ಕಠ್ಮಂಡು, ಆ. 26: ಟಿಬೆಟ್ ಗಡಿಯಲ್ಲಿರುವ ನೇಪಾಳದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ (Flash Flood) ಕನಿಷ್ಠ 98 ಮಂದಿ ಮೃತಪಟ್ಟಿದ್ದು, ಸುಮಾರು 500 ಮಂದಿ ನಾಪತ್ತೆಯಾಗಿದ್ದಾರೆ (Nepal Floods). ನಾಪತ್ತೆಯಾದವರಲ್ಲಿ 133 ಭಾರತೀಯರು ಹಾಗೂ 37 ಅನಿವಾಸಿ ಭಾರತೀಯರು ಸೇರಿದ್ದಾರೆ. ಟಿಬೆಟ್‌ನ ಗ್ಯಿರೋಂಗ್ ಪೋರ್ಟ್ (Gyirong Port) ಬಳಿಯ ಪ್ರವಾಹದ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮೇಲ್ಭಾಗದಿಂದ ಭಾರೀ ಪ್ರಮಾಣದ ಕೆಸರು, ಕಲ್ಲುಗಳು ಹಾಗೂ ಅವಶೇಷಗಳೊಂದಿಗೆ ನೀರು ಕ್ಷಣಾರ್ಧದಲ್ಲಿ ನುಗ್ಗಿ ವಾಹನಗಳನ್ನು ಕೊಚ್ಚಿಕೊಂಡು ಹೋಗಿದೆ. ಜನರು ಜೀವ ಉಳಿಸಿಕೊಳ್ಳಲು ಓಡುತ್ತಿರುವ ದೃಶ್ಯವೂ ಕಂಡುಬಂದಿದೆ.
ಸುಮಾರು ಬೆಳಗ್ಗೆ 9 ಗಂಟೆಗೆ ಟಿಬೆಟ್ ಭಾಗದಿಂದ ಬಂದ ಪ್ರವಾಹ ಭೋಟೆ ಕೋಶಿ ನದಿ (Bhote Koshi River) ಮೂಲಕ ರಸುವಾ ಹಾಗೂ ಧಾಡಿಂಗ್ ಜಿಲ್ಲೆಗಳಿಗೆ ವ್ಯಾಪಿಸಿದ್ದು, ಕಠ್ಮಂಡುವಿನ ನೈಋತ್ಯದಲ್ಲಿರುವ ನುವಾಕೋಟ್ ಜಿಲ್ಲೆಯ ಮೇಲೂ ಪರಿಣಾಮ ಬೀರಿದೆ.
ನೇಪಾಳದಲ್ಲಿ ಸಂಭವಿಸಿದ ಪ್ರವಾಹ:
ನೇಪಾಳದಲ್ಲಿ ಭೀಕರ ಪ್ರವಾಹ: ಸದ್ಗುರು ಈಶಾ ಫೌಂಡೇಶನ್‌ನ 77 ಯಾತ್ರಿಕರು ನಾಪತ್ತೆ
ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ, ಪ್ರವಾಹ ಪೀಡಿತ ಪ್ರದೇಶದಲ್ಲಿ 384 ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಇವರಲ್ಲಿ 291 ವಿದೇಶಿ ಪ್ರವಾಸಿಗರು ಹಾಗೂ 93 ನೇಪಾಳಿ ಪ್ರಜೆಗಳು ಸೇರಿದ್ದಾರೆ. ನಾಪತ್ತೆಯಾದ ಭಾರತೀಯರಲ್ಲಿ 59 ಮಂದಿ ಕೈಲಾಸ ಮಾನಸ ಸರೋವರ ಯಾತ್ರಿಕರು ಎಂದು ಪ್ರವಾಸ ಸಂಸ್ಥೆಯೊಂದು ತಿಳಿಸಿದೆ.
ನೇಪಾಳದಲ್ಲಿ ಕೊಚ್ಚಿ ಹೋದ ಸೇತುವೆ:
ಪ್ರವಾಹದ ಹಿನ್ನೆಲೆಯಲ್ಲಿ ನೇಪಾಳ ಸೇನೆ ಹೆಲಿಕಾಪ್ಟರ್‌ಗಳು ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದೆ. ನದಿ ತೀರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಪ್ರವಾಹದ ಭೀಕರ ದೃಶ್ಯ:
ನೇಪಾಳದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸುರಿಯುವ ಮುಂಗಾರು ಮಳೆಯಿಂದ ಪ್ರತಿ ವರ್ಷವೂ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸುತ್ತಿದ್ದು, ಈ ಬಾರಿ ಟಿಬೆಟ್ ಗಡಿಯ ಪ್ರದೇಶದಲ್ಲಿ ಸಂಭವಿಸಿದ ದುರಂತದ ನಿಖರ ಹಾನಿಯ ಪ್ರಮಾಣ ಇನ್ನಷ್ಟೇ ತಿಳಿದುಬರಬೇಕಿದೆ.