ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇರಾನ್ ವಿರುದ್ಧದ ಯುದ್ಧದಿಂದ ಅಮೆರಿಕಗೆ ಭಾರಿ ಆರ್ಥಿಕ ಹೊರೆ; ಒಂದು ಸೆಕೆಂಡಿಗೆ 9.8 ಲಕ್ಷ ರುಪಾಯಿ, ದಿನಕ್ಕೆ 8,455 ಕೋಟಿ ರುಪಾಯಿ ವೆಚ್ಚ!

America-Iran war: ಇರಾನ್ ವಿರುದ್ಧದ ಯುದ್ಧಕ್ಕೆ ಅಮೆರಿಕ ಪ್ರತಿ ಸೆಕೆಂಡಿಗೆ 10,300 ಡಾಲರ್‌ (ಸುಮಾರು 9.8 ಲಕ್ಷ ರುಪಾಯಿ) ಖರ್ಚು ಮಾಡುತ್ತಿದೆ ಎಂದು ತಿಳಿದು ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ, ಅಮೆರಿಕವು ಯುದ್ಧಕ್ಕಾಗಿ ದಿನಕ್ಕೆ ಸರಿಸುಮಾರು 890 ಮಿಲಿಯನ್ ಡಾಲರ್‌ (ಸುಮಾರು 8,455 ಕೋಟಿ ರುಪಾಯಿ) ಖರ್ಚು ಮಾಡುತ್ತದೆ ಎಂದು ಅಂದಾಜಿಸಲಾಗಿದೆ.

ಇರಾನ್‌ನಲ್ಲಿ ಅಮೆರಿಕದಿಂದ ಬಾಂಬ್‌ ದಾಳಿ

ಟೆಹರಾನ್, ಮಾ. 31: ಇರಾನ್ ವಿರುದ್ಧದ (Iran War) ಯುದ್ಧದಲ್ಲಿ ಅಮೆರಿಕ ಪ್ರತಿ ಸೆಕೆಂಡಿಗೆ 10,300 ಡಾಲರ್‌ (ಸುಮಾರು 9.8 ಲಕ್ಷ ರುಪಾಯಿ) ಖರ್ಚು ಮಾಡುತ್ತಿದೆ ಎಂದು ತಿಳಿದುಬಂದಿದೆ. ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್‌ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (SIPRI) ದತ್ತಾಂಶದ ಪ್ರಕಾರ, ಈಗ 31ನೇ ದಿನದ ಅಮೆರಿಕ-ಇರಾನ್‌ ಯುದ್ಧವು (US-Israel war) ಅಮೆರಿಕದ ತೆರಿಗೆದಾರರಿಗೆ 27.68 ಬಿಲಿಯನ್ ಡಾಲರ್‌ (ಸುಮಾರು 2.63 ಲಕ್ಷ ಕೋಟಿ ರುಪಾಯಿ) ನಷ್ಟವನ್ನುಂಟು ಮಾಡಿದೆ.

ಫೆಬ್ರವರಿ 28ರಂದು ಪ್ರಾರಂಭವಾದ ಅಪ್ರಚೋದಿತ ಯುದ್ಧವು ಕೊನೆಗೊಳ್ಳುವ ಯಾವುದೇ ಲಕ್ಷಣಗಳನ್ನು ತೋರಿಸದ ಕಾರಣ ನಷ್ಟದ ಸಂಖ್ಯೆ ಏರುತ್ತಲೇ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ, ಅಮೆರಿಕವು ಯುದ್ಧಕ್ಕಾಗಿ ದಿನಕ್ಕೆ ಸರಿಸುಮಾರು $ 890 ಮಿಲಿಯನ್ (ಸುಮಾರು 8,455 ಕೋಟಿ ರುಪಾಯಿ) ಖರ್ಚು ಮಾಡುತ್ತದೆ ಎಂದು ಅಂದಾಜಿಸಲಾಗಿದೆ. ಈ ದೈನಂದಿನ ವೆಚ್ಚವು ಯುದ್ಧಸಾಮಗ್ರಿಗಳು, ವಾಯು ಕಾರ್ಯಾಚರಣೆಗಳು, ನೌಕಾ ನಿಯೋಜನೆಗಳು, ಕ್ಷಿಪಣಿ ರಕ್ಷಣೆ, ಗುಪ್ತಚರ ಮತ್ತು ಲಾಜಿಸ್ಟಿಕ್ಸ್ ಅನ್ನು ಒಳಗೊಂಡಿದೆ ಎಂದು SIPRI ವರದಿ ಬಹಿರಂಗಪಡಿಸಿದೆ.

ಹಣ ಎಲ್ಲಿಗೆ ಹೋಗುತ್ತಿದೆ?

  • ಯುದ್ಧ ಸಾಮಗ್ರಿಗಳು ಮತ್ತು ಕ್ಷಿಪಣಿಗಳು ಅತಿ ದೊಡ್ಡ ಪಾಲನ್ನು ಹೊಂದಿದ್ದು, ದಿನಕ್ಕೆ ಸರಿಸುಮಾರು 320 ಮಿಲಿಯನ್ ಡಾಲರ್‌ (ಸುಮಾರು 3,040 ಕೋಟಿ ರುಪಾಯಿ) ಅಥವಾ ಒಟ್ಟು ಮೊತ್ತದ ಶೇ. 36ರಷ್ಟು ವೆಚ್ಚವಾಗುತ್ತದೆ. ಇದರಲ್ಲಿ ಟೊಮಾಹಾಕ್ ಕ್ರೂಸ್ ಕ್ಷಿಪಣಿಗಳು, JDAM ಬಾಂಬ್‌ಗಳು ಮತ್ತು ಇತರ ನಿಖರ-ನಿರ್ದೇಶಿತ ಯುದ್ಧಸಾಮಗ್ರಿಗಳು ಸೇರಿವೆ.
  • ವಾಯು ಕಾರ್ಯಾಚರಣೆಗೆ ದಿನಕ್ಕೆ 245 ಮಿಲಿಯನ್ ಡಾಲರ್‌ (ಸುಮಾರು 2,327.5 ಕೋಟಿ ರುಪಾಯಿ) ವೆಚ್ಚವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದು ದೈನಂದಿನ ಖರ್ಚಿನ ಶೇ. 27.5ರಷ್ಟು ಪಾಲು ಹೊಂದಿದೆ. ಈ ವೆಚ್ಚಗಳಲ್ಲಿ ಯುದ್ಧ ವಿಮಾನಗಳ ಹಾರಾಟಗಳು, ಬಾಂಬರ್ ದಾಳಿ ಕಾರ್ಯಾಚರಣೆಗಳು, ಗಗನದಲ್ಲಿ ಇಂಧನ ತುಂಬುವ ಮಿಷನ್‌ಗಳು ಮತ್ತು ರಹಸ್ಯ ಮಾಹಿತಿ ಸಂಗ್ರಹಣಾ ಕಾರ್ಯಾಚರಣೆಗಳು ಸೇರಿವೆ.
  • ನೌಕಾ ಕಾರ್ಯಾಚರಣೆಗಳು ದಿನಕ್ಕೆ ಸುಮಾರು 155 ಮಿಲಿಯನ್ ಡಾಲರ್‌ (ಸುಮಾರು 1,472.5 ಕೋಟಿ ರುಪಾಯಿ) ವೆಚ್ಚವಾಗುತ್ತವೆ. ಇದರಲ್ಲಿ ಕ್ಯಾರಿಯರ್ ಸ್ಟ್ರೈಕ್ ಗುಂಪುಗಳು, ವಿಧ್ವಂಸಕ ನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳು ಸೇರಿವೆ.
  • ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಾದ THAAD, ಪೇಟ್ರಿಯಾಟ್ ಬ್ಯಾಟರಿಗಳು ಮತ್ತು ಏಜಿಸ್ ಬಿಎಂಡಿ ಪ್ರತಿಬಂಧಕಗಳಿಗೆ ದಿನಕ್ಕೆ ಸುಮಾರು 95 ಮಿಲಿಯನ್ ಡಾಲರ್‌ (902.5 ಕೋಟಿ ರುಪಾಯಿ). ಇದು ದೈನಂದಿನ ಖರ್ಚಿನ ಶೇ. 10.7ರಷ್ಟು.
  • ಗುಪ್ತಚರ ಮತ್ತು ಸೈಬರ್ ಕಾರ್ಯಾಚರಣೆಗಳಿಗೆ ದಿನಕ್ಕೆ ಸರಿಸುಮಾರು 45 ಮಿಲಿಯನ್ ಡಾಲರ್‌ (ಸುಮಾರು 427.5 ಕೋಟಿ ರುಪಾಯಿ) ವೆಚ್ಚ.
  • ಇದರಲ್ಲಿ ಐಎಸ್ಆರ್ ಪ್ಲಾಟ್‌ಫಾರ್ಮ್‌ಗಳು, ಉಪಗ್ರಹ ಚಿತ್ರಣ ಮತ್ತು ಸೈಬರ್ ಕಾರ್ಯಾಚರಣೆಗಳು ಸೇರಿವೆ.
  • ಸಿಬ್ಬಂದಿ ಮತ್ತು ಲಾಜಿಸ್ಟಿಕ್ಸ್‌ಗೆ ದಿನಕ್ಕೆ ಸುಮಾರು 30 ಮಿಲಿಯನ್ ಡಾಲರ್‌ (ಸುಮಾರು 285 ಕೋಟಿ ರುಪಾಯಿ) ವೆಚ್ಚವಾಗುತ್ತದೆ.

ಅಮೆರಿಕದಿಂದ 900 ಕೆಜಿ ಬಂಕರ್ ಬಸ್ಟರ್ ಬಾಂಬ್ ದಾಳಿ, ವಿಡಿಯೋ ಹಂಚಿಕೊಂಡ ಟ್ರಂಪ್

ಟ್ರಂಪ್ ಅರಬ್ ದೇಶಗಳಿಂದ ಹಣ ಕೇಳಬಹುದಾ?

ಯುದ್ಧದ ವೆಚ್ಚವನ್ನು ಭರಿಸುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಅರಬ್ ರಾಷ್ಟ್ರಗಳನ್ನು ಕೇಳಬಹುದು ಎಂದು ಶ್ವೇತಭವನ ಹೇಳಿದೆ. 1990ರ ಕೊಲ್ಲಿ ಯುದ್ಧದ ಸಮಯದಲ್ಲಿ, ಜರ್ಮನಿ ಮತ್ತು ಜಪಾನ್ ಸೇರಿದಂತೆ ಪ್ರದೇಶದ ದೇಶಗಳು ಮತ್ತು ಒಕ್ಕೂಟದ ಸದಸ್ಯರು ಅಮೆರಿಕದ ಮಿಲಿಟರಿ ವೆಚ್ಚವನ್ನು ಸರಿದೂಗಿಸಲು ಒಟ್ಟಾಗಿ 54 ಬಿಲಿಯನ್ ಡಾಲರ್‌ (ಇಂದು 134 ಬಿಲಿಯನ್ ಡಾಲರ್‌) ಕೊಡುಗೆ ನೀಡಿದ್ದರು. ಆದರೆ ಈ ಬಾರಿ, ಅಮೆರಿಕ ಮತ್ತು ಇಸ್ರೇಲ್ ಮಿತ್ರರಾಷ್ಟ್ರಗಳು ಅಥವಾ ಪ್ರಾದೇಶಿಕ ಪಾಲುದಾರರನ್ನು ಒಳಗೊಳ್ಳದೆ ಇರಾನ್ ವಿರುದ್ಧ ಏಕಪಕ್ಷೀಯ ಕ್ರಮ ಕೈಗೊಂಡಿವೆ.