ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕತಾರ್‌ನಲ್ಲಿ ಕರ್ನಾಟಕ ಸಂಘದಿಂದ ʼಅಭಿಯಂತರರ ದಿನʼ ಆಚರಣೆ; ʼಅಭಿಯಂತರ ಶ್ರೀʼ ಪ್ರಶಸ್ತಿ ಪ್ರದಾನ

“ಭವಿಷ್ಯವನ್ನು ನಿರ್ಮಿಸುವ ದೂರದೃಷ್ಟಿಯ ಸಾಧಕರಿಗೆ ನಮನ” ಎಂಬ ಆಶಯದೊಂದಿಗೆ ಭಾರತೀಯ ರಾಯಭಾರ ಕಚೇರಿ, ದೋಹಾ ಆಶ್ರಯದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗಿ ಸಂಸ್ಥೆ ಕರ್ನಾಟಕ ಸಂಘ ಕತಾರ್ ವತಿಯಿಂದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಅಭಿಯಂತರರ ದಿನಾಚರಣೆಯನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ಮುಂಬೈ ಹಾಲ್‌ನಲ್ಲಿ ಆಚರಿಸಲಾಯಿತು.

ಕತಾರ್‌ನಲ್ಲಿ ಕರ್ನಾಟಕ ಸಂಘದಿಂದ ʼಅಭಿಯಂತರರ ದಿನʼ ಆಚರಣೆ

-

Profile
Siddalinga Swamy Sep 24, 2026 5:12 PM

ದೋಹಾ, ಕತಾರ್, ಸೆ.24: ಭಾರತೀಯ ರಾಯಭಾರ ಕಚೇರಿ, ದೋಹಾ ಆಶ್ರಯದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗಿ ಸಂಸ್ಥೆಯಾದ ಕರ್ನಾಟಕ ಸಂಘ ಕತಾರ್ ವತಿಯಿಂದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಅಭಿಯಂತರರ ದಿನಾಚರಣೆಯನ್ನು (Engineers Day) ಭಾರತೀಯ ಸಾಂಸ್ಕೃತಿಕ ಕೇಂದ್ರದ ಮುಂಬೈ ಹಾಲ್‌ನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

“ಭವಿಷ್ಯವನ್ನು ನಿರ್ಮಿಸುವ ದೂರದೃಷ್ಟಿಯ ಸಾಧಕರಿಗೆ ನಮನ” ಎಂಬ ಆಶಯದೊಂದಿಗೆ ನಡೆದ ಕಾರ್ಯಕ್ರಮವು ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿ, ಅಭಿಯಂತ್ರಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅವರ ಪಾತ್ರವನ್ನು ಸ್ಮರಿಸುವ ಮೂಲಕ ಆರಂಭಗೊಂಡಿತು.

Abhiyantara Shri Award

ಕರ್ನಾಟಕ ಸಂಘ ಕತಾರ್‌ನ ಮಾಧ್ಯಮ, ಸಾರ್ವಜನಿಕ ಸಂಪರ್ಕ ಮತ್ತು ಬೆನಿವೊಲೆಂಟ್ ಕಾರ್ಯದರ್ಶಿ ಪ್ರಶಾಂತ್ ಹಿರೇಮಠ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಅಭಿಯಂತ್ರಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಬಿಂಬಿಸುವ ವಿಡಿಯೊ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಕಿಶೋರ್ ವಿ., ಶ್ರೀಧರ್ ರಾವ್ ಹಾಗೂ ಸುಧೀರ್ ಅಕ್ಕತಂಗೇರಹಾಳ್ ಅವರು ಅಭಿಯಂತ್ರಣ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ತಾಂತ್ರಿಕ ಉಪನ್ಯಾಸಗಳನ್ನು ನೀಡಿದರು.

Award Presentation Ceremony

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಮಾತನಾಡಿ, ಆಧುನಿಕ ಮೂಲಸೌಕರ್ಯ ನಿರ್ಮಾಣ ಹಾಗೂ ಸಮಾಜದ ಪ್ರಗತಿಯಲ್ಲಿ ಅಭಿಯಂತರರ ಮಹತ್ವದ ಪಾತ್ರವನ್ನು ವಿವರಿಸಿದರು. ಅಭಿಯಂತ್ರಣ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳು ಸಮುದಾಯ ಮತ್ತು ದೇಶದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು ಅವರು ಉಲ್ಲೇಖಿಸಿದರು.

Engineers Day

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ‘ಅಭಿಯಂತರ ಶ್ರೀʼ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶುಭಾ ರಾವ್ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯ ಹಾಗೂ ಅವರ ಸಾಧನೆಗಳ ವಿವರ ತಿಳಿಸಿದರು. ʼಇಂಜಿನಿಯರ್ಸ್ ವಿಥೌಟ್ ಬಾರ್ಡರ್ಸ್ – ಕತಾರ್ʼ ನ ನಿರ್ದೇಶಕರು ಮತ್ತು ‘ಕತಾರ್ ಸೊಸೈಟಿ ಆಫ್ ಇಂಜಿನಿಯರ್ಸ್ʼ ನ ಮಂಡಳಿ ಸದಸ್ಯ ಖಾಲಿದ್ ಅಲ್-ಸಯ್ಯದ್ ಅವರಿಗೆ ‘ಅಭಿಯಂತರ ಶ್ರೀʼ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅಭಿಯಂತ್ರಣ ಕ್ಷೇತ್ರ ಹಾಗೂ ಸಮಾಜದ ಅಭಿವೃದ್ಧಿಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Engineers Day celebration

ದೋಹಾದ ವಿಕ್ರಾಂತ್ ಪಾಟೀಲ್ ಅವರಿಗೂ ಅಭಿಯಂತ್ರಣ ಕ್ಷೇತ್ರಕ್ಕೆ ನೀಡಿದ ಗಮನಾರ್ಹ ಕೊಡುಗೆಗಾಗಿ ‘ಅಭಿಯಂತರ ಶ್ರೀʼ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರು ಈ ಸಂದರ್ಭದಲ್ಲಿ ಮಾತನಾಡಿ ತಮ್ಮ ಅನುಭವ ಹಾಗೂ ಸಂದೇಶವನ್ನು ಹಂಚಿಕೊಂಡರು.

ಕಾರ್ಯಕ್ರಮದ ಮುಖ್ಯ ಅತಿಥಿ, ದೋಹಾದ ಭಾರತೀಯ ರಾಯಭಾರ ಕಚೇರಿಯ ಶಿಕ್ಷಣ ಮತ್ತು ಸಾಂಸ್ಕೃತಿಕ ವಿಭಾಗದ ಪ್ರಥಮ ಕಾರ್ಯದರ್ಶಿ ಹರೀಶ್ ಪಾಂಡೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಂತ್ರಿಕ ಜ್ಞಾನವನ್ನು ಉತ್ತೇಜಿಸುವ ಹಾಗೂ ಭಾರತದ ಗಣ್ಯ ವ್ಯಕ್ತಿಗಳ ಕೊಡುಗೆಗಳನ್ನು ಗೌರವಿಸುವ ಕರ್ನಾಟಕ ಸಂಘ ಕತಾರ್‌ನ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.

Indian Cultural Centre

ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯ ಹಿತೈಷಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಮಿತಿಯ ಕರ್ನಾಟಕ ಪ್ರತಿನಿಧಿ ಸಂದೀಪ್ ರೆಡ್ಡಿ, ಕರ್ನಾಟಕ ಸಂಘ ಕತಾರ್ ಸಲಹಾ ಮಂಡಳಿ ಅಧ್ಯಕ್ಷ ಡಾ. ರವಿ ಶೆಟ್ಟಿ, ಸಲಹಾ ಸಮಿತಿಯ ಸದಸ್ಯರಾದ ಅರುಣ್ ಕುಮಾರ್, ವಿ.ಎಸ್. ಮನ್ನಂಗಿ, ಎಚ್.ಕೆ. ಮಧು ಹಾಗೂ ಡಾ. ಸಂಜಯ್ ಕುದರಿ ಸೇರಿದಂತೆ ಭಾರತೀಯ ಸಾಂಸ್ಕೃತಿಕ ಕೇಂದ್ರ, ಭಾರತೀಯ ಸಮುದಾಯ ಹಿತೈಷಿ ವೇದಿಕೆ ಹಾಗೂ ಕತಾರ್‌ನ ವಿವಿಧ ಕನ್ನಡ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

17 ನಿಮಿಷದಲ್ಲೇ ಡ್ರೋನ್ ಜೋಡಿಸಿ ʼಇಂಟರ್‌ನ್ಯಾಷನಲ್‌ ಬುಕ್ ಆಫ್ ರೆಕಾರ್ಡ್ಸ್ʼ ಸೇರಿದ ಸೊರಬದ ಬಾಲಕ ವಿರಾಟ್!

ಕರ್ನಾಟಕ ಸಂಘ ಕತಾರ್‌ನ ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಹೊಸದುರ್ಗ ಸ್ವಾಗತಿಸಿದರು. ಕರ್ನಾಟಕ ಸಂಘ ಕತಾರ್‌ನ ಉಪಾಧ್ಯಕ್ಷ ಅನಿಲ್ ಭಾಸಗಿ ವಂದಿಸಿದರು. ಸಮೂಹ ಛಾಯಾಚಿತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸರ್ ಎಂ. ವಿಶ್ವೇಶ್ವರಯ್ಯ ಅವರ ಆದರ್ಶ ಮತ್ತು ಅಭಿಯಂತ್ರಣ ಕ್ಷೇತ್ರದ ಸಾಧನೆಗಳನ್ನು ಸ್ಮರಿಸಿದ ಈ ಕಾರ್ಯಕ್ರಮವು ಜ್ಞಾನ, ತಂತ್ರಜ್ಞಾನ ಮತ್ತು ಸಮಾಜದ ಅಭಿವೃದ್ಧಿಯ ಮಹತ್ವವನ್ನು ಸಾರುವಂತಾಯಿತು.