ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಫ್ಲೋರಿಡಾದ ಮಾರ್-ಎ-ಲಾಗೋ ರೆಸಾರ್ಟ್ ನಿವಾಸದ ಸಮೀಪ ಖಾಸಗಿ 'ಲಿಯರ್‌ಜೆಟ್ 60' (Learjet 60) ವಿಮಾನ ಪತನಗೊಂಡು (Private Jet Crashes) ಒಟ್ಟು 9 ಮಂದಿ ದುರ್ಮರಣಕ್ಕೀಡಾಗಿದ್ದಾರೆ. 2026ರ ನವೆಂಬರ್ 1ರ ಭಾನುವಾರ ಮಧ್ಯಾಹ್ನ ಸುಮಾರು 12:50ರ ವೇಳೆಗೆ ಫ್ಲೋರಿಡಾದ ಪಾಮ್ ಬೀಚ್ ಕೌಂಟಿಯ ಕ್ರೆಸ್ಟ್‌ಹ್ಯಾವನ್ ವಸತಿ ಪ್ರದೇಶದ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.
ಟೆಕ್ಸಾಸ್‌ನ ಆಸ್ಟಿನ್ ನಗರದಿಂದ ಬಹಾಮಾಸ್‌ನತ್ತ ತೆರಳುತ್ತಿದ್ದ ಈ ವಿಮಾನವು, ಸುಮಾರು 8,000 ಅಡಿ ಎತ್ತರದಲ್ಲಿದ್ದಾಗ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ಕೆಳಮುಖವಾಗಿ ಧಾವಿಸಿದೆ. ವಸತಿ ಪ್ರದೇಶದ ರಸ್ತೆ ಪಕ್ಕದಲ್ಲಿ ಕ್ಷಿಪಣಿಯಂತೆ ಬಂದು ಅಪ್ಪಳಿಸಿದ ವಿಮಾನವು ತಕ್ಷಣವೇ ಭಾರಿ ಸ್ಫೋಟದೊಂದಿಗೆ ಹೊತ್ತಿ ಉರಿದಿದೆ. ಸ್ಫೋಟದ ತೀವ್ರತೆಗೆ ಸ್ಥಳದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದ್ದು, ಇಡೀ ಪ್ರದೇಶ ದಟ್ಟ ಹೊಗೆಯಿಂದ ಆವೃತವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಮಾನವು ವಸತಿ ಪ್ರದೇಶದ ರಸ್ತೆ ಪಕ್ಕದಲ್ಲಿ ಬಿದ್ದಿದ್ದರಿಂದ, ನೆಲದ ಮೇಲಿದ್ದ ಯಾರಿಗೂ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ ಎಂದು ಸ್ಥಳೀಯ ರಕ್ಷಣಾ ಪಡೆಗಳು ತಿಳಿಸಿವೆ.
ವಿಮಾನದಲ್ಲಿದ್ದ ಎಲ್ಲಾ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ಧೃಡಪಡಿಸಿದ್ದಾರೆ. ಅದೃಷ್ಟವಶಾತ್ ವಸತಿ ಪ್ರದೇಶದ ಮುಕ್ತ ಜಾಗದಲ್ಲಿ ವಿಮಾನ ಬಿದ್ದಿದ್ದರಿಂದ ನೆಲದ ಮೇಲಿದ್ದ ಜನರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ಸಮಯದಲ್ಲಿ ಸ್ಥಳದಲ್ಲಿ ಭಾರಿ ಗಾಳಿ-ಮಳೆಯ ವಾತಾವರಣವಿತ್ತು ಎಂದು ತಿಳಿದುಬಂದಿದೆ. ಸದ್ಯ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತು ಎನ್‌ಟಿಎಸ್‌ಬಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಉತ್ತರಾಖಂಡ ಹೆಲಿಕಾಪ್ಟರ್ ದುರಂತ; ಬೆಂಗಳೂರು ಏರ್‌ಪೋರ್ಟ್ ತಲುಪಿದ ನಾಲ್ವರು ಕನ್ನಡಿಗರ ಮೃತದೇಹ
ಅಪಘಾತ ನಡೆದ ಸ್ಥಳವು ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೋ ರೆಸಾರ್ಟ್‌ನಿಂದ ಕೇವಲ 11 ಕಿಲೋಮೀಟರ್ ದೂರದಲ್ಲಿದೆ. ವಿಶೇಷವೆಂದರೆ, ಅಪಘಾತ ಸಂಭವಿಸುವುದಕ್ಕಿಂತ ಕೇವಲ ಒಂದು ಗಂಟೆ ಮುನ್ನವಷ್ಟೇ ಅಧ್ಯಕ್ಷ ಟ್ರಂಪ್ ಅವರು ಇದೇ ಭಾಗದ ವಿಮಾನ ನಿಲ್ದಾಣದಿಂದ ಏರ್ ಫೋರ್ಸ್ ಒನ್ ವಿಮಾನದ ಮೂಲಕ ನಿರ್ಗಮಿಸಿದ್ದರು.