ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (French President Emmanuel Macron) ಅವರ ಆಪ್ತ ಮಿತ್ರರಾಗಿದ್ದ ಪ್ರಧಾನಿ (French Prime Minister) ಸೆಬಾಸ್ಟಿಯನ್ ಲೆಕೋರ್ನು ಪ್ರಧಾನಿಯಾಗಿ (France PM) ಅಧಿಕಾರ ವಹಿಸಿಕೊಂಡ ತಿಂಗಳೊಳಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹೊಸ ಸಚಿವ ಸಂಪುಟ ರಚನೆ ಮಾಡಿದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿರುವ ಅವರು ಈ ಮೂಲಕ ಅತ್ಯಂತ ಕಡಿಮೆ ಅವಧಿಯ ಫ್ರಾನ್ಸ್ ಪ್ರಧಾನಿ ಎನಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಐದು ಮಂದಿ ಪ್ರಧಾನಿ ಹುದ್ದೆಗೆ ಏರಿದರೂ ಯಾರೂ ಸ್ಥಿರ ಬಹುಮತವನ್ನು ಪಡೆಯಲು ಸಾಧ್ಯವಾಗಿಲ್ಲ.
ಫ್ರೆಂಚ್ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಸೋಮವಾರ ತಮ್ಮ ಹೊಸ ಸಚಿವ ಸಂಪುಟವನ್ನು ರಚಿಸಿದರು. ಬಳಿಕ ಕೆಲವೇ ಗಂಟೆಗಳಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. ಇದು ದೇಶವನ್ನು ಮತ್ತಷ್ಟು ರಾಜಕೀಯ ಬಿಕ್ಕಟ್ಟಿಗೆ ದೂಡಿದೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಪ್ತ ಸ್ನೇಹಿತರಾಗಿದ್ದ ಸೆಬಾಸ್ಟಿಯನ್ ಲೆಕೋರ್ನು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿ ನಾಲ್ಕು ವಾರಗಳು ಕೂಡ ಕಳೆದಿಲ್ಲ. ಹೀಗಾಗಿ ಅವರ ನಿರ್ಗಮನದಿಂದ ಎಮ್ಯಾನುಯೆಲ್ ಮ್ಯಾಕ್ರನ್ ಕೂಡ ಅವಮಾನ ಎದುರಿಸುವಂತಾಗಿದೆ.
ಕಳೆದ ವರ್ಷದ ಸಂಸತ್ತಿನ ಫಲಿತಾಂಶವನ್ನು ಇನ್ನೂ ಅರಗಿಸಿಕೊಳ್ಳಲಾಗದ ಮ್ಯಾಕ್ರನ್ ಅವರ ಆಡಳಿತದ ವಿರುದ್ಧ ಸಾರ್ವಜನಿಕ ಹತಾಶೆ ಎದ್ದು ಕಾಣುತ್ತಿದೆ. ಅವರು ಮತದಾನವಿಲ್ಲದೆ ಶಾಸನವನ್ನು ಜಾರಿಗೆ ತರಲು ಫ್ರೆಂಚ್ ಸಂವಿಧಾನದ 49.3ನೇ ಷರತ್ತು ಅನ್ನು ಬಳಸುವುದಿಲ್ಲ ಎಂದು ಹೇಳಿರುವುದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ಸರ್ಕಾರವನ್ನು ರೂಪಿಸಲು ಲೆಕಾರ್ನು ಅವರಿಗೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಲೆಕಾರ್ನು ಸರ್ಕಾರದಲ್ಲಿ ಸಚಿವನಾಗಿರುವ ರಿಪಬ್ಲಿಕನ್ನರ ನಾಯಕ ಬ್ರೂನೋ ರಿಟೇಲ್ಲಿಯು ತಮ್ಮ ಮಾಜಿ ಸಹೋದ್ಯೋಗಿಯ ಮಂತ್ರಿಗಳ ಆಯ್ಕೆಗೆ ಆಕ್ರೋಶ ವ್ಯಕಪಡಿಸಿದ್ದು, ಇದು ಭರವಸೆಗೆ ಯೋಗ್ಯವಾಗಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ರಿಟೇಲ್ಲಿಯ ಹೇಳಿಕೆಗೆ ಬಲಪಂಥೀಯರು ಬೆಂಬಲ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಯಾಗಿ ತೀವ್ರ ಬಲಪಂಥೀಯ ರಾಷ್ಟ್ರೀಯ ರಾಲಿಯ ಅಧ್ಯಕ್ಷ ಜೋರ್ಡಾನ್ ಬಾರ್ಡೆಲ್ಲಾ ಸರ್ಕಾರದ ಪತನಕ್ಕೆ ಮ್ಯಾಕ್ರನ್ ಅವರನ್ನು ದೂರಿದರು. ಅವರು ಕ್ಯಾಬಿನೆಟ್ ಅನ್ನು ಆಯ್ಕೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಕೂಡಲೇ ಲೆಕೋರ್ನು ಅವರು ಸಂಸತ್ತನ್ನು ವಿಸರ್ಜಿಸುವಂತೆ ಒತ್ತಾಯಿಸಿದ್ದರು. ಇದು ಸಾಕಷ್ಟು ರಾಜಕೀಯ ಬಿಕ್ಕಟ್ಟಿಗೆ ಮತ್ತಷ್ಟು ಕಾರಣವಾಗಿತ್ತು.
ಪರಿಣಾಮ ಏನು?
ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಅವರ ರಾಜೀನಾಮೆಯಿಂದ ಉಂಟಾಗಿರುವ ಫ್ರೆಂಚ್ ರಾಜಕೀಯ ಅಸ್ಥಿರತೆಯು ದೇಶದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಿದೆ. ಸೋಮವಾರ ಬೆಳಗ್ಗೆ ಪ್ಯಾರಿಸ್ ಷೇರು ವಿನಿಮಯ ಕೇಂದ್ರವು ಶೇ. 1.7ರಷ್ಟು ಕುಸಿದಿದೆ. ಇದರಿಂದ ಮುಂಬರುವ ಬಜೆಟ್ ಬಗ್ಗೆ ಈಗಲೇ ಕಳವಳ ಹೆಚ್ಚಾಗಿದೆ.