ವಾಷಿಂಗ್ಟನ್: ವ್ಯಾಪರ ಒಪ್ಪಂದ (trade deal), ವಲಸಿಗರ ವಿರುದ್ಧ ಕ್ರಮ (Action against immigrants), ರಷ್ಯಾದೊಂದಿಗಿನ ತೈಲ ಖರೀದಿ (Russian Oil purchase) ವಿಚಾರದಲ್ಲಿ ಪದೇ ಪದೇ ಭಾರತವನ್ನು ಕೆಣಕಿದ್ದ ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಕಳೆದ ಕೆಲವು ದಿನಗಳಿಂದ ಮತ್ತೆ ಭಾರತದೊಂದಿಗೆ ಮೃದು ಧೋರಣೆಯನ್ನು ತೋರುತ್ತಿದ್ದಾರೆ. ಕಳೆದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಹೊಗಳಿದ್ದ ಟ್ರಂಪ್ ಇದೀಗ ಭಾರತಕ್ಕೆ ಸುಂಕ ಕಡಿತ ಮಾಡುವ ಸುಳಿವನ್ನು ನೀಡಿದ್ದಾರೆ. ಅಲ್ಲದೇ ಭಾರತದೊಂದಿಗೆ ನ್ಯಾಯಯುತ ವ್ಯಾಪರ ಒಪ್ಪಂದ (Indo-American Trade Deal) ಎಲ್ಲರಿಗೂ ಒಳ್ಳೆಯದು ಎಂದು ಹೇಳಿದ್ದಾರೆ.
ಭಾರತಕ್ಕೆ ಮುಂದಿನ ಅಮೆರಿಕದ ರಾಯಭಾರಿಯಾಗಿ ಸೆರ್ಗಿಯೊ ಗೋರ್ ಅವರ ಪ್ರಮಾಣ ವಚನ ಸ್ವೀಕಾರ ನಡೆಸಿದ ಬಳಿಕ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಮತ್ತು ಅಮೆರಿಕ ನಡುವಿನ ಆರ್ಥಿಕ ಮತ್ತು ಭದ್ರತಾ ಸಂಬಂಧಗಳನ್ನು ವಿಸ್ತರಿಸುವ ಒಪ್ಪಂದದ ಮಾತುಕತೆಗಳು ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿ ಸಹೋದರಿಯ ಸರಳತೆಯನ್ನೊಮ್ಮೆ ನೋಡಿ- ಇಲ್ಲಿದೆ ವಿಡಿಯೊ
ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ನಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಇದು ನಾವು ಹೊಂದಿದ್ದಕ್ಕಿಂತ ತುಂಬಾ ಭಿನ್ನವಾಗಿದೆ. ಅವರು ನನ್ನನ್ನು ಪ್ರೀತಿಸುವುದಿಲ್ಲ. ಆದರೆ ಮತ್ತೆ ಅವರು ನಮ್ಮನ್ನು ಪ್ರೀತಿಸುತ್ತಾರೆ. ನಮಗೆ ನ್ಯಾಯಯುತ ಒಪ್ಪಂದ ಸಿಗುತ್ತಿದೆ. ಅವರು ತುಂಬಾ ಉತ್ತಮ ಸಂಧಾನಕಾರರು. ಸೆರ್ಗಿಯೊ ಅವರು ಇದನ್ನು ನೋಡಬೇಕು. ಎಲ್ಲರಿಗೂ ಒಳ್ಳೆಯದಾದ ಒಪ್ಪಂದ ನಡೆಯುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಹೇಳಿದರು.
ರಷ್ಯಾದ ತೈಲದಿಂದಾಗಿ ಭಾರತದ ಮೇಲಿನ ಸುಂಕಗಳು ತುಂಬಾ ಹೆಚ್ಚಿವೆ. ಅವರು ರಷ್ಯಾದ ತೈಲವನ್ನು ಬಳಸುವುದನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ನಾವು ಸುಂಕಗಳನ್ನು ಕಡಿಮೆ ಮಾಡುತ್ತೇವೆ ಎಂದರು.
ಟ್ರಂಪ್ ಹೇಳಿಕೆಗೂ ಮೊದಲೇ ಅಂದರೆ ನವೆಂಬರ್ ತಿಂಗಳ ಆರಂಭದಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಭಾರತ ಮತ್ತು ಯುಎಸ್ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳು ಉತ್ತಮವಾಗಿ ಸಾಗುತ್ತಿದೆ. ಹಲವು ಸೂಕ್ಷ್ಮ ಮತ್ತು ಗಂಭೀರ ಸಮಸ್ಯೆಗಳು ಇವೆ. ಇದರ ಪರಿಹಾರಕ್ಕಾಗಿ ಸ್ವಲ್ಪ ಸಮಯ ಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: Kerala News: ಕೊಚ್ಚಿಯಲ್ಲಿ ಬೃಹತ್ ಫೀಡರ್ ಟ್ಯಾಂಕ್ ಕುಸಿದು, ಮನೆಗಳಿಗೆ ನುಗ್ಗಿದ ನೀರು!
ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಪ್ರಕಾರ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಪ್ರಮಾಣವನ್ನು 2030ರ ವೇಳೆಗೆ 191 ಶತಕೋಟಿ ಡಾಲರ್ ನಿಂದ 500 ಶತಕೋಟಿ ಡಾಲರ್ ಗೆ ದ್ವಿಗುಣಗೊಳಿಸುವ ಗುರಿ ಹೊಂದಿದೆ. ಈ ಒಪ್ಪಂದಕ್ಕಾಗಿ ಮಾರ್ಚ್‌ನಿಂದ ಇಲ್ಲಿಯವರೆಗೆ ಐದು ಸುತ್ತಿನ ಮಾತುಕತೆಗಳು ನಡೆದಿವೆ. ಆರಂಭದಲ್ಲಿ 2025ರ ಚಳಿಗಾಲಕ್ಕೂ ಮೊದಲೇ ಒಪ್ಪಂದಕ್ಕೆ ಸಹಿ ಹಾಕುವ ನಿರ್ಣಯ ಮಾಡಿಕೊಳ್ಳಲಾಗಿತ್ತು. ಇದು ಈಗ ಪೂರ್ಣಗೊಳ್ಳುವ ಸಾಧ್ಯತೆಗಳು ಕಂಡು ಬರುತ್ತಿವೆ.