ಕಠ್ಮಂಡು, ಮೇ 11: ಟರ್ಕಿಶ್ ಏರ್ಲೈನ್ಸ್ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಅದರ ಟೈರ್‌ಗೆ ಬೆಂಕಿ (Aircraft tyre fire) ಹೊತ್ತಿಕೊಂಡ ಆಘಾತಕಾರಿ ಘಟನೆ ನೇಪಾಳದ (Nepal) ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇಂದು (ಸೋಮವಾರ, ಮೇ 11) ಬೆಳಗ್ಗೆ ಈ ಘಟನೆ ನಡೆದಿದ್ದು, ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಕಿ ಹೊತ್ತುಕೊಳ್ಳುತ್ತಿದ್ದಂತೆ ತ್ವರಿತವಾಗಿ ನಿಯಂತ್ರಣಕ್ಕೆ ತರಲಾಯಿತು. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇಸ್ತಾನ್‌ಬುಲ್‌ನಿಂದ ಕಠ್ಮಂಡುವಿಗೆ ಆಗಮಿಸುತ್ತಿದ್ದ ಟರ್ಕಿಶ್ ಏರ್ಲೈನ್ಸ್ ಟಿಕೆ 726 ವಿಮಾನದ ಟೈರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಲ್ಯಾಂಡಿಂಗ್ ಸಮಯದಲ್ಲಿ ಟೈರ್‌ಗೆ ಬೆಂಕಿ ಹೊತ್ತಿಕೊಂಡ ತಕ್ಷಣ ತುರ್ತು ತಂಡಗಳು ಪ್ರತಿಕ್ರಿಯಿಸಿದವು.
ಟರ್ಕಿಶ್ ಏರ್ಲೈನ್ಸ್ ಟಿಕೆ 726 ವಿಮಾನ ಇಸ್ತಾನ್‌ಬುಲ್‌ನಿಂದ ಕಠ್ಮಂಡುವಿಗೆ ತೆರಳುತ್ತಿತ್ತು. ಇಳಿಯುವಾಗ ಟೈರ್ ಬೆಂಕಿಗೆ ಆಹುತಿಯಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದರು. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ತಿಳಿಸಿದ್ದಾರೆ.
ಯುದ್ಧ ಆರಂಭವಾದ ಮೇಲೆ ಇರಾನ್‌ನಿಂದ ಮೊದಲ ಬಾರಿಗೆ ವಾಣಿಜ್ಯ ವಿಮಾನ ಹಾರಾಟ ಪ್ರಾರಂಭ
ಘಟನೆಯ ಸಮಯದಲ್ಲಿ ವಿಮಾನದಲ್ಲಿ 278 ಪ್ರಯಾಣಿಕರು, 11 ಸಿಬ್ಬಂದಿ ಇದ್ದರು. ವಿಶ್ವಸಂಸ್ಥೆಯ ಹಲವಾರು ಪ್ರತಿನಿಧಿಗಳು ವಿಮಾನದಲ್ಲಿ ಇದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ತುರ್ತು ರಕ್ಷಣಾ ಸಿಬ್ಬಂದಿ ತಕ್ಷಣ ಪ್ರತಿಕ್ರಿಯೆ ನೀಡಿದ ಪರಿಣಾಮ ಆಗಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದೆ. ಇಲ್ಲಿಯವರೆಗೆ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.
ವಿಮಾನದ ಟೈರ್‌ಗೆ ಬೆಂಕಿ ಹೊತ್ತಿಕೊಳ್ಳಲು ಏನು ಕಾರಣ ಎಂದು ಇನ್ನೂ ತಿಳಿದುಬಂದಿಲ್ಲ. ವಿಮಾನಯಾನ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುವ ನಿರೀಕ್ಷೆಯಿದೆ.
ದೆಹಲಿಯಲ್ಲಿ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ
ದೆಹಲಿಯಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಸ್ನೇಹಿತರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈಶಾನ್ಯ ದೆಹಲಿಯ ಖಜುರಿ ಖಾಸ್ ಫ್ಲೈಓವರ್ ಬಳಿ ಭಾನುವಾರ (ಮೇ 10) ತಡರಾತ್ರಿ ಈ ಅಪಘಾತ ಸಂಭವಿಸಿದೆ. ಪೊಲೀಸರ ಪ್ರಕಾರ, ಇಬ್ಬರೂ ಯುವಕರು ತಮ್ಮ ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ಫ್ಲೈಓವರ್‌ನಿಂದ ಕೆಳಗೆ ಬರುತ್ತಿದ್ದಾಗ, ವೇಗವಾಗಿ ಬಂದ ಕಾರು ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಹೇಮಂತ್ ತಿವಾರಿ ಮತ್ತು ರೋಹಿತ್ ಅಲಿಯಾಸ್ ಸೋನು ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಕಾರು ಚಾಲಕ ಹಿಮಾಂಶುನನ್ನು ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್ 28 ರಂದು ದೆಹಲಿಯ ಅಶೋಕ್ ರಸ್ತೆಯಲ್ಲಿ ಇದೇ ರೀತಿಯ ಅಪಘಾತ ಸಂಭವಿಸಿ ಇಬ್ಬರು ಸಾವಿಗೀಡಾಗಿದ್ದರು. ಈ ಇಬ್ಬರು ಐಪಿಎಲ್ ಪಂದ್ಯವನ್ನು ವೀಕ್ಷಿಸಿ ಮನೆಗೆ ಹಿಂದಿರುಗುತ್ತಿದ್ದರು. ಮೃತಪಟ್ಟ ದುರ್ದೈವಿಗಳು ಒಡಹುಟ್ಟಿದವರಾಗಿದ್ದರು.