ನವದೆಹಲಿ: ಇಸ್ರೇಲ್(Israel)ನ ಟೆಲ್ ಅವಿವ್(Tel Aviv) ನಗರದ ಬೆನ್ ಗುರಿಯನ್ ವಿಮಾನ ನಿಲ್ದಾಣದ ಮೇಲೆ ಅಮೆರಿಕದ 9/11 ಮಾದರಿಯಲ್ಲೇ ಭೀಕರ ಆತ್ಮಹತ್ಯಾ ದಾಳಿ ನಡೆಸಲು ಸಂಚು ರೂಪಿಸಿದ್ದ ಫ್ಲೈದುಬೈ(Flydubai) ಏರ್‌ಲೈನ್ಸ್‌ನ ಒಮಾನ್(Oman) ಮೂಲದ ಕೋ-ಪೈಲಟ್ ಹಮಾಮ್ ಅಲ್-ಹಮ್ಮಾಮಿ(Hamam al-Hammami), ಜುಲೈ ತಿಂಗಳಲ್ಲೇ ಈ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದ್ದ ಎಂಬ ಆಘಾತಕಾರಿ ಸತ್ಯ ತನಿಖೆಯ ವೇಳೆ ಬಯಲಾಗಿದೆ. ಆದರೆ, ಅಂದು ವಿಮಾನದಲ್ಲಿದ್ದ ಸಿಬ್ಬಂದಿಯೊಬ್ಬರು ತನ್ನ ಆತ್ಮೀಯ ಸ್ನೇಹಿತರಾಗಿದ್ದ ಕಾರಣ ಕೊನೆಯ ಕ್ಷಣದಲ್ಲಿ ಆತ ತನ್ನ ಯೋಜನೆಯನ್ನು ಮುಂದೂಡಿದ್ದ ಎಂದು ಇಸ್ರೇಲ್‌ನ ಹೀಬ್ರೂ ಮಾಧ್ಯಮಗಳು ವರದಿ ಮಾಡಿವೆ.
ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ತನಿಖಾಧಿಕಾರಿಗಳ ಕಸ್ಟಡಿಯಲ್ಲಿರುವ 29 ವರ್ಷದ ಹಮ್ಮಾಮಿ ನೀಡಿದ ಹೇಳಿಕೆಯ ಪ್ರಕಾರ, ಫ್ಲೈದುಬೈ ಫ್ಲೈಟ್ 1073ರ ಮುಖ್ಯ ಪೈಲಟ್ ಭಾರತೀಯ ಮೂಲದ ಸ್ಮಿತ್ ಮಚ್ಚಾರ್ ಅವರನ್ನು ಹತ್ಯೆ ಮಾಡಿ, ಯಾವುದೇ ಅನುಮಾನ ಬಾರದಂತೆ ಲ್ಯಾಂಡಿಂಗ್ ಕ್ಲಿಯರೆನ್ಸ್ ಪಡೆದು, ರನ್‌ವೇಯಲ್ಲಿದ್ದ ವಿಮಾನ ಅಥವಾ ವಿಮಾನ ನಿಲ್ದಾಣದ ಕಟ್ಟಡಕ್ಕೆ ಡಿಕ್ಕಿ ಹೊಡೆಸಲು ಆತ ಯೋಜಿಸಿದ್ದ. ಒಂದು ವೇಳೆ ವಿಮಾನ ನಿಲ್ದಾಣದಲ್ಲಿ ವಿಫಲವಾದರೆ ಟೆಲ್ ಅವಿವ್‌ನ ಗಗನಚುಂಬಿ ಕಟ್ಟಡ ಅಥವಾ ಜೋರ್ಡಾನ್‌ನಲ್ಲಿರುವ ಯುಎಸ್ ಮಿಲಿಟರಿ ಬೇಸ್ ಮೇಲೆ ವಿಮಾನ ಅಪ್ಪಳಿಸಲು ಯೋಚಿಸಿದ್ದ ಎಂದು ತಿಳಿಸಿದ್ದಾನೆ.
ಪೈಲಟ್ ಕೊಂದು ಫ್ಲೈದುಬೈ ವಿಮಾನ ಅಪಹರಣ, ಇಸ್ರೇಲ್ ಏರ್ ಪೋರ್ಟ್ ಮೇಲೆ ದಾಳಿಗೆ ಸಂಚು: ಬಯಲಾಯ್ತು ಉಗ್ರ ಸಹ ಪೈಲಟ್ ನ ಡೆಡ್ಲಿ ಪ್ಲ್ಯಾನ್
ಆದರೆ, ಜೋರ್ಡಾನ್ ವಾಯುಪ್ರದೇಶದಲ್ಲಿ ಹಮ್ಮಾಮಿ ಕೊಡಲಿಯಿಂದ ಭಾರತೀಯ ಕ್ಯಾಪ್ಟನ್ ಸ್ಮಿತ್ ತಲೆಗೆ ಭೀಕರವಾಗಿ ಹಲ್ಲೆ ನಡೆಸಿದರೂ, ರಕ್ತದ ಮಡುವಿನಲ್ಲೂ ಧೃತಿಗೆಡದ ಕ್ಯಾಪ್ಟನ್ ಸ್ಮಿತ್ ಆತನ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದರು. ತಕ್ಷಣವೇ ಅಪಾಯದ ಸಂಕೇತಗಳನ್ನು ಕಳುಹಿಸಿ ಕಾಕ್‌ಪಿಟ್ ಬಾಗಿಲು ತೆರೆದ ಪರಿಣಾಮ, ಕ್ಯಾಬಿನ್ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳನುಗ್ಗಿ ಉಗ್ರ ಮನಸ್ಥಿತಿಯ ಕೋ-ಪೈಲಟ್‌ನನ್ನು ಕಟ್ಟಿಹಾಕಿದರು. ಬಳಿಕ ವಿಮಾನದಲ್ಲಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ವಿಮಾನವನ್ನು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿ ನೂರಾರು ಜನರ ಜೀವ ಉಳಿಸಿದ್ದರು.
ದಾಳಿಗೂ ಮುನ್ನ ವಿಮಾನದ ಎಂಜಿನ್‌ಗಳನ್ನು ಆಫ್ ಮಾಡಿ, ರಡ್ಡರ್ ತಿರುಗಿಸಿದ್ದರಿಂದ ವಿಮಾನವು ಕೇವಲ ಒಂದು ನಿಮಿಷದಲ್ಲಿ 16,000 ಅಡಿಗಳಷ್ಟು ಕೆಳಗೆ ಜಾರಿ ಶಬ್ದದ ವೇಗವನ್ನು ತಲುಪಿತ್ತು ಎಂದು ವರದಿಯಾಗಿದೆ. ಹಮ್ಮಾಮಿ ತೀವ್ರಗಾಮಿ ಮತ್ತು ಅಲ್-ಖೈದಾ ಪರ ಒಲವು ಹೊಂದಿದ್ದ ಹಿನ್ನೆಲೆಯಲ್ಲಿ ಸ್ವಂತ ದೇಶವಾದ ಒಮಾನ್ ಆತನಿಗೆ ವಿಮಾನ ಹಾರಾಟ ನಿಷೇಧಿಸಿತ್ತು. ಆದರೂ ಫ್ಲೈದುಬೈ ಸಂಸ್ಥೆಗೆ ಆತ ಹೇಗೆ ಸೇರಿದ ಮತ್ತು ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧವಿಲ್ಲದ ಒಮಾನ್ ಪ್ರಜೆಗೆ ಇಸ್ರೇಲಿ ಪ್ರಯಾಣಿಕರಿದ್ದ ವಿಮಾನ ಹಾರಿಸಲು ಹೇಗೆ ಅನುಮತಿ ನೀಡಲಾಯಿತು ಎಂಬುದು ಭದ್ರತಾ ವ್ಯವಸ್ಥೆಯ ದೊಡ್ಡ ವೈಫಲ್ಯವನ್ನು ಪ್ರಶ್ನಿಸುವಂತಾಗಿದೆ.
ಸದ್ಯ ಅಬುಧಾಬಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಂಪರ್ಕಿಸಿ ಅವರ ಸಮಯಪ್ರಜ್ಞೆ ಮತ್ತು ಅದಮ್ಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ಇನ್ನೊಂದೆಡೆ, ಗುಪ್ತಚರ ಮಾಹಿತಿ ವಿನಿಮಯ ಮತ್ತು ವಿಮಾನ ಪ್ರಯಾಣಿಕರ ತಪಾಸಣೆ ವಿಚಾರದಲ್ಲಿ ಇಸ್ರೇಲ್‌ನ ಸಾರಿಗೆ ಸಚಿವಾಲಯ ಹಾಗೂ ದೇಶೀಯ ಭದ್ರತಾ ಸಂಸ್ಥೆ 'ಶಿನ್ ಬೆಟ್' ನಡುವೆ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ.