ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಯನ್ನು (Russian Oil Imports) ನಿಲ್ಲಿಸದಿದ್ದರೆ ಭಾರತವು (India) ಬೃಹತ್ ಸುಂಕಗಳನ್ನು (US tariffs) ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump), ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ತಮಗೆ ವೈಯಕ್ತಿಕವಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಈ ಕುರಿತು ಬುಧವಾರ ಅವರು ಓವಲ್ ಕಚೇರಿಯಲ್ಲಿ ಹೇಳಿಕೆ ನೀಡಿರುವ ಅವರು ಎಲ್ಲಿಯವರೆಗೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುತ್ತಾರೋ ಅಲ್ಲಿಯವರೆಗೆ ಭಾರಿ ಸುಂಕಗಳನ್ನು ಎದುರಿಸುತ್ತಲೇ ಇರಬೇಕು ಎಂದು ಹೇಳಿದರು.
ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಪ್ರಧಾನಿ ಮೋದಿ ನನಗೆ ಹೇಳಿದ್ದಾರೆ. ತಾನು ರಷ್ಯಾದೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಅವರು ಅದನ್ನು ಮಾಡುತ್ತಲೇ ಇದ್ದಾರೆ. ಇದರಿಂದ ಅವರು ಬೃಹತ್ ಸುಂಕಗಳನ್ನು ಪಾವತಿಸುತ್ತಿರುತ್ತಾರೆ ಎಂದು ಹೇಳಿದರು.
ಪ್ರಧಾನಿ ಮೋದಿಯೊಂದಿಗೆ ಟ್ರಂಪ್ ಇತ್ತೀಚೆಗೆ ಯಾವುದೇ ಸಂಭಾಷಣೆ ನಡೆಸಿಲ್ಲ ಎನ್ನುವ ಕುರಿತು ಭಾರತ ಸರ್ಕಾರದ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, ಅವರು ಹಾಗೆ ಹೇಳುತ್ತಲೇ ಇದ್ದರೆ ಹೆಚ್ಚಿನ ಸುಂಕಗಳನ್ನು ಪಾವತಿಸುವುದನ್ನು ಮುಂದುವರಿಸುತ್ತಾರೆ. ಅವರು ಹಾಗೆ ಮಾಡಲು ಬಯಸುವುದಿಲ್ಲ. ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ. ಅದು ಒಂದು ದೊಡ್ಡ ಹೆಜ್ಜೆ ಎಂದರು.
ಭಾರತ ಮತ್ತು ರಷ್ಯಾ ನಡುವಿನ ಇಂಧನ ವ್ಯಾಪಾರ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಪ್ರತಿಪಾದಿಸಿರುವ ಅಮೆರಿಕ ಅಧ್ಯಕ್ಷರು, ಬದಲಾವಣೆಯು ತಕ್ಷಣವೇ ಸಂಭವಿಸುವುದಿಲ್ಲ. ಶೀಘ್ರದಲ್ಲೇ ಸಂಭವಿಸುತ್ತದೆ ಎಂದು ಹೇಳಿದರು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗಿನ ಊಟದ ಸಮಯದಲ್ಲೂ ಟ್ರಂಪ್ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು.
ಮೋದಿ ಮತ್ತು ಟ್ರಂಪ್ ನಡುವೆ ಯಾವುದೇ ಮಾತುಕತೆ ನಡೆದಿಲ್ಲ
ಪ್ರಧಾನಿ ನರೇಂದ್ರ ಮೋದಿ ಭಾರತವು ರಷ್ಯಾದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಕೆಲವೇ ಗಂಟೆಗಳ ಬಳಿಕ ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ತನ್ನ ಇಂಧನ ಮೂಲವನ್ನು ವೈವಿಧ್ಯಗೊಳಿಸುವತ್ತ ಗಮನಹರಿಸಲಾಗಿದೆ ಎಂದು ನವದೆಹಲಿ ಸ್ಪಷ್ಟಪಡಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ಇಬ್ಬರು ನಾಯಕರ ನಡುವಿನ ಇತ್ತೀಚೆಗೆ ಯಾವುದೇ ಫೋನ್ ಸಂಭಾಷಣೆ ನಡೆದಿಲ್ಲ. ಜಾಗತಿಕ ಇಂಧನ ಮಾರುಕಟ್ಟೆಯ ನಡುವೆ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ಅಗತ್ಯವಿದ್ದು, ಇದಕ್ಕಾಗಿ ಭಾರತದ ತೈಲ ಆಮದುಗಳನ್ನು ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Fire on Indigo flight: ವಿಮಾನದಲ್ಲಿ ಪವರ್ ಬ್ಯಾಂಕ್ ಗೆ ಬೆಂಕಿ- ಪ್ರಯಾಣಿಕರು ಪಾರು
ಸ್ಥಿರ ಇಂಧನ ಬೆಲೆ ಮತ್ತು ಸುರಕ್ಷಿತ ಪೂರೈಕೆಗಳನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಇಂಧನ ನೀತಿಯ ಪ್ರಮುಖ ಗುರಿಗಳಾಗಿವೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.