Delhi Bomb Blast: ದೆಹಲಿ ಕಾರ್ ಬಾಂಬ್ ಸ್ಫೋಟ ಪ್ರಕರಣ- ನೋಟಮ್ ಜಾರಿ ಮಾಡಿದ ಪಾಕಿಸ್ತಾನ...!
Pakistan Issues Notam: ದೆಹಲಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿ ಭದ್ರತೆಯನ್ನು ಜಾರಿಗೊಳಿಸಲಾಗಿದ್ದು, ರಾಷ್ಟ್ರದ ಜನನಿಬಿಡ ಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿತ್ತು. ಇದೀಗ ಸ್ಪೋಟ ಪ್ರಕರಣದಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ದಾಳಿಯ ಬೆನ್ನಲ್ಲೇ ತನ್ನ ರಾಷ್ತ್ರದಲ್ಲಿ ನೋಟಮ್ ಜಾರಿಗೊಳಿಸಿದೆ.
ದೆಹಲಿ ಬಾಂಬ್ ಸ್ಫೋಟದ ಬೆನ್ನಲ್ಲೇ ಪಾಕಿಸ್ತಾನ ಹೈ ಅಲರ್ಟ್ ಘೋಷಿಸಿದೆ -
ನವದೆಹಲಿ: ಭಾರತ (India) ಹಾಗೂ ಪಾಕಿಸ್ತಾನ (Pakistan) ಸದ್ಯ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಪಹಲ್ಗಾಮ್ ಭಯೋತ್ಪಾದಕ(Pahalgam Terrorist) ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಭಾರತ ರಾಷ್ಟ್ರವ್ಯಾಪಿ ನಾಗರಿಕ ರಕ್ಷಣಾ ಮಾಕ್ ಡ್ರಿಲ್‌ಗಳನ್ನು ಆಯೋಜಿಸಿತ್ತು. ಇದೀಗ ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ಸ್ಪೋಟ ಪ್ರಕರಣದಿಂದಾಗಿ ಮತ್ತೆ ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಫೋಟದಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ಈ ದುಷ್ಕೃತ್ಯದಲ್ಲಿ, 20ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ಪಾಕಿಸ್ತಾನ ನೋಟಮ್(NOTAM (Notice to Airmen) ಜಾರಿ ಮಾಡಿದ್ದು, ಪಾಕಿಸ್ತಾನದಲ್ಲಿ ಹೈಅಲರ್ಟ್ ಘೋಷಣೆಯನ್ನು ಮಾಡಲಾಗಿದೆ. ವಾಯುಪಡೆ ಮತ್ತು ನೌಕಾಪಡೆಗಳಿಗೆ ಸನ್ನದ್ದ ಸ್ಥಿತಿಯಲ್ಲಿ ಇರುವಂತೆ ಸೂಚಿಸಿದ್ದು, ವಾಯುಪಡೆಗೆ ರೆಡ್ ಹೈಅಲರ್ಟ್ ಇರುವಂತೆ ಪಾಕಿಸ್ತಾನ ಆದೇಶಿಸಿದೆ. ಬಿಗಿ ಭದ್ರತೆಯನ್ನು ಗಡಿಭಾಗದ ಪ್ರದೇಶಗಳಲ್ಲಿ ಹೆಚ್ಚಿಸಲಾಗಿದೆ ಎಂದು ವರದಿಯಾಗಿದ್ದು, ಪಾಹಲಗಾಮ್ ಭಯೋತ್ಪಾದಕ ದಾಳಿ ನಡೆಸಿ ಭಾರತದಿಂದ ಪೆಟ್ಟು ತಿಂದಿದ್ದ ಪಾಕಿಸ್ತಾನ ಹೆದರಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಮೂಲಗಳ ಪ್ರಕಾರ, ಪಾಕಿಸ್ತಾನದ ಸೇನಾಪಡೆಗಳು, ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆ ಪ್ರದೇಶಗಳಿಗೆ ಹೈ ಅಲರ್ಟ್ ಘೋಷಿಸಲಾಗಿದ್ದು, ಪಾಕಿಸ್ತಾನದ ಸೆಂಟ್ರಲ್ ಕಮಾಂಡ್ ಎಲ್ಲ ಸೇನಾಪಡೆಗಳಿಗೆ “ಮುಂದೆ ನಡೆಯುವ ಬೆಳವಣಿಗೆಗಳಿಗೆ ಸಿದ್ಧರಾಗಿ” ಎಂಬ ಆದೇಶವನ್ನು ನೀಡಿದೆ. ನವೆಂಬರ್ 11ರಿಂದ 12ರವರೆಗೆ NOTAM ಜಾರಿ ಇರಲಿದ್ದು, ವಾಯು ಸಂಚಾರದ ಮೇಲೆ ತಾತ್ಕಾಲಿಕ ನಿರ್ಬಂಧಗಳು ಮತ್ತು ಹೆಚ್ಚುವರಿ ಭದ್ರತಾ ಪ್ರೋಟೋಕಾಲ್‌ಗಳು ಚಾಲ್ತಿಯಲಿರಲಿದೆ. ಜೊತೆಗೆ ಪಾಕಿಸ್ತಾನದ ವಾಯು ರಕ್ಷಣಾ ಪಡೆಗಳು ಈಗ ಗಡಿಯ ಮೇಲ್ವಿಚಾರಣೆಯನ್ನು ತೀವ್ರಗೊಳಿಸಿದ್ದು, ಭಾರತ–ಪಾಕಿಸ್ತಾನ ಗಡಿ ಪ್ರದೇಶದ ಮೇಲೆ ಕಣ್ಣಿಟ್ಟಿವೆ.
ಈ ಸುದ್ದಿಯನ್ನು ಓದಿ:Viral Video: ಹೆದ್ದಾರಿಯಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಮಹಿಳೆ; ವಿಡಿಯೊ ವೈರಲ್
ಏನಿದು ನೋಟಮ್ (NOTAM)?
ನೋಟಮ್-NOTAM ಅಂದರೆ “ವಿಮಾನಚಾಲಕರಿಗೆ ಸೂಚನೆ” (Notice to Airmen) ಎಂದಾಗಿದೆ. ಇದು ವಿಮಾನಯಾನಕ್ಕೆ ಸಂಬಂಧಿಸಿದಂತೆ ವಾಯುಪ್ರದೇಶದ ಬಳಕೆಯಲ್ಲಿ ಆಗುವ ತಾತ್ಕಾಲಿಕ ಬದಲಾವಣೆಗಳು, ಅಪಾಯಗಳು ಅಥವಾ ನಿರ್ಬಂಧಗಳ ಕುರಿತು ನೀಡಲಾಗುವ ಅಧಿಕೃತ ಅಧಿಸೂಚನೆ ಆಗಿದ್ದು, ಈ ವೇಳೆ, ವಿಮಾನ ನಿಲ್ದಾಣಗಳ ಕಾರ್ಯಾಚರಣೆಯ ತಾತ್ಕಾಲಿಕ ಬದಲಾವಣೆಗಳು, ರನ್‌ವೇ ಮುಚ್ಚುವಿಕೆಗಳು, ಹೊಸ ನಿರ್ಬಂಧಿತ ವಾಯುಪ್ರದೇಶಗಳ ಜಾರಿ ಅಥವಾ ಇತರ ಪ್ರಮುಖ ಮಾಹಿತಿ ಕುರಿತು ಪೈಲಟ್‌ಗಳು ಮತ್ತು ವಾಯು ಸಂಚಾರ ನಿಯಂತ್ರಕರಿಗೆ ಮುಂಚಿತವಾಗಿ ಎಚ್ಚರಿಕೆ ನೀಡುವುದೇ ಈ ನೋಟಮ್‌ನ ಉದ್ದೇಶ. ಇದರ ಮೂಲಕ ವಿಮಾನಯಾನ ಕಾರ್ಯಾಚರಣೆಗಳ ಸುರಕ್ಷತೆ ಮತ್ತು ಸಮನ್ವಯತೆ ಖಚಿತವಾಗುತ್ತದೆ.
ಹಾಗಾಗಿ, ಈ ಸಂದರ್ಭದಲ್ಲಿ, ನೋಟಮ್‌ಗಳ ಮೂಲಕ ವಾಯು ವ್ಯಾಯಾಮಗಳ ಸಮಯದಲ್ಲಿ ಸಂಭವನೀಯ ವಾಯುಪ್ರದೇಶ ನಿರ್ಬಂಧಗಳು ಹಾಗೂ ಸಾಮಾನ್ಯ ಹಾರಾಟದ ಕಾರ್ಯವಿಧಾನಗಳಲ್ಲಿ ಬರುವ ಬದಲಾವಣೆಗಳನ್ನು ತಿಳಿಸಲಾಗಿದೆ. ಇನ್ನು 1971ರ ಯುದ್ಧದಲ್ಲಿಯೂ ಇದೇ ರೀತಿಯ ಯುದ್ಧಾಭ್ಯಾಸವನ್ನು ಭಾರತೀಯ ವಾಯುಸೇನೆಯು ನಡೆಸಿತ್ತು.
ಇನ್ನು ಈ ದಾಳಿಗೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ದೆಹಲಿ ಸ್ಫೋಟ ಪ್ರಕರಣದಲ್ಲಿ ಸೂಸೈಡ್ ಬಾಂಬರ್ ಎಂದು ಶಂಕಿಸಲಾಗಿರುವ ಡಾ. ಉಮರ್ ಮೊಹಮ್ಮದ್‌ನ ಮೊದಲ ಚಿತ್ರ ಈಗ ಲಭ್ಯವಾಗಿದೆ. ಸೋಮವಾರ ಸಂಜೆ ಕೆಂಪು ಕೋಟೆ ಬಳಿ ಸ್ಫೋಟಗೊಂಡ ಬಿಳಿ ಬಣ್ಣದ ಹ್ಯುಂಡೈ ಐ20 ಕಾರಿನ ಮಾಲೀಕ ಉಮರ್ ಆಗಿದ್ದು, ಆಲ್ ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.