ನವದೆಹಲಿ: ರಷ್ಯಾ( Russia), ಚೀನಾ(China), ಅಮೆರಿಕ(US) ಸೇರಿದಂತೆ ಹಲವು ದೇಶಗಳು ದಿನೇ ದಿನೆ ಹೆಚ್ಚು ಆಕ್ರಮಣಕಾರಿ ಹಾಗೂ ಅತಿರಾಷ್ಟ್ರೀಯತೆಯ ನಿಲುವು ತಾಳುತ್ತಿರುವ ಹಿನ್ನೆಲೆ ‘ಡೂಮ್ಸ್‌ಡೇ ಕ್ಲಾಕ್ʼ (Doomsday Clock) ಅನ್ನು ಮಧ್ಯರಾತ್ರಿಗೆ ಹಿಂದೆಂದಿಗಿಂತಲೂ ಹತ್ತಿರಕ್ಕೆ ಸರಿಸಲಾಗಿದೆ ಎಂದು ಮಂಗಳವಾರ ವಿಜ್ಞಾನಾಧಾರಿತ ಹೋರಾಟ ಸಂಘಟನೆಯೊಂದು ತಿಳಿಸಿದೆ. ಈ ಬದಲಾವಣೆಯು ಭೂಮಿಯೂ ವಿನಾಶಕ್ಕೆ ಅತ್ಯಂತ ಸಮೀಪದಲ್ಲಿದೆ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.
ಮಾನವ ಕುಲ ಎದುರಿಸುತ್ತಿರುವ ಅಪಾಯಗಳನ್ನು ಪ್ರತೀಕವಾಗಿ ತೋರಿಸುವ ಈ ಗಡಿಯಾರವನ್ನು, ಮಾನವರು ಪ್ರಪಂಚವನ್ನು ನಾಶ ಮಾಡುವ ಹಂತಕ್ಕೆ ಎಷ್ಟು ಹತ್ತಿರವಿದ್ದಾರೆ ಎಂಬ ಅಂದಾಜಿನ ಆಧಾರದಲ್ಲಿ ನವೀಕರಿಸಲಾಗುತ್ತದೆ. ಈ ಗಡಿಯಾರದಲ್ಲಿ ಮಧ್ಯರಾತ್ರಿ ಆ ಅಂತಿಮ ಹಂತವನ್ನು ಸೂಚಿಸುತ್ತದೆ. ಪ್ರಸ್ತುತ ಸಮಯವನ್ನು ಮಧ್ಯರಾತ್ರಿಗೆ 85 ಸೆಕೆಂಡುಗಳಿಗೆ ಸರಿಸಲಾಗಿದ್ದು, ಇದು ಮಧ್ಯರಾತ್ರಿಗೆ ಹತ್ತಿರದ ಸಮಯದ ಹಿಂದಿನ ದಾಖಲೆಯಾಗಿದ್ದ 89 ಸೆಕೆಂಡುಗಳಿಂದ ಕಡಿಮೆಯಾಗಿದೆ.
ಅಣು ಯುದ್ಧದ ಅಪಾಯ, ಹವಾಮಾನ ವೈಪರಿತ್ಯ, ಜೈವಿಕ ತಂತ್ರಜ್ಞಾನದ ದುರುಪಯೋಗ ಸಾಧ್ಯತೆ ಹಾಗೂ ನಿಯಂತ್ರಣಗಳಿಲ್ಲದೆ ಹೆಚ್ಚುತ್ತಿರುವ AI ಬಳಕೆಯನ್ನು ಪ್ರಮುಖ ಅಪಾಯಗಳೆಂದು ವಿಜ್ಞಾನಿಗಳು ತಮ್ಮ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಮಾನವಕುಲ ವಿನಾಶಕ್ಕೆ ಎಷ್ಟು ಸಮೀಪದಲ್ಲಿದೆ ಎಂಬುದನ್ನು ಸೂಚಿಸುವ ಈ ಗಡಿಯಾರವು ಕಳೆದ ವರ್ಷ ಮಧ್ಯರಾತ್ರಿಗೆ 89 ಸೆಕೆಂಡುಗಳಾಗಿತ್ತು.
ಹಿಮದ ಕಣಿವೆಯ ನಡುವೆ ಹಾದು ಹೋದ ವಂದೇ ಭಾರತ್: ಕಾಶ್ಮೀರದ ಎದುರು ಸ್ವಿಟ್ಜರ್ಲೆಂಡ್ ಶೂನ್ಯ ಎಂದ ನೆಟ್ಟಿಗರು
ಹೋರಾಟ ಸಂಘಟನೆಯ ಪ್ರಕಾರ, ಆಳವಾದ ಮಾತುಕತೆಗಳ ಮೂಲಕ ಏರ್ಪಟ್ಟ ಜಾಗತಿಕ ಒಪ್ಪಂದಗಳು ಕುಸಿಯುತ್ತಿದ್ದು, ಬಲಿಷ್ಠ ರಾಷ್ಟ್ರವಾಗಲು ಸ್ಪರ್ಧೆಗಳು ಏರ್ಪಡುತ್ತಿವೆ. ಇದರಿಂದ ಅಪಾಯಗಳನ್ನು ಕಡಿಮೆ ಮಾಡಲು ಅಗತ್ಯವಿರುವ ಅಂತಾರಾಷ್ಟ್ರೀಯ ಸಹಕಾರವನ್ನು ಇದು ದುರ್ಬಲವಾಗುತ್ತಿದೆ.
ಅಣ್ವಸ್ತ್ರ ಹೊಂದಿರುವ ದೇಶಗಳ ನಡುವಿನ ಸಂಘರ್ಷಗಳು ಉಲ್ಬಣಗೊಳ್ಳುವ ಸಾಧ್ಯತೆ ಕುರಿತು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರಷ್ಯಾ–ಉಕ್ರೇನ್ ಯುದ್ಧ, ಇತ್ತೀಚಿಗಿನ ಭಾರತ–ಪಾಕಿಸ್ತಾನ ಸಂಘರ್ಷ ಹಾಗೂ ಅಮೆರಿಕ ಮತ್ತು ಇಸ್ರೇಲ್ ದಾಳಿಗಳೇ ಪ್ರಮುಖ ಉದಾಹರಣೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
“ವಿಶ್ವವು ‘ನಮ್ ವಿರುದ್ಧ ಅವರು’ ಎಂಬ ಶೂನ್ಯದ ದೃಷ್ಟಿಕೋನಕ್ಕೆ ವಿಭಜಿತವಾದರೆ, ಎಲ್ಲರೂ ಸೋಲುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಅಂತಾರಾಷ್ಟ್ರೀಯ ನಂಬಿಕೆ ಮತ್ತು ಸಹಕಾರ ಅತ್ಯಗತ್ಯ” ಎಂದು ಸಂಘಟನೆಯ ವಿಜ್ಞಾನ ಮತ್ತು ಭದ್ರತಾ ಮಂಡಳಿಯ ಅಧ್ಯಕ್ಷ ಡೇನಿಯಲ್ ಹೋಲ್ಜ್ ಹೇಳಿದ್ದಾರೆ.
ಜಾಗತಿಕ ತಾಪಮಾನ ಏರಿಕೆಗೆ ಸಂಬಂಧಿಸಿದ ಬರ, ಉಷ್ಣ ಅಲೆಗಳು ಹಾಗೂ ಪ್ರವಾಹಗಳನ್ನು ಎದುರಿಸಲು ಒಪ್ಪಂದಗಳನ್ನು ಮಾಡಿಕೊಳ್ಳುವಲ್ಲಿ ದೇಶಗಳು ವಿಫಲವಾಗಿವೆ. ಇಂಧನಗಳಿಗೆ ಉತ್ತೇಜನ ನೀಡಿ ನವೀಕರಿಸಬಹುದಾದ ಶಕ್ತಿ ಉತ್ಪಾದನೆಯನ್ನು ಕುಗ್ಗಿಸುವ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನಗಳನ್ನು ವಿಶೇಷವಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
1947ರಿಂದ ಈ ಸಂಘಟನೆ, ಮಾನವಕುಲ ತನ್ನದೇ ನಾಶಕ್ಕೆ ಕಾರಣವಾಗುವ ಸಾಧ್ಯತೆಯನ್ನು ಸೂಚಿಸಲು ಈ ಕ್ಲಾಕ್ ಸಂಕೇತವನ್ನು ಬಳಸಿಕೊಂಡಿದೆ. ಶೀತಲ ಯುದ್ಧದ ಅಂತ್ಯದಲ್ಲಿ ಇದು ಮಧ್ಯರಾತ್ರಿಗೆ 17 ನಿಮಿಷಗಳಷ್ಟು ದೂರದಲ್ಲಿತ್ತು. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಬದಲಾವಣೆಗಳ ವೇಗ ಹೆಚ್ಚಿರುವುದರಿಂದ, ನಿಮಿಷಗಳ ಬದಲು ಸೆಕೆಂಡುಗಳಲ್ಲಿ ಲೆಕ್ಕಿಸುವ ಪದ್ಧತಿಗೆ ಬದಲಿಸಲಾಗಿದೆ.
ನಾಯಕರು ಮತ್ತು ರಾಷ್ಟ್ರಗಳು ಒಟ್ಟಾಗಿ ಅಸ್ತಿತ್ವದ ಅಪಾಯಗಳನ್ನು ಎದುರಿಸಲು ಕ್ರಮ ಕೈಗೊಂಡರೆ ಈ ಕ್ಲಾಕ್‌ಅನ್ನು ಮತ್ತೆ ಹಿಂದಕ್ಕೆ ತಿರುಗಿಸಬಹುದು ಎಂದು ಸಂಘಟನೆಯು ಅಭಿಪ್ರಾಯಪಟ್ಟಿದೆ.