆ ವಿಮಾನದ ಪೈಲಟ್ ಆಗಿರಲು ಅವಕಾಶ ನೀಡಲಿಲ್ಲ.

ವರದಿ ಪ್ರಕಾರ, ಈ ಸಹ ಪೈಲಟ್‌ನನ್ನು ಹಮಾಮ್ ಅಲ್‌ಹಮ್ಮಾಮಿ ಎಂದು ಗುರುತಿಸಲಾಗಿದೆ. ಒಮಾನ್ ಪ್ರಜೆಯಾಗಿರುವ ಅಲ್‌ ಹಮ್ಮಾಮಿ, ತಂದೆಯು ಒಮಾನ್ ಮೂಲದವರಾಗಿದ್ದು, ತಾಯಿ ಸಿರಿಯಾದವರು. ಯುಎಇನಲ್ಲಿ ಈತ ಜನಿಸಿದ್ದಾನೆ. ವರದಿಗಳ ಪ್ರಕಾರ, ಅಲ್‌ ಹಮ್ಮಾಮಿ ತನ್ನ ಹೆಚ್ಚಿನ ಸಮಯವನ್ನು ಒಮಾನ್‍ನ ಹೊರಗೆ, ವಿಶೇಷವಾಗಿ ಸಿರಿಯಾದಲ್ಲಿ ಕಳೆದಿದ್ದ. ಅಲ್ಲಿ ಆತ ಉಗ್ರಗಾಮಿ ವಿಚಾರಗಳಿಂದ ಪ್ರಭಾವಿತನಾಗಿದ್ದಾನೆ ಎಂದು ಆರೋಪಿಸಲಾಗಿದೆ.

2024ರಲ್ಲಿ ಒಮಾನ್ ಏರ್‌ನಲ್ಲಿ ಕೋ-ಪೈಲಟ್ ತರಬೇತಿ ಪಡೆಯುತ್ತಿದ್ದಾಗ, ಅಲ್‌ ಹಮ್ಮಾಮಿ ಬಳಿ ಉಗ್ರಗಾಮಿ ವಿಚಾರಗಳಿಗೆ ಸಂಬಂಧಿಸಿದ ಕೆಲವು ವಸ್ತುಗಳು ಪತ್ತೆಯಾಗಿದ್ದವು ಎಂದು ವರದಿಯಾಗಿದೆ. ಬಳಿಕ ಆತನಿಗೆ ಒಮಾನ್ ಏರ್‌ನಲ್ಲಿ ಆಡಳಿತಾತ್ಮಕ ಹುದ್ದೆಯಲ್ಲಿ ಕೆಲಸ ಮುಂದುವರಿಸಲು ಅವಕಾಶ ನೀಡಲಾಯಿತು. ಆದರೆ ಭದ್ರತಾ ಅಪಾಯ ಎಂದು ಗುರುತಿಸಿದ ನಂತರ ವಿಮಾನ ಹಾರಿಸುವುದಕ್ಕೆ ನಿಷೇಧ ಹೇರಲಾಗಿತ್ತು.

ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ಮಾಡಿದ್ದ ಕೋ-ಪೈಲಟ್‌ ಗುರುತು ಬಹಿರಂಗ

ಆದರೂ ಅಲ್‌ ಹಮ್ಮಾಮಿಯನ್ನು ದುಬೈ ಮೂಲದ ಫ್ಲೈದುಬೈ ವಿಮಾನಯಾನ ಸಂಸ್ಥೆ ನೇಮಕ ಮಾಡಿಕೊಂಡಿತ್ತು. ಇದರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಸ್ರೇಲ್ ನಡುವೆ ಸಂಪರ್ಕ ಕಲ್ಪಿಸುವ ಸೂಕ್ಷ್ಮ ಮಾರ್ಗದಲ್ಲಿ ವಿಮಾನ ಹಾರಿಸಲು ಆತನಿಗೆ ಅವಕಾಶ ದೊರೆಯಿತು. ಅಲ್ ಹಮ್ಮಾಮಿಯು ಇಸ್ರೇಲ್‌ನಲ್ಲಿ ಫ್ಲೈದುಬೈ ವಿಮಾನವನ್ನು ಅಪಘಾತಕ್ಕೀಡುಮಾಡುವ ಉದ್ದೇಶ ಹೊಂದಿದ್ದ ಎಂದು ವರದಿಗಳು ಹೇಳಿವೆ.

ಸಹ ಪೈಲಟ್ ಅಲ್‌ ಹಮ್ಮಾಮಿ ಫ್ಲೈದುಬೈಯಲ್ಲಿ ಕೇವಲ ಎಂಟು ತಿಂಗಳಿಂದ ಕೆಲಸ ಮಾಡುತ್ತಿದ್ದ. ಅಲ್‌ ಹಮ್ಮಾಮಿ ಎಂಬ ಹೆಸರನ್ನು ಹೊಂದಿರುವ ಲಿಂಕ್ಡ್ಇನ್ ಪ್ರೊಫೈಲ್‌ನಲ್ಲಿ ಆತ ಒಮಾನ್ ಏರ್‌ನಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿದ್ದ ಎಂದು ಕಂಡು ಬಂದಿದೆ. 2025ರ ಫೆಬ್ರವರಿಯಲ್ಲಿ ವಿಮಾನಯಾನ ಸಂಸ್ಥೆಯನ್ನು ತೊರೆದಿದ್ದ ಎಂದು ಹೇಳಲಾಗಿದೆ. ಸದ್ಯ ಲಿಂಕ್ಡ್ ಇನ್ ಪ್ರೊಫೈಲ್ ಅನ್ನು ಅಳಿಸಲಾಗಿದೆ. 2025ರ ಜೂನ್‌ನಲ್ಲಿ ಆತ ರಾಯಲ್ ಏರ್ ಮರೋಕ್‌ಗೆ ಸೇರಿದ. ಈ ವರ್ಷದ ಜನವರಿಯಲ್ಲಿ ಆ ಕೆಲಸವನ್ನು ತ್ಯಜಿಸಿ ಫ್ಲೈದುಬೈಗೆ ಕೆಲಸಕ್ಕೆ ಬಂದಿದ್ದ.

ವರದಿಗಳ ಪ್ರಕಾರ, ಫ್ಲೈದುಬೈ ಘಟನೆ ನಡೆದ ಸುಮಾರು ಒಂಬತ್ತು ಗಂಟೆಗಳ ಅವಧಿಯಲ್ಲಿ ಆತನ ಪ್ರೊಫೈಲ್‌ನಲ್ಲಿ ಎರಡು ಪೋಸ್ಟ್‌ಗಳನ್ನು ಹಾಕಲಾಗಿತ್ತು. ಎರಡೂ ಪೋಸ್ಟ್‌ಗಳು ಉಗ್ರವಾದಕ್ಕೆ ಸಂಬಂಧಿಸಿದ್ದವು ಎಂದು ವರದಿಯಾಗಿದೆ. ಮೊದಲ ಪೋಸ್ಟ್‌ನಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಕಾಕ್‌ಪಿಟ್‌ನಲ್ಲಿನ ಹಲವು ವಿಡಿಯೊ ತುಣುಕುಗಳು ಇದ್ದವು ಎನ್ನಲಾಗಿದೆ. ವಿಡಿಯೊ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಇಸ್ರೇಲಿ ವಿಮಾನಯಾನ ಸಂಸ್ಥೆ ಎಲ್‌ಅಲ್‌ಗೆ ಸೇರಿದ ವಿಮಾನದತ್ತ ಕ್ಯಾಮರಾವನ್ನು ಜೂಮ್ ಮಾಡಿದ್ದಾನೆ ಎಂದು ವರದಿಯಾಗಿದೆ.

ಕ್ಯಾಪ್ಟನ್‌ ಸ್ಮಿತ್ ಮಚ್ಚಾರ್ ಆರೋಗ್ಯ ಸ್ಥಿರ: ನಗುತ್ತ ಮಾತನಾಡುತ್ತಿದ್ದಾರೆ ಎಂದ ಭಾರತದ ರಾಯಭಾರಿ

ವಿಡಿಯೊದ ಕೊನೆಯಲ್ಲಿ, ಒಸಾಮಾ ಬಿನ್ ಲಾಡೆನ್ ಸಾವಿನ ನಂತರ ಅಲ್‌ಖೈದಾವನ್ನು ಮುನ್ನಡೆಸಿದ್ದ ಉಗ್ರ ಅಯ್ಮನ್ ಅಲ್-ಜವಾಹಿರಿ ಹಾಗೂ 2009ರಲ್ಲಿ ಅಮೆರಿಕದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಒಂಬತ್ತು ಮಂದಿಯನ್ನು ಹತ್ಯೆ ಮಾಡಿದ್ದ ಹುಮಾಮ್ ಖಲೀಲ್ ಅಬು-ಮುಲಾಲ್ ಅಲ್-ಬಲಾವಿ ಅವರ ಚಿತ್ರಗಳನ್ನು ತೋರಿಸಲಾಗಿದೆ ಎನ್ನಲಾಗಿದೆ.

ಮತ್ತೊಂದು ಪೋಸ್ಟ್‌ನಲ್ಲಿ ಮೆಕ್ಕಾ, ಮದೀನಾ ಮತ್ತು ಜೆರುಸಲೇಮ್‌ನಲ್ಲಿರುವ ಇಸ್ಲಾಂ ಧರ್ಮದ ಮೂರು ಪವಿತ್ರ ಸ್ಥಳಗಳನ್ನು ತೋರಿಸುವ ಎಐ ಮೂಲಕ ಸೃಷ್ಟಿಸಲಾದ ಚಿತ್ರವಿತ್ತು. ಅದರ ಹಿನ್ನೆಲೆಯಲ್ಲಿದ್ದ ಹಾಡಿನಲ್ಲಿ ಅವಮಾನವನ್ನು ತಿರಸ್ಕರಿಸುವುದು, ಸಾವಿಗೆ ಹೆದರದಿರುವುದು ಮತ್ತು ತಮ್ಮ ಗೌರವವನ್ನು ರಕ್ಷಿಸುವ ಕುರಿತು ಹೇಳಲಾಗಿತ್ತು ಎಂದು ವರದಿಯಾಗಿದೆ. ಇದೀಗ ಅಳಿಸಲಾಗಿರುವ ಅಲ್‌ ಹಮ್ಮಾಮಿಯ ಎಕ್ಸ್ ಖಾತೆಯಲ್ಲಿ, ಆತ ತೀವ್ರ ಧಾರ್ಮಿಕ ಮತ್ತು ಮಹಿಳೆಯರ ಬಗ್ಗೆ ದ್ವೇಷಪೂರಿತ ಮನೋಭಾವ ಹೊಂದಿದ್ದ ವ್ಯಕ್ತಿ ಎಂಬ ರೀತಿಯಲ್ಲಿ ಕಾಣಿಸಿಕೊಂಡಿದ್ದ ಎಂದು ಹೇಳಲಾಗಿದೆ.