Rajnath Singh: ಅಕ್ಟೋಬರ್ 9, 10ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಸ್ಟ್ರೇಲಿಯಾ ಪ್ರವಾಸ; ರಕ್ಷಣೆಯಲ್ಲಿ ಸಹಕಾರ ಒಪ್ಪಂದ ಸಾಧ್ಯತೆ
ಆಸ್ಟ್ರೇಲಿಯಾದ ಉಪ ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವ ರಿಚರ್ಡ್ ಮಾರ್ಲೆಸ್ ಅವರ ಆಹ್ವಾನದ ಮೇರೆಗೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಕ್ಟೋಬರ್ 9 ಮತ್ತು 10ರಂದು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಮುಖ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ.

-

ನವದೆಹಲಿ: ಆಸ್ಟ್ರೇಲಿಯಾದ (Australia) ಉಪ ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವ (Australia’s Deputy Prime Minister and Defence Minister) ರಿಚರ್ಡ್ ಮಾರ್ಲೆಸ್ (Richard Marles) ಅವರ ಆಹ್ವಾನದ ಮೇರೆಗೆ ಭಾರತದ ರಕ್ಷಣಾ ಸಚಿವ (Defence Minister) ರಾಜನಾಥ್ ಸಿಂಗ್ (Rajnath Singh) 2 ದಿನಗಳ ಕಾಲ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಕ್ಟೋಬರ್ 9 ಮತ್ತು 10ರಂದು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಲಿರುವ ಅವರು, ಎರಡು ರಾಷ್ಟ್ರಗಳ ನಡುವಿನ ಸಹಕಾರವನ್ನು ಹೆಚ್ಚಿಸಲು ಪ್ರಮುಖ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆಸ್ಟ್ರೇಲಿಯಾಕ್ಕೆ ಮೊದಲ ಬಾರಿಗೆ ಸಿಂಗ್ ಭೇಟಿ ನೀಡಲಿದ್ದಾರೆ.
ಅಕ್ಟೋಬರ್ 9 ಮತ್ತು 10ರಂದು ಆಸ್ಟ್ರೇಲಿಯಾ ಪ್ರವಾಸ ನೀಡಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಎರಡು ದಿನಗಳ ಅಧಿಕೃತ ಈ ಭೇಟಿಯು ಭಾರತ ಮತ್ತು ಆಸ್ಟ್ರೇಲಿಯಾ ಸಂಬಂಧಗಳಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಮೊದಲ ಬಾರಿಗೆ ಭಾರತೀಯ ರಕ್ಷಣಾ ಸಚಿವರು ಭಾರತ ಮತ್ತು ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ (CSP) ಐದನೇ ವಾರ್ಷಿಕೋತ್ಸವದ ಸಂದರ್ಭದಲ್ಲಿಆಸ್ಟ್ರೇಲಿಯಾಕ್ಕೆ ಭೇಟಿ ನೀಡಲಿದ್ದಾರೆ.
ಎರಡು ರಾಷ್ಟ್ರಗಳ ಪ್ರಮುಖ ನಾಯಕರು ಈ ಸಂದರ್ಭದಲ್ಲಿ ಮಾಹಿತಿ ಹಂಚಿಕೆ, ಕಡಲ ಭದ್ರತೆ ಮತ್ತು ಜಂಟಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಕಾರವನ್ನು ಬಲಪಡಿಸುವ ಮೂರು ಮಹತ್ವದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಲಿದೆ. ಇದು ಇಂಡೋ- ಪೆಸಿಫಿಕ್‌ನಲ್ಲಿ ದ್ವಿಪಕ್ಷೀಯ ರಕ್ಷಣಾ ಸಮನ್ವಯವನ್ನು ಸದೃಢಗೊಳಿಸಿ ಪ್ರಾದೇಶಿಕ ಸ್ಥಿರತೆಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.
ರಿಚರ್ಡ್ ಮಾರ್ಲ್ಸ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿರುವ ರಾಜನಾಥ್ ಸಿಂಗ್, ರಕ್ಷಣಾ ಸಹಯೋಗವನ್ನು ಮತ್ತಷ್ಟು ಬಲಪಡಿಸಲು ಹೊಸ ವಿಷಯಗಳು ಹಾಗೂ ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಮಿಲಿಟರಿ ಪ್ರಭಾವದ ಕುರಿತು ಕೂಡ ಚರ್ಚಿಸುವ ಸಾಧ್ಯತೆ ಇದೆ.
ಸಿಡ್ನಿಯಲ್ಲಿ ವ್ಯಾಪಾರ ದುಂಡುಮೇಜಿನ ಸಭೆಯನ್ನು ಮುನ್ನಡೆಸಲಿರುವ ರಾಜನಾಥ್ ಸಿಂಗ್ ಬಳಿಕ ಆಸ್ಟ್ರೇಲಿಯಾದ ಹಿರಿಯ ನಾಯಕರನ್ನು ಭೇಟಿಯಾಗಲಿದ್ದಾರೆ. ಕೇವಲ ರಕ್ಷಣಾ ವಿಷಯಗಳು ಮಾತ್ರವಲ್ಲ ಇನ್ನು ಹಲವು ಪ್ರಮುಖ ವಿಚಾರಗಳ ಕುರಿತು ಪ್ರಸ್ತಾವನೆ ನಡೆಸುವ ಸಾಧ್ಯತೆಗಳಿರುತ್ತವೆ.
ಇದನ್ನೂ ಓದಿ: Bihar Assembly Election: ಕೊನೆಗೂ ಫಿಕ್ಸ್ ಆಯ್ತು ಬಿಹಾರ ಚುನಾವಣೆ ದಿನಾಂಕ; ಇಂದು 4 ಗಂಟೆಗೆ ಸುದ್ದಿಗೋಷ್ಠಿ
ಮಾರ್ಲ್ಸ್ ಕೊನೆಯದಾಗಿ ಕಳೆದ ಜೂನ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ಭೇಟಿ ಮಾಡಿದ್ದರು. ಇದರ ಮುಂದುವರಿದ ಭಾಗವಾಗಿ ಈಗ ರಾಜ್ ನಾಥ್ ಸಿಂಗ್ ಆಸ್ಟ್ರೇಲಿಯಾ ಪ್ರವಾಸ ಮಾಡಲಿದ್ದಾರೆ.