ಟೆಲ್ ಅವಿವ್, ಅ. 6: ಕಳೆದ ವಾರ ಟೆಲ್ ಅವಿವ್‌ಗೆ (Tel Aviv) ತೆರಳುತ್ತಿದ್ದ ಫ್ಲೈದುಬೈ (flydubai) ವಿಮಾನದ ಕಾಕ್‌ಪಿಟ್‌ನಲ್ಲಿ ಒಮಾನ್ ಮೂಲದ ಕೋ-ಪೈಲಟ್ ಭಾರತೀಯ ಮೂಲದ ಮುಖ್ಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯ ಬೆನ್ನಲ್ಲೇ, ವಿಮಾನದಲ್ಲಿದ್ದ 150ಕ್ಕೂ ಹೆಚ್ಚು ಸ್ವದೇಶಿ ಇಸ್ರೇಲ್ ನಾಗರಿಕರ ಜೀವದ ಹಂಗು ತೊರೆದು ಆ ವಿಮಾನವನ್ನೇ ಕ್ಷಿಪಣಿ ಮೂಲಕ ಹೊಡೆದುರುಳಿಸಲು ಇಸ್ರೇಲ್ ಸನ್ನದ್ಧವಾಗಿತ್ತು ಎಂಬ ಬೆಚ್ಚಿಬೀಳಿಸುವ ಮಾಹಿತಿ ಬೆಳಕಿಗೆ ಬಂದಿದೆ.
ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಮೇಲೆ ತುರ್ತು ಕೊಡಲಿಯಿಂದ ಹಲ್ಲೆ ನಡೆದು, ವಿಮಾನವು ದಿಢೀರನೆ 14,000 ಅಡಿ ಕೆಳಕ್ಕೆ ಕುಸಿದಾಗ ಇಸ್ರೇಲ್ ವಾಯುಪಡೆಯು ಸಂಪರ್ಕ ಸಾಧಿಸಲು ತೀವ್ರ ಪ್ರಯತ್ನ ನಡೆಸಿತು. ಆದರೆ ಒಳಗಿನಿಂದ ಯಾವುದೇ ರೇಡಿಯೋ ಸಂವಹನ ಬಾರದ ಹಿನ್ನೆಲೆಯಲ್ಲಿ ಅಮೆರಿಕದ 9/11 ಮಾದರಿಯ ಸಂಭವನೀಯ ಆತ್ಮಹತ್ಯಾ ದಾಳಿಯನ್ನು ತಡೆಯಲು ಇಸ್ರೇಲ್ ತಕ್ಷಣವೇ ತುರ್ತು ಕಮಾಂಡ್ ಸೆಂಟರ್ ಸ್ಥಾಪಿಸಿತು. ಜತೆಗೆ ಇಸ್ರೇಲ್‌ನ ಇಡೀ ವಾಯುಪ್ರದೇಶವನ್ನು ಬಂದ್ ಮಾಡಿ, ಮುನ್ನೆಚ್ಚರಿಕೆಯಾಗಿ ಯುದ್ಧ ವಿಮಾನಗಳನ್ನು ಆಗಸಕ್ಕೆ ಹಾರಿಸಿತು.
ಒಂದು ವೇಳೆ ಅಪಹೃತ ವಿಮಾನವು ಇಸ್ರೇಲ್ ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದಿಷ್ಟ ಮಿತಿಗೆ ಪ್ರವೇಶಿಸಿದ್ದರೆ, ಇಸ್ರೇಲ್ ಫೈಟರ್ ಜೆಟ್‌ಗಳು ಜೋರ್ಡಾನ್ ವಾಯು ಪ್ರದೇಶಕ್ಕೆ ನುಗ್ಗಿ ಕಾಕ್‌ಪಿಟ್ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸುತ್ತಿದ್ದವು. ವಿಮಾನವು ಹೈಜಾಕ್ ಆಗಿದೆ ಮತ್ತು ಪೈಲಟ್‌ಗಳು ರೇಡಿಯೋ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಖಚಿತಪಟ್ಟಿದ್ದರೆ, ಅಂತಿಮ ನಿರ್ಧಾರಕ್ಕಾಗಿ ಇಸ್ರೇಲ್ ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವರ ಅನುಮತಿ ಪಡೆಯಲಾಗುತ್ತಿತ್ತು.
ಟೆಲ್ ಅವಿವ್‌ನ ಪ್ರಸಿದ್ಧ ಗಗನಚುಂಬಿ ಕಟ್ಟಡವಾದ ಅಜ್ರಿಯೇಲಿ ಟವರ್ಸ್ ಅಥವಾ ವಿಮಾನ ನಿಲ್ದಾಣಕ್ಕೆ ವಿಮಾನ ಅಪ್ಪಳಿಸಿ ನೂರಾರು ಜನರ ಪ್ರಾಣಹಾನಿಯಾಗುವುದನ್ನು ತಪ್ಪಿಸಲು, ಸ್ವಂತ ನಾಗರಿಕರಿದ್ದ ಪ್ರಯಾಣಿಕ ವಿಮಾನವನ್ನು ಹೊಡೆದುರುಳಿಸುವುದೇ ಸರಿ ಎಂಬ ಕಠಿಣ ನಿಯಮವನ್ನು ಇಸ್ರೇಲ್ ಜಾರಿಗೆ ತರಲು ಸಜ್ಜಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ವಿಮಾನವು ಸೌದಿ ಅರೇಬಿಯಾದ ಕಡೆಗೆ ತಿರುಗಿದ್ದರಿಂದ ಇಸ್ರೇಲ್ ತನ್ನ ಯುದ್ಧ ವಿಮಾನಗಳನ್ನು ಹಿಂಪಡೆಯಿತು. ಬಳಿಕ ರಕ್ತದ ಮಡುವಿನಲ್ಲೂ ಧೃತಿಗೆಡದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಕಾಕ್‌ಪಿಟ್ ಬಾಗಿಲು ತೆರೆದು ಪ್ರಯಾಣಿಕರ ನೆರವಿನಿಂದ ಉಗ್ರ ಕೋ-ಪೈಲಟ್‌ನನ್ನು ಕಟ್ಟಿಹಾಕಿದ್ದರು.
ಬಂಧಿತ 29 ವರ್ಷದ ಒಮಾನಿ ಕೋ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಸದ್ಯ ಯುಎಇ ತನಿಖಾಧಿಕಾರಿಗಳ ವಶದಲ್ಲಿದ್ದು, ಇಸ್ರೇಲ್ ಅಧಿಕಾರಿಗಳೂ ತನಿಖೆಯಲ್ಲಿ ಭಾಗಿಯಾಗಿದ್ದಾರೆ. ತಾನು ದಾಳಿ ನಡೆಸಲೆಂದೇ ಟೆಲ್ ಅವಿವ್‌ಗೆ ಹಾರಾಟ ನಡೆಸುವ ಫ್ಲೈದುಬೈ ಸಂಸ್ಥೆಗೆ ಸೇರಿಕೊಂಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಇಸ್ರೇಲ್ ಜತೆ ರಾಜತಾಂತ್ರಿಕ ಸಂಬಂಧವೇ ಇಲ್ಲದ ಒಮಾನ್ ಪ್ರಜೆಯೊಬ್ಬ ಇಸ್ರೇಲ್ ಪ್ರಯಾಣಿಕರಿದ್ದ ವಿಮಾನ ಹಾರಿಸಲು ಹೇಗೆ ಅನುಮತಿ ಪಡೆಯಲು ಸಾಧ್ಯವಾಯಿತು ಎನ್ನುವ ವಿಚಾರದಲ್ಲಿ ಗಂಭೀರ ಭದ್ರತಾ ಲೋಪದ ಕುರಿತು ಇಸ್ರೇಲ್‌ನ ಗುಪ್ತಚರ ಸಂಸ್ಥೆಗಳಾದ ಮೊಸಾದ್ ಮತ್ತು ಶಿನ್ ಬೆಟ್ ವ್ಯಾಪಕ ಟೀಕೆಗೆ ಗುರಿಯಾಗಿವೆ.