ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಮತ್ತೆ ಹಿಂಸಾಚಾರ ನಡೆದಿದೆ. ಖೈಬರ್ ಜಿಲ್ಲೆಯ ತಿರಾ ಕಣಿವೆಯಲ್ಲಿ ಭದ್ರತಾ (Terror Attack) ಪಡೆಯ ಮೇಲೆ ಬಂದೂಕುಧಾರಿಗಳು ಹೊಂಚು ಹಾಕಿ ದಾಳಿ ನಡೆಸಿದಾಗ ಕನಿಷ್ಠ ಮೂವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ಭದ್ರತಾ ಮೂಲಗಳ ಪ್ರಕಾರ, ದಾಳಿಯು ಬೆಳಗಿನ ಜಾವ ಪ್ರಾರಂಭವಾಯಿತು ಮತ್ತು ಬಂದೂಕುಧಾರಿಗಳು ಮತ್ತು ಭದ್ರತಾ ಪಡೆಗಳ 30 ನಿಮಿಷಗಳ ಕಾಲ ಭಾರೀ ಗುಂಡಿನ ಚಕಮಕಿ ನಡೆಯಿತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದಾಳಿಕೋರರು ಸುತ್ತಮುತ್ತಲಿನ ಬೆಟ್ಟಗಳಿಂದ ಅನಿರೀಕ್ಷಿತ ದಾಳಿ ನಡೆಸಿ, ಭದ್ರತಾ ಠಾಣೆಯನ್ನು ವಶಪಡಿಸಿಕೊಂಡರು ಎಂದು ವರದಿಯಾಗಿದೆ.
ನಾಲ್ಕರಿಂದ ಐದು ಸೈನಿಕರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದು, ಗಾಯಗೊಂಡ ಎಲ್ಲಾ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಹತ್ತಿರದ ಮಿಲಿಟರಿ ಆಸ್ಪತ್ರೆಗೆ ಸಾಗಿಸಲಾಯಿತು. ತಕ್ಷಣವೇ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಯಿತು ಮತ್ತು ಪರಾರಿಯಾಗಿರುವ ದಾಳಿಕೋರರನ್ನು ಪತ್ತೆಹಚ್ಚಲು ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಅಫ್ಘಾನಿಸ್ತಾನ ಗಡಿಯ ಸಮೀಪವಿರುವ ಪರ್ವತ ಪ್ರದೇಶವು ಬಹಳ ಹಿಂದಿನಿಂದಲೂ ಉಗ್ರಗಾಮಿ ಚಟುವಟಿಕೆಗಳ ತಾಣವಾಗಿದೆ. ಒಂದು ಕಾಲದಲ್ಲಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮತ್ತು ಸಂಯೋಜಿತ ಗುಂಪುಗಳ ಭದ್ರಕೋಟೆಯಾಗಿತ್ತು.
ಕಳೆದ ವಾರವಷ್ಟೇ, ಉತ್ತರ ವಜೀರಿಸ್ತಾನದಲ್ಲಿ ಇದೇ ರೀತಿಯ ಹೊಂಚುದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದರು. ಶುಕ್ರವಾರ ರಾತ್ರಿ ಉತ್ತರ ವಜಿರಿಸ್ತಾನ್ ಮತ್ತು ಕುರ್ರಂ ಜಿಲ್ಲೆಗಳಲ್ಲಿ ನಡೆಸಿದ ಎರಡೂ ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಗಳು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ. ಕುರ್ರಂ ಜಿಲ್ಲೆಯ ಘಾಕಿ ಮತ್ತು ಉತ್ತರ ವಜಿರಿಸ್ತಾನ್ ಜಿಲ್ಲೆಯ ಸ್ಪಿನ್‌ವಾಮ್ ಬಳಿ ಅಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ನುಸುಳಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರ ಎರಡು ದೊಡ್ಡ ಗುಂಪುಗಳ ಚಲನವಲನಗಳನ್ನು ಭದ್ರತಾ ಪಡೆಗಳು ಪತ್ತೆಹಚ್ಚಿವೆ ಎಂದು ಪಾಕ್ ಸೇನೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Pakistan-Afghanistan War: ತಾಲಿಬಾನ್ ಜತೆ ಶಾಂತಿ ಮಾತುಕತೆ ನಡುವೆಯೇ ಪಾಕಿಸ್ತಾನ-ಅಫ್ಘಾನ್ ಗಡಿಯಲ್ಲಿ ಘರ್ಷಣೆ; 5 ಪಾಕ್ ಸೈನಿಕರು ಬಲಿ
ಪಾಕಿಸ್ತಾನದಲ್ಲಿ ಇತ್ತೀಚೆಗೆ ನಿರಂತರ ಭಯೋತ್ಪಾದಕ ದಾಳಿಗಳು, ಆಂತರಿಕ ಸಂಘರ್ಷಗಳು ಹೆಚ್ಚಳ ಕಾಣುತ್ತಿವೆ. ವಿಶೇಷವಾಗಿ ಖೈಬರ್ ಕಣಿವೆ ಮತ್ತು ಬಲೂಚಿಸ್ತಾನದಲ್ಲಿ ಭಾರಿ ಪ್ರಮಾಣದ ಹಿಂಸಾಚಾರ ಘಟನೆಗಳು ನಡೆಯುತ್ತಿವೆ. ಪೊಲೀಸರು, ಕಾನೂನು ಜಾರಿ ಸಿಬ್ಬಂದಿ ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿಗಳು ನಡೆಯುತ್ತಿವೆ. ನಿಷೇಧಿತ ಟಿಟಿಪಿ 2022 ರಲ್ಲಿ ಸರ್ಕಾರದೊಂದಿಗೆ ಮಾಡಿಕೊಂಡ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ ನಂತರ ಈ ಏರಿಕೆ ಕಂಡುಬಂದಿದೆ.