ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ಮಾಡಿದ್ದ ಕೋ-ಪೈಲಟ್‌ ಗುರುತು ಬಹಿರಂಗ

Flydubai pilot attack: ಭಾರತೀಯ ಪೈಲಟ್ ಮೇಲೆ ದಾಳಿ ನಡೆಸಿದ್ದ ಸಹ-ಪೈಲಟ್ ಓಮನ್ ಪ್ರಜೆಯಾಗಿದ್ದು, ಆತನ ಹೆಸರು ಹಮಾಮ್ ಅಲ್-ಹಮ್ಮಾಮಿ ಎಂದು ಇಸ್ರೇಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೌದಿ ಅರೇಬಿಯಾದ ಸರ್ಕಾರಿ ಮಾಧ್ಯಮವೂ ಸಹ ಪೈಲಟ್‌ನನ್ನು ಅಲ್-ಹಮ್ಮಾಮಿ ಎಂದು ಆತನ ಗುರುತನ್ನು ಬಹಿರಂಗಪಡಿಸಿದೆ.

ಮಚ್ಚಾರ್ ಮೇಲೆ ದಾಳಿ ಮಾಡಿದ್ದ ಕೋ-ಪೈಲಟ್‌ ಗುರುತು ಬಹಿರಂಗ

ಸಾಂದರ್ಭಿಕ ಚಿತ್ರ -

Priyanka P
Priyanka P Oct 3, 2026 10:48 AM

ಮಸ್ಕತ್, ಅ.3: ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ (Smith Machchhar) ಮೇಲೆ ದಾಳಿ ನಡೆಸಿದ್ದ ಸಹ ಪೈಲಟ್‌ನನ್ನು, ಉಗ್ರಗಾಮಿ ಮನೋಭಾವ ಹೊಂದಿದ್ದಾನೆ ಎಂಬ ಆತಂಕದ ಹಿನ್ನೆಲೆಯಲ್ಲಿ ಕಳೆದ ವರ್ಷ ಓಮನ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಲ್ಲಿನ ಹಿಂದಿನ ಕೆಲಸದಿಂದ ತೆಗೆದುಹಾಕಲಾಗಿತ್ತು ಎನ್ನಲಾಗಿದೆ. ಈ ಸಹ-ಪೈಲಟ್ ಓಮನ್ ಪ್ರಜೆಯಾಗಿದ್ದು, ಆತನ ಹೆಸರು ಹಮಾಮ್ ಅಲ್-ಹಮ್ಮಾಮಿ ಎಂದು ಇಸ್ರೇಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೌದಿ ಅರೇಬಿಯಾದ (Saudi Arabia) ಸರ್ಕಾರಿ ಮಾಧ್ಯಮವೂ ಸಹ ಪೈಲಟ್‌ನನ್ನು ಅಲ್-ಹಮ್ಮಾಮಿ ಎಂದು ಆತನ ಗುರುತನ್ನು ಬಹಿರಂಗಪಡಿಸಿದೆ.

ಅಲ್-ಹಮ್ಮಾಮಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಜನಿಸಿದ್ದು, ಆತನ ತಂದೆ ಓಮನ್‌ ದೇಶದವರಾಗಿದ್ದರೆ, ತಾಯಿ ಸಿರಿಯಾ ಮೂಲದವರು. ಅವರು ತಮ್ಮ ಜೀವನದ ಹಲವು ವರ್ಷಗಳನ್ನು ಯುಎಇಯಲ್ಲಿ ಕಳೆದಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಹಮಾಮ್ ಅಲ್-ಹಮ್ಮಾಮಿ ಎಂಬ ಹೆಸರಿನ ಲಿಂಕ್ಡ್‌ಇನ್ ಪ್ರೊಫೈಲ್‌ ಪ್ರಕಾರ, ಆತ ಓಮನ್ ಏರ್‌ನಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿದ್ದು, 2025ರ ಫೆಬ್ರವರಿಯಲ್ಲಿ ಅಲ್ಲಿಂದ ಹೊರಬಂದಿದ್ದ. ನಂತರ 2025ರ ಜೂನ್‌ನಲ್ಲಿ ರಾಯಲ್ ಏರ್ ಮಾರೋಕ್ ಸಂಸ್ಥೆಗೆ ಸೇರಿ, 2026ರ ಜನವರಿಯಲ್ಲಿ ಅಲ್ಲಿಂದಲೂ ಹೊರಬಂದಿದ್ದ. ಆದರೆ, ಫ್ಲೈದುಬೈಗೆ ಯಾವಾಗ ಸೇರಿದ್ದ ಎಂಬುದು ತಿಳಿದುಬಂದಿಲ್ಲ. ಆದರೀಗ, ಲಿಂಕ್ಡ್-ಇನ್ ಪ್ರೊಫೈಲ್ ಅನ್ನು ಅಳಿಸಲಾಗಿದೆ.

ಫ್ಲೈದುಬೈ ಮೇಲಿನ ದಾಳಿ ಭಯೋತ್ಪಾದಕ ಕೃತ್ಯ ಎಂದು ಮೊದಲ ಬಾರಿ ಒಪ್ಪಿಕೊಂಡ ಯುಎಇ: ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಬಗ್ಗೆ ಅಚ್ಚರಿಯ ಹೇಳಿಕೆ

ಬುಧವಾರ (ಸೆ.20) ನಡೆದ ಘಟನೆಯಲ್ಲಿ ಭಾಗಿಯಾಗಿದ್ದ ಫ್ಲೈದುಬೈ ಪೈಲಟ್‌ ಇದೇ ವ್ಯಕ್ತಿ ಎಂದು ಮೂಲವೊಂದು ದೃಢಪಡಿಸಿದೆ. ಆತನ ತೀವ್ರಗಾಮಿ/ಉಗ್ರಗಾಮಿ ವಿಚಾರಧಾರೆಗಳ ಬಗ್ಗೆ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಆತನನ್ನು ಪೈಲಟ್ ತರಬೇತಿಯಿಂದ ತೆಗೆದುಹಾಕಲಾಗಿತ್ತು. ಬಳಿಕ ಓಮನ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಲ್ಲಿ ಆತನಿಗೆ ಬೇರೆ ಹುದ್ದೆಯನ್ನು ನೀಡಲಾಗಿತ್ತು ಎಂದು ಮಾಧ್ಯಮವೊಂದಕ್ಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಂಕಿತ ವ್ಯಕ್ತಿಯು ಇಸ್ಲಾಮಿಕ್ ಉಗ್ರಗಾಮಿ ವಿಚಾರಧಾರೆಗೆ ಒಳಗಾಗಿರಬಹುದು ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದರು. ಅಲ್-ಹಮ್ಮಾಮಿ ಕೇವಲ ಎಂಟು ತಿಂಗಳಿಂದ ಫ್ಲೈದುಬೈನಲ್ಲಿ ಕೆಲಸ ಮಾಡುತ್ತಿದ್ದ ಎಂದು ಇಸ್ರೇಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತೊಂದು ಮೂಲದ ಪ್ರಕಾರ, ಆರೋಪಿಯಾಗಿರುವ ಸಹ-ಪೈಲಟ್, ಈ ಹಿಂದೆ ರಾಯಲ್ ಏರ್ ಮಾರೋಕ್ ಸಂಸ್ಥೆಯಲ್ಲೂ ಕೆಲಸ ಮಾಡಿದ್ದ ಎನ್ನಲಾಗಿದೆ.

ಈ ಘಟನೆಯು ವಿಮಾನಯಾನ ಕ್ಷೇತ್ರದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡುವಾಗ ಅವರ ಹಿನ್ನೆಲೆ ಪರಿಶೀಲನೆ ಎಷ್ಟು ಮುಖ್ಯ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇನ್ನು ಘಟನೆಯ ಕುರಿತು ತನಿಖೆ ನಡೆಯುತ್ತಿರುವುದರಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಫ್ಲೈದುಬೈ ತಿಳಿಸಿದೆ.