ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮೆರಿಕದಲ್ಲಿ ಭಾರತೀಯ ಮೂಲದ ಗೂಗಲ್ ತಂತ್ರಜ್ಞಾನ ನಾಯಕಿ ಶೀತಲ್ ವೃಜಿಸಿಯನ್ ಗುಂಡಿಕ್ಕಿ ಕೊಲೆ: ಪತಿ ಬಂಧನ

ಅಮೆರಿಕದ ಜಾರ್ಜಿಯಾದಲ್ಲಿ ನಡೆದ ಕೌಟುಂಬಿಕ ಕಲಹದ ವೇಳೆ ಭಾರತೀಯ ಮೂಲದ ಗೂಗಲ್ ಸೀನಿಯರ್ ಎಂಜಿನಿಯರಿಂಗ್ ಮ್ಯಾನೇಜರ್ ಶೀತಲ್ ವೃಜಿಸಿಯನ್ ಅವರನ್ನು ಅವರ ಪತಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹತ್ಯೆಯಾದ ಶೀತಲ್ ವೃಜಿಸಿಯನ್‌ (ಸಂಗ್ರಹ ಚಿತ್ರ)

ವಾಷಿಂಗ್ಟನ್‌, ಜು. 11: ಅಮೆರಿಕದ ಜಾರ್ಜಿಯಾದ ಕೊಬ್ ಕೌಂಟಿಯಲ್ಲಿ ನಡೆದ ಭೀಕರ ಗೃಹಹಿಂಸೆ ಪ್ರಕರಣವೊಂದರಲ್ಲಿ, ಜಾಗತಿಕ ತಂತ್ರಜ್ಞಾನ ವಲಯದ ಪ್ರಮುಖ ನಾಯಕಿ, ಭಾರತೀಯ ಮೂಲದ 57 ವರ್ಷದ ಶೀತಲ್ ವೃಜಿಸಿಯನ್‌ (Sheetal Wrzesien) ಅವರನ್ನು ಅವರ ಪತಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ದಂಪತಿಯ 23 ವರ್ಷದ ಮಗ ಜೇಸನ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಕೊಬ್ ಕೌಂಟಿ ಪೊಲೀಸರ ಪ್ರಕಾರ, ಸ್ಮಿರ್ನಾ ಬಳಿಯ ಲಾರೆಲ್ ಕ್ರೀಕ್ ಟ್ರೇಲ್‌ನಲ್ಲಿರುವ ದಂಪತಿಯ ನಿವಾಸದಲ್ಲಿ ಮಂಗಳವಾರ ರಾತ್ರಿ 8ರ ಸುಮಾರಿಗೆ ಕೌಟುಂಬಿಕ ಕಲಹ ತಾರಕಕ್ಕೇರಿ ಈ ದುರಂತ ಸಂಭವಿಸಿದೆ. ಪೋಷಕರ ನಡುವೆ ಜಗಳ ನಡೆಯುತ್ತಿದ್ದಾಗ ಮಧ್ಯಪ್ರವೇಶಿಸಿದ ಮಗನ ಬೆನ್ನಿಗೆ ಪತಿ ಕಿರ್ಕ್ ಬಿ. ವೃಜಿಸಿಯನ್ ಗುಂಡು ಹಾರಿಸಿದ್ದಾನೆ. ಗಾಯಗೊಂಡ ಮಗ ನೆರೆಹೊರೆಯವರ ಮನೆಗೆ ಓಡಿಹೋಗಿ ಸಹಾಯ ಕೋರಿದ್ದು, ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಶೀತಲ್ ಮನೆಯೊಳಗೆ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ.

ಆರೋಪಿ ಪತಿಯ ಬಂಧನ

ಹತ್ಯೆ ಎಸಗಿದ ಬಳಿಕ ಸ್ಥಳದಲ್ಲೇ ಇದ್ದ 56 ವರ್ಷದ ಪತಿ ಕಿರ್ಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲಾಗಿದ್ದು, ಸದ್ಯ ಕೊಬ್ ಕೌಂಟಿ ಅಡಲ್ಟ್ ಡಿಟೆನ್ಶನ್ ಸೆಂಟರ್‌ನಲ್ಲಿ ಇರಿಸಲಾಗಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ಆರೋಪಿಯ ವಿರುದ್ಧ ಕೊಲೆ, ಘೋರ ಹಲ್ಲೆ, ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಸೇರಿದಂತೆ ಐದು ಪ್ರಮುಖ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.

ಹಿಜ್ಬುಲ್ ಭಯೋತ್ಪಾದಕ ಇಮ್ತಿಯಾಜ್ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ

ತಂತ್ರಜ್ಞಾನ ವಲಯದಲ್ಲಿ ಅತ್ಯುನ್ನತ ಸಾಧನೆ

ಶೀತಲ್ ವೃಜಿಸಿಯನ್ ಅವರ ಹಠಾತ್ ಸಾವು ಜಾಗತಿಕ ತಂತ್ರಜ್ಞಾನ ವಲಯ ಹಾಗೂ ಜಾರ್ಜಿಯಾದ ಭಾರತೀಯ ಸಮುದಾಯಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಶೀತಲ್ ಅವರು ಗೂಗಲ್ ಸಂಸ್ಥೆಯಲ್ಲಿ ಸೀನಿಯರ್ ಎಂಜಿನಿಯರಿಂಗ್ ಮ್ಯಾನೇಜರ್ ಮತ್ತು ಮಾರ್ಕೆಟಿಂಗ್ ಟೆಕ್ನಾಲಜಿ ಅಡ್ವೈಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಸುದೀರ್ಘ ಅನುಭವ ಹೊಂದಿದ್ದರು.

ಇಂಗ್ಲೆಂಡ್, ಭಾರತ ಮತ್ತು ಘಾನಾ ದೇಶಗಳಲ್ಲಿ ತಮ್ಮ ಬಾಲ್ಯವನ್ನು ಕಳೆದಿದ್ದ ಶೀತಲ್, 1994ರಲ್ಲಿ ಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದರು. ಗೂಗಲ್‌ಗಿಂತ ಮುನ್ನ ಅವರು 'ದಿ ಹೋಮ್ ಡಿಪೋ' ಸೇರಿ ಅಮೆರಿಕದ ಪ್ರಮುಖ ರೀಟೇಲ್ ಕಂಪನಿಗಳ ಡಿಜಿಟಲ್ ಟ್ರಾನ್ಸ್‌ಫಾರ್ಮೇಶನ್ ಯೋಜನೆಗಳ ನೇತೃತ್ವ ವಹಿಸಿದ್ದರು. ಎರಡು ಸಾಫ್ಟ್‌ವೇರ್ ಪೇಟೆಂಟ್‌ಗಳನ್ನು ತಮ್ಮ ಹೆಸರಿಗೆ ಹೊಂದಿದ್ದ ಅವರು, ಜಾರ್ಜಿಯಾ ಟೆಕ್ ಅಲುಮ್ನಿ ಅಸೋಸಿಯೇಷನ್‌ನ ಟ್ರಸ್ಟಿ ಆಗಿ ಮತ್ತು ಕಂಪ್ಯೂಟಿಂಗ್ ಕಾಲೇಜಿನ ಸಲಹಾ ಮಂಡಳಿಯ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಅದರಲ್ಲೂ ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳಲ್ಲಿ ಅವರು ಸಕ್ರಿಯ ಮಾರ್ಗದರ್ಶಕರಾಗಿದ್ದರು.