ಉತ್ತರಾಖಂಡ ಹೆಲಿಕಾಪ್ಟರ್ ದುರಂತ; ಬೆಂಗಳೂರು ಏರ್‌ಪೋರ್ಟ್ ತಲುಪಿದ ನಾಲ್ವರು ಕನ್ನಡಿಗರ ಮೃತದೇಹ
ಉತ್ತರಾಖಂಡದ ಜೋಶಿಮಠ ಕಣಿವೆಯಲ್ಲಿ ಅ.30ರಂದು ಖಾಸಗಿ ಸಂಸ್ಥೆಯ ಹೆಲಿಕಾಪ್ಟರ್ ಪತನಗೊಂಡು ಕರ್ನಾಟಕದ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಅರುಣ್ ಸಾಲುಂಕೆ ಸೇರಿ ಐವರು ಹಾಗೂ ದೆಹಲಿ ಮೂಲದ ಪೈಲಟ್ ಸೇರಿ ಒಟ್ಟು ಆರು ಜನರು ಮೃತಪಟ್ಟಿದ್ದರು. ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು ದುರಂತ ಸಂಭವಿಸಿತ್ತು.
-
ಬೆಂಗಳೂರು: ಉತ್ತರಾಖಂಡದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಐವರು ಕನ್ನಡಿಗರ ಪೈಕಿ ನಾಲ್ವರ ಮೃತದೇಹಗಳು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಭಾನುವಾರ ರಾತ್ರಿ ಆಗಮಿಸಿವೆ. ಇಂಡಿಗೋ 6E6136 ವಿಮಾನದಲ್ಲಿ ಪ್ರಕಾಶ್ ಗೌಡ, ನಟರಾಜ, ಶಂಕರ್ ಗೌಡ, ಸುಧೀರ್ ಅವರ ಮೃತದೇಹ ತರಲಾಗಿದೆ.
ಇನ್ನು ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಲುಂಕೆ ಅವರ ಮೃತದೇಹ ಗೋವಾಗೆ ತಲುಪಿದ್ದು, ಅಲ್ಲಿಂದ ಬೆಳಗಾವಿಗೆ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ. ಸದ್ಯ ಗೋವಾದಿಂದ ಅಥಣಿಗೆ ಅರುಣ್ ಸಾಲುಂಕೆ ಅವರ ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತಿದೆ.
ಉತ್ತರಾಖಂಡದ ಜೋಶಿಮಠ ಕಣಿವೆಯಲ್ಲಿ ಅ.30ರಂದು ಖಾಸಗಿ ಸಂಸ್ಥೆಯ ಹೆಲಿಕಾಪ್ಟರ್ ಪತನಗೊಂಡು ಕರ್ನಾಟಕದ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಅರುಣ್ ಸಾಲುಂಕೆ ಸೇರಿ ಐವರು ಹಾಗೂ ದೆಹಲಿ ಮೂಲದ ಪೈಲಟ್ ಸೇರಿ ಒಟ್ಟು ಆರು ಜನರು ಮೃತಪಟ್ಟಿದ್ದರು. ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು ದುರಂತ ಸಂಭವಿಸಿತ್ತು.
ದುರ್ಘಟನೆಯಲ್ಲಿ ದೆಹಲಿಯ ಪೈಲಟ್ ಕ್ಯಾಪ್ಟನ್ ಹಿಮಾಂಶು, ಬೆಂಗಳೂರಿನ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಸಾಲುಂಕೆ, ವಕೀಲ ಸುಧೀರ್. ಕೆ, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಚಳ್ಳಿಯ ಉದ್ಯಮಿ ಪ್ರತಾಪ್ ಗೌಡ, ತುಮಕೂರು ಜಿಲ್ಲೆಯ ಕುಣಿಗಲ್‌ನ ಕೋಳಿತಿಮ್ಮಯ್ಯನ ಪಾಳ್ಯದ ಶಂಕರೇಗೌಡ (40), ಹುಲಿಯೂರುದುರ್ಗದ ಕೋಳಿ ವ್ಯಾಪಾರಿ ಎಚ್.ಎಸ್.ನಟರಾಜ್ (50) ಮೃತಪಟ್ಟಿದ್ದರು.
ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಸಾಲುಂಕೆ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದವರು. ಹೀಗಾಗಿ ಅವರ ಮೃತದೇಹವನ್ನು ಅಲ್ಲಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.