ಒಮಾನ್ ಕರಾವಳಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ ಟ್ಯಾಂಕರ್ ಮೇಲೆ ಡ್ರೋನ್ ದಾಳಿ: ಇಬ್ಬರು ನಾವಿಕರು ನಾಪತ್ತೆ
ಒಮಾನ್‌ನ ಸೋಹರ್ ಬಂದರಿನ ಸಮೀಪ ನಿಕರಾಗುವಾ ಧ್ವಜ ಹೊಂದಿದ್ದ ಎಂಟಿ ಪೆಟ್ರೋ ಡಾಲ್ಫಿನ್ ಟ್ಯಾಂಕರ್ ಮೇಲೆ ಅಕ್ಟೋಬರ್ 11ರಂದು ಡ್ರೋನ್ ದಾಳಿ ನಡೆದಿದೆ. ಹಡಗಿನಲ್ಲಿದ್ದ 11 ಭಾರತೀಯ ನಾವಿಕರ ಪೈಕಿ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ಸರಣಿ ದಾಳಿಗಳನ್ನು ಭಾರತ ಖಂಡಿಸಿದ್ದು, ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂಘರ್ಷ ಶಮನಗೊಳಿಸುವಂತೆ ಆಗ್ರಹಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಒಮಾನ್ (Oman) ಕರಾವಳಿಯಲ್ಲಿರುವ ಸೋಹರ್ ಬಂದರಿನ ಲಂಗರು ಪ್ರದೇಶದಲ್ಲಿ ಭಾರತೀಯ ಸಿಬ್ಬಂದಿಯನ್ನು (Indian Sailors) ಹೊತ್ತೊಯ್ಯುತ್ತಿದ್ದ ನಿಕರಾಗುವಾ ಧ್ವಜದ ಎಂಟಿ ಪೆಟ್ರೋ ಡಾಲ್ಫಿನ್ (MT Petro Dolphin) ತೈಲ ಟ್ಯಾಂಕರ್ ಮೇಲೆ ಅಕ್ಟೋಬರ್ 11ರಂದು ಡ್ರೋನ್ ದಾಳಿ ನಡೆದಿದೆ. ಹಡಗಿನಲ್ಲಿದ್ದ 11 ಭಾರತೀಯ ನಾವಿಕರ ಪೈಕಿ ಒಂಬತ್ತು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಈ ಘಟನೆಯನ್ನು ಭಾರತ ಖಂಡಿಸಿದ್ದು, ನಾಪತ್ತೆಯಾದವರ ಪತ್ತೆಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರು ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಥಳೀಯ ಕರಾವಳಿ ರಕ್ಷಣಾ ಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ನಾಪತ್ತೆಯಾದ ಭಾರತೀಯ ನಾವಿಕರನ್ನು ಪತ್ತೆಹಚ್ಚಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸಚಿವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಭಾನುವಾರ ಹಾರ್ಮುಜ್ ಜಲಸಂಧಿಯಲ್ಲಿ ಮಾರ್ಷಲ್ ದ್ವೀಪಗಳ ಧ್ವಜ ಹೊಂದಿದ್ದ ಎಂಟಿ ವಾಲ್ಥೆರಾ (M/T Valthera) ಟ್ಯಾಂಕರ್ ಮೇಲೆ ಉತ್ಕ್ಷೇಪಕ ದಾಳಿ ನಡೆದಿತ್ತು. ಈ ಹಡಗಿನಲ್ಲಿಯೂ 11 ಭಾರತೀಯ ಸಿಬ್ಬಂದಿ ಇದ್ದರು. ದಾಳಿಯಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೂ, ಪವಾಡ ಸದೃಶ್ಯ ಎಲ್ಲ ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಿದ್ದರು.
ಆದರೆ ಒಮಾನ್ ಕರಾವಳಿ ಮತ್ತು ಹಾರ್ಮುಜ್ ಜಲಸಂಧಿಯ ಸುತ್ತಮುತ್ತ ವಾಣಿಜ್ಯ ಹಡಗುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳು ಭಾರತದ ಕಳವಳಕ್ಕೆ ಕಾರಣವಾಗಿವೆ. ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಜಾಗತಿಕ ಸಮುದ್ರ ವ್ಯಾಪಾರ ಮತ್ತು ನಾವಿಕರ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಆತಂಕವೂ ವ್ಯಕ್ತವಾಗಿದೆ.
ಈ ದಾಳಿಗಳನ್ನು ಭಾರತ ಖಂಡಿಸಿದ್ದು, ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳನ್ನು ಖಂಡಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ನಾವಿಕರ ಸುರಕ್ಷತೆ ಮತ್ತು ಭದ್ರತೆ ದೇಶದ ಪ್ರಮುಖ ಆದ್ಯತೆಯಾಗಿದೆ ಎಂದಿದೆ.
ರಾಬರ್ಟ್ ಇ. ಹಾಲ್, ಮೈಕೆಲ್ ವುಡ್‌ಫೋರ್ಡ್‌ಗೆ 2026ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ
ಹಾಗೇ ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಮರುಕಳಿಸುತ್ತಿರುವ ದಾಳಿಗಳು ಈಗಾಗಲೇ ಉದ್ವಿಗ್ನವಾಗಿರುವ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಅಪಾಯವಿದೆ ಎಂದು ಸಚಿವಾಲಯ ಕಳವಳ ವ್ಯಕ್ತಪಡಿಸಿದ್ದು, ಸಂಘರ್ಷವನ್ನು ತಕ್ಷಣವೇ ನಿಲ್ಲಿಸುವ ಅಗತ್ಯವಿದೆ. ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಭಾರತ ಒತ್ತಿಹೇಳಿದೆ.
ವಾಣಿಜ್ಯ ಹಡಗುಗಳು, ನಾವಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳು ನಿಲ್ಲಬೇಕು. ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಜಲಸಂಧಿಗಳಲ್ಲಿ ಮುಕ್ತ ಸಂಚಾರ ಹಾಗೂ ಸಮುದ್ರ ವ್ಯಾಪಾರದ ಸುರಕ್ಷಿತೆಯನ್ನು ಖಚಿತಪಡಿಸಬೇಕು ಎಂದು ಭಾರತ ಆಗ್ರಹಿಸಿದೆ.
ಜಾಗತಿಕ ಸಮುದ್ರ ವ್ಯಾಪಾರದಲ್ಲಿ ಭಾರತೀಯ ನಾವಿಕರ ಮಹತ್ವ
ವಿಶ್ವದ ವಾಣಿಜ್ಯ ಹಡಗುಗಳ ಕಾರ್ಯಾಚರಣೆಯಲ್ಲಿ ಭಾರತೀಯ ನಾವಿಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕೇಂದ್ರ ಹಡಗು ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2025ರಲ್ಲಿ ಭಾರತದಲ್ಲಿ 3.2 ಲಕ್ಷಕ್ಕೂ ಹೆಚ್ಚು ಸಕ್ರಿಯ ನಾವಿಕರಿದ್ದರು.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಆರಂಭಿಸಿದ ಬಳಿಕ ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಈ ಪ್ರದೇಶದಲ್ಲಿ ನಡೆದ ವಿವಿಧ ದಾಳಿಗಳಲ್ಲಿ ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡ ಘಟನೆಗಳೂ ವರದಿಯಾಗಿವೆ.
ಕಳೆದ ವಾರವೂ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಪನಾಮಾ ಧ್ವಜದ ಹಡಗಿನ ಮೇಲೆ ಒಮಾನ್ ಕರಾವಳಿಯ ಬಳಿ ಉತ್ಕ್ಷೇಪಕ ದಾಳಿ ನಡೆದಿತ್ತು. ಈ ಘಟನೆ ಸೇರಿದಂತೆ ವಾಣಿಜ್ಯ ಹಡಗುಗಳ ಮೇಲಿನ ಸರಣಿ ದಾಳಿಗಳು ಸಮುದ್ರ ಮಾರ್ಗಗಳ ಸುರಕ್ಷತೆ ಮತ್ತು ಜಾಗತಿಕ ವ್ಯಾಪಾರದ ನಿರಂತರತೆಯ ಬಗ್ಗೆ ಗಂಭೀರ ಕಳವಳ ಮೂಡಿಸಿವೆ.