ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತೇಜಸ್ ಯುದ್ಧ ವಿಮಾನ ಅಪಘಾತ: ಪೈಲೆಟ್ ನಮಾಂಶ್‌ ಸಯಾಲ್ ಕೊನೆಯ ಕ್ಷಣದ ವಿಡಿಯೊ ಇಲ್ಲಿದೆ

ದುಬೈನಲ್ಲಿ ನಡೆದ ವಾಯು ಪ್ರದರ್ಶನದ ವೇಳೆ ಭಾರತೀಯ ವಾಯುಪಡೆಯ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗಿ ಪೈಲಟ್ ನಮಾಂಶ್‌ ಸಯಾಲ್ ಸಾವನ್ನಪ್ಪಿದ್ದಾರೆ. ಅವರು ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ. ವಿಮಾನ ಅಪಘಾತಕ್ಕೀಡಾಗುವ ಮುನ್ನ ನಮಾಂಶ್ ಸ್ಯಾಲ್ ಅವರಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ (ಸಂಗ್ರಹ ಚಿತ್ರ)

ನವದೆಹಲಿ ನ. 22: ದುಬೈನಲ್ಲಿ ಶುಕ್ರವಾರ ನಡೆದ ವಾಯು ಪ್ರದರ್ಶನದಲ್ಲಿ (Dubai Air Show) ಭಾರತೀಯ ವಾಯುಪಡೆಯ ಯುದ್ಧ ವಿಮಾನ ಅಪಘಾತಕ್ಕೀಡಾಗಿದ್ದು, ಪೈಲಟ್ ನಮಾಂಶ್‌ ಸಯಾಲ್ (Wing Commander Namansh Syal) ಸಾವನ್ನಪ್ಪಿದ್ದಾರೆ. ಅಪಘಾತಕ್ಕೂ ಮುನ್ನ ನಮಾಂಶ್‌ ಸಯಾಲ್ ಅವರಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Al Maktoum International Airport) ಬಳಿ ನಡೆದ ದುಬೈ ಏರ್ ಶೋನಲ್ಲಿ ಹಾರಾಟ ಸಮಯದಲ್ಲಿ ತೇಜಸ್ ಯುದ್ಧ ವಿಮಾನ (Tejas fighter jet) ಅಪಘಾತಕ್ಕೀಡಾಯಿತು. 34 ವರ್ಷದ ಪೈಲಟ್ ನಮಾಂಶ್‌ ಸಯಾಲ್ ಅವರು ಪತ್ನಿ, ಮಗಳು ಮತ್ತು ಪೋಷಕರನ್ನು ಅಗಲಿದ್ದಾರೆ.

ದುಬೈ ವಾಯು ಪ್ರದರ್ಶನದ ಸಮಯದಲ್ಲಿ ನಮಾಂಶ್‌ ಸಯಾಲ್ ಅವರು ಹಾರಿಸುತ್ತಿದ್ದ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಈ ವೇಳೆ ವಿಂಗ್ ಕಮಾಂಡರ್ ನಮಾಂಶ್‌ ಸಯಾಲ್ ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು ನಮಾಂಶ್‌ ಸಯಾಲ್ ಅವರನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ರಕ್ಷಣಾ ರಾಜ್ಯ ಸಚಿವ ಸಂಜಯ್ ಸೇಠ್, ಯುಎಇಯ ಭಾರತದ ರಾಯಭಾರಿ ದೀಪಕ್ ಮಿತ್ತಲ್, ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಗಲ್ಫ್) ಅಸೀಮ್ ಆರ್. ಮಹಾಜನ್ ಅವರೊಂದಿಗೆ ವಿಂಗ್ ಕಮಾಂಡರ್ ನಮಾಂಶ್‌ ಸಯಾಲ್ ಕಾಣಿಸಿಕೊಂಡಿದ್ದಾರೆ.



ಇದನ್ನೂ ಓದಿ: Delhi Blast: "ದೆಹಲಿ ಸ್ಫೋಟ ಮಾಡಿದ್ದು ನಾವೇ"; ಎರಡು ವರ್ಷದ ಪ್ಲಾನ್‌ ವಿಫಲವಾಗಿದ್ದೆಲ್ಲಿ? ಕೊನೆಗೂ ಬಾಯ್ಬಿಟ್ಟ ಉಗ್ರ

ವಿಂಗ್ ಕಮಾಂಡರ್ ನಮಾಂಶ್‌ ಸಯಾಲ್ ಅವರ ನಿಧನದಿಂದ ಅವರ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ. ತುಂಬಾ ವಿನಮ್ರ ವ್ಯಕ್ತಿಯಾಗಿದ್ದ ನಮಾಂಶ್‌ ಸಯಾಲ್ ಅವರಿಗೆ ಬಡ್ತಿ ಸಿಗಬೇಕಿತ್ತು. 34ನೇ ವಯಸ್ಸಿನಲ್ಲಿ ಸ್ಕ್ವಾಡ್ರನ್ ನಾಯಕರಾಗಿದ್ದರು ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಶುಕ್ರವಾರ ಮಧ್ಯಾಹ್ನ ದುಬೈ ಏರ್ ಶೋನಲ್ಲಿ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಯಿತು. ನವೆಂಬರ್ 17ರಂದು ಪ್ರಾರಂಭಗೊಂಡ ವಿಶ್ವದ ಅತಿದೊಡ್ಡ ವಾಯುಯಾನ ಪ್ರದರ್ಶನಗಳಲ್ಲಿ ಒಂದಾದ ದುಬೈ ಏರ್ ಶೋನಲ್ಲಿ ಸುಮಾರು 150ಕ್ಕೂ ಹೆಚ್ಚು ದೇಶಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ತೇಜಸ್ ಯುದ್ಧ ವಿಮಾನದ ಅಂತಿಮ ದಿನ ಪ್ರದರ್ಶನದ ವೇಳೆ ಯುದ್ಧವಿಮಾನವು ಇದ್ದಕ್ಕಿದ್ದಂತೆ ಬೆಂಕಿಯ ಚೆಂಡಾಗಿ ಕಾಣಿಸಿಕೊಂಡು ಸ್ಫೋಟಗೊಂಡಿತ್ತು. ಇದರಿಂದ ವಾಯುನೆಲೆಯಾದ್ಯಂತ ಹೊಗೆ ವ್ಯಾಪಿಸಿಕೊಂಡಿತ್ತು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಏಕ-ಆಸನದ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ವಿಮಾನವು ಮಧ್ಯಾಹ್ನ 2.10ರ ಸುಮಾರಿಗೆ ಪತನಗೊಂಡಿದೆ. ವಿಮಾನ ಪಾಟ್ನಾಕ್ಕೆ ಕಾರಣ ತಿಳಿಯಲು ತನಿಖಾ ನ್ಯಾಯಾಲಯವನ್ನು ರಚಿಸಲಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ಕಳೆದ ಎರಡು ವರ್ಷಗಳಲ್ಲಿ ಎರಡನೇ ತೇಜಸ್ ವಿಮಾನ ಅಪಘಾತ ಪ್ರಕರಣ ಇದಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತೇಜಸ್ ಯುದ್ಧ ವಿಮಾನ ಪತನಗೊಂಡಿತು. ಇದರಲ್ಲಿ ಪೈಲಟ್ ಸುರಕ್ಷಿತವಾಗಿ ಹೊರ ಬಂದಿದ್ದರು. ತೇಜಸ್ ಯುದ್ಧ ವಿಮಾನದ 23 ವರ್ಷಗಳ ಇತಿಹಾಸದಲ್ಲಿ ನಡೆದ ಮೊದಲ ಅಪಘಾತ ಪ್ರಕರಣ ಇದಾಗಿತ್ತು.

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯವರಾದ ವಿಂಗ್ ಕಮಾಂಡರ್ ನಮಾಂಶ್‌ ಸಯಾಲ್ ಅವರ ಪತ್ನಿ ಕೂಡ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮಾಂಶ್‌ ಸಯಾಲ್ ಅವರು ಸುಜನ್‌ಪುರ್ ತಿರಾದ ಸೈನಿಕ್ ಶಾಲೆಯಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದು, 2009ರ ಡಿಸೆಂಬರ್ 24ರಂದು ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿದ್ದರು.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ನವೆಂಬರ್‌ 23, 24ರಂದು ವಿದ್ಯುತ್‌ ವ್ಯತ್ಯಯ

ವಿಂಗ್ ಕಮಾಂಡರ್ ನಮಾಂಶ್‌ ಸಯಾಲ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಸಂತಾಪ ಸೂಚಿಸಿದ್ದಾರೆ. ನಮಾಂಶ್‌ ಸಯಾಲ್ ಅವರ ನಿಧನದಿಂದ ರಾಷ್ಟ್ರವು ಧೈರ್ಯಶಾಲಿ, ಕರ್ತವ್ಯನಿಷ್ಠ ಪೈಲಟ್ ಅನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಕೂಡ ಸಂತಾಪವನ್ನು ಸೂಚಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author