ಗಾಜಾ: ಹಮಾಸ್ ಒತ್ತೆಯಾಳುವಾಗಿ (Hamas hostage) ಮಾಡಿಕೊಂಡಿರುವ ಕೊನೆಯ ಜೀವಂತ ಅಮೆರಿಕನ್ ಪ್ರಜೆಯ (American) ಬಿಡುಗಡೆಗೆ ಹಮಾಸ್ ಒಪ್ಪಿಕೊಂಡಿದೆ. ಅಕ್ಟೋಬರ್ 2023ರಿಂದ ಹಮಾಸ್ ನ ಒತ್ತೆಯಾಳು ಆಗಿರುವ ಇಸ್ರೇಲ್ ಅಮೆರಿಕನ್ ಸೈನಿಕ ( Israeli-American soldier) 21 ವರ್ಷದ ಎಡಾನ್ ಅಲೆಕ್ಸಾಂಡರ್ (Edan Alexander) ಅವರನ್ನು ಕದನ ವಿರಾಮದ ಮಧ್ಯೆ ಮಂಗಳವಾರ ಬಿಡುಗಡೆ ಮಾಡುವುದಾಗಿ ಹಮಾಸ್ ತಿಳಿಸಿದೆ. ಈ ಕುರಿತು ಅಮೆರಿಕ ಅಧ್ಯಕ್ಷ (US President) ಡೊನಾಲ್ಡ್ ಟ್ರಂಪ್ (Donald Trump ) ಸಾಮಾಜಿಕ ಮಾಧ್ಯಮದ ಮೂಲಕ ಪೋಸ್ಟ್ ಮಾಡಿದ್ದು, ಅಮೆರಿಕನ್ ಪ್ರಜೆಯ ಬಿಡುಗಡೆಗಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
ಹಮಾಸ್ ವಶದಲ್ಲಿರುವ ಕೊನೆಯ ಅಮೆರಿಕನ್ ಒತ್ತೆಯಾಳು ಎಡಾನ್ ಅಲೆಕ್ಸಾಂಡರ್ ಅವರ ಬಿಡುಗಡೆಗೆ ಹಮಾಸ್ ಒಪ್ಪಿಗೆ ಸೂಚಿಸಿರುವುದು ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ಗಾಜಾದಲ್ಲಿಸ್ಥಗಿತಗೊಂಡಿರುವ ಕದನ ವಿರಾಮ ಮಾತುಕತೆಯನ್ನು ಮತ್ತೆ ಆರಂಭಿಸಲು ಸರಿಯಾದ ಸಮಯ ಎಂದು ಕತಾರ್ ಮತ್ತು ಈಜಿಪ್ಟ್ ಹೇಳಿದೆ. ಎಡಾನ್ ಅಲೆಕ್ಸಾಂಡರ್ ಅವರನ್ನು ಮಂಗಳವಾರ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎನ್ನಲಾಗಿದೆ.
ಈ ಕುರಿತು ಸೋಮವಾರ ಪೋಸ್ಟ್ ಮಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಕ್ಟೋಬರ್ 2023ರಿಂದ ಹಮಾಸ್ ಒತ್ತೆಯಾಳುವಾಗಿರುವ ಅಮೆರಿಕನ್ ಪ್ರಜೆ ಎಡಾನ್ ಅಲೆಕ್ಸಾಂಡರ್ ತಮ್ಮ ಕುಟುಂಬ ಮತ್ತು ಮನೆಗೆ ಮರಳುತ್ತಿದ್ದಾರೆ ಎಂದು ಘೋಷಿಸಲು ಸಂತೋಷವಾಗಿದೆ. ಈ ಸ್ಮರಣೀಯ ಸುದ್ದಿಯನ್ನು ನನಸಾಗಿಸುವಲ್ಲಿ ಭಾಗಿಯಾಗಿರುವ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
ಎಡಾನ್ ಅಲೆಕ್ಸಾಂಡರ್ ಯಾರು?
ಅಮೆರಿಕದ ನ್ಯೂಜೆರ್ಸಿಯಲ್ಲಿ ಜನಿಸಿದ ಎಡಾನ್ ಅಲೆಕ್ಸಾಂಡರ್ ಅಲ್ಲೇ ಬೆಳೆದಿದ್ದು, ಬಳಿಕ ಇಸ್ರೇಲ್ ಸೈನ್ಯಕ್ಕೆ ಸೇರಿದ್ದರು. ಇಸ್ರೇಲ್ ಮೇಲೆ 2023ರ ಅಕ್ಟೋಬರ್ 7ರಂದು ಹಮಾಸ್ ದಾಳಿಯ ಬಳಿಕ ಗಾಜಾದಲ್ಲಿ ಅವರು ಬಂಧನಕ್ಕೊಳಗಾಗಿದ್ದರು. ಇದೀಗ ಅವರ ಬಿಡುಗಡೆ ಹಮಾಸ್ ಒಪ್ಪಿಕೊಂಡಿದ್ದು, ಇದು ಕದನ ವಿರಾಮ ಒಪ್ಪಂದವನ್ನು ಮುಂದುವರಿಸಲು ಮತ್ತು ಯುದ್ಧದಿಂದ ಹಾನಿಗೊಳಗಾದ ಪ್ರದೇಶಕ್ಕೆ ಮಾನವೀಯ ನೆರವು ನೀಡುವಂತೆ ಮಾಡಲು ಒಂದು ಪ್ರಮುಖ ಹೆಜ್ಜೆಯಾಗಲಿದೆ. ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ 1,200 ಜನರು ಸಾವನ್ನಪ್ಪಿದ್ದು, 251ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಗಾಜಾದಲ್ಲಿ ಇಸ್ರೇಲ್ ನಡೆಸಿದ ಮಿಲಿಟರಿ ಕಾರ್ಯಾಚರಣೆಯಿಂದ 52,800ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಬಲಿಯಾಗಿದ್ದರು.
ಟ್ರಂಪ್ ಶ್ಲಾಘನೆ
ಈ ವಾರದಲ್ಲಿ ಮಧ್ಯಪ್ರಾಚ್ಯಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಇದಕ್ಕೂ ಮುನ್ನವೇ ಅಮೆರಿಕನ್ ಪ್ರಜೆಯ ಬಿಡುಗಡೆಯ ಸುದ್ದಿ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ. ಇವರ ಬಿಡುಗಡೆಗೆ ಯುನೈಟೆಡ್ ಸ್ಟೇಟ್ಸ್ ನೊಂದಿಗೆ ಕತಾರ್ ಮತ್ತು ಈಜಿಪ್ಟ್ ಕೂಡ ಶ್ರಮಿಸಿದೆ. ಈ ಕ್ರೂರ ಯುದ್ಧವನ್ನು ಕೊನೆಗೊಳಿಸಲು ಮತ್ತು ಎಲ್ಲಾ ಜೀವಂತ ಒತ್ತೆಯಾಳುಗಳನ್ನು ಅವರ ಪ್ರೀತಿಪಾತ್ರರಿಗೆ ಒಪ್ಪಿಸಲು ತೆಗೆದುಕೊಂಡ ಪ್ರಮುಖ ಹೆಜ್ಜೆಯಾಗಿದೆ ಎಂದು ಟ್ರುತ್ ನಲ್ಲಿ ಬರೆದಿದ್ದಾರೆ. ಟ್ರಂಪ್ ಅವರ ವಿಶೇಷ ರಾಯಭಾರಿ ಆಡಮ್ ಬೋಹ್ಲರ್ ಕೂಡ ಇದನ್ನು ಶ್ಲಾಘಿಸಿದ್ದು, ಇದೊಂದು ಸಕಾರಾತ್ಮಕ ಹೆಜ್ಜೆ ಎಂದು ಹೇಳಿದರು. ಹಮಾಸ್ ಒತ್ತೆಯಾಳಾಗಿ ಇರಿಸಿರುವ ಇತರ ನಾಲ್ವರ ಸೊತ್ತುಗಳನ್ನು ಮರಳಿಸುವಂತೆ ಅವರು ಹಮಾಸ್ ಅನ್ನು ಒತ್ತಾಯಿಸಿದ್ದಾರೆ.
ಇದನ್ನು ಓದಿ: MS Dhoni: ಭಾರತ-ಪಾಕ್ ಬಿಕ್ಕಟ್ಟಿನ ನಡುವೆಯೇ ಭಾರೀ ವೈರಲಾಯ್ತು MS ಧೋನಿ ಧರಿಸಿದ್ದ ಟೀ-ಶರ್ಟ್
ಉಳಿದಿರುವ ಒತ್ತೆಯಾಳುಗಳ ಬಿಡುಗಡೆ ಸಾಧ್ಯವೇ?
ಎಡಾನ್ ಅಲೆಕ್ಸಾಂಡರ್ ಅವರ ಬಿಡುಗಡೆಗೆ ಯುಎಸ್ ನೊಂದಿಗೆ ಕತಾರ್, ಈಜಿಪ್ಟ್ ಮತ್ತು ಹಮಾಸ್‌ನ ಅಧಿಕಾರಿಗಳು ನೇರ ಮಾತುಕತೆ ನಡೆಸಿದ್ದಾರೆ. ಕತಾರ್ ಮತ್ತು ಈಜಿಪ್ಟ್ ಮಧ್ಯಸ್ಥಿಕೆ ವಹಿಸಿದ್ದರಿಂದ ಇದು ಸಾಧ್ಯವಾಗಿದೆ. ಟರ್ಕಿ ಕೂಡ ಇದರಲ್ಲಿ ಭಾಗಿಯಾಗಿತ್ತು ಎನ್ನಲಾಗಿದೆ.ಎಡಾನ್ ಅಲೆಕ್ಸಾಂಡರ್ ಬಿಡುಗಡೆ ಬಗ್ಗೆ ಹಮಾಸ್ ರಾಜಕೀಯ ನಾಯಕ ಖಲೀಲ್ ಅಲ್-ಹಯ್ಯ ದೃಢಪಡಿಸಿದ್ದು, ಅಪಾರ ಕೈದಿಗಳ ವಿನಿಮಯ ಮತ್ತು ಅಂತಿಮ ಕದನ ವಿರಾಮ ಒಪ್ಪಂದಕ್ಕಾಗಿ ಹಮಾಸ್ ಮಾತುಕತೆಗಳನ್ನು ನಡೆಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಅಲೆಕ್ಸಾಂಡರ್ ಬಿಡುಗಡೆಯಿಂದ ಉಳಿದ 59 ಒತ್ತೆಯಾಳುಗಳ ಬಿಡುಗಡೆ ಮಾತುಕತೆಗಳನ್ನು ಪ್ರಾರಂಭಿಸಬಹುದು ಎಂದಿರುವ ಇಸ್ರೇಲ್ ಸರ್ಕಾರ ಈ ಮಾತುಕತೆಗಳು ಗುಂಡಿನ ದಾಳಿಯ ನಡುವೆ ಮುಂದುವರಿಯುತ್ತದೆ. ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಮತ್ತು ಗಾಜಾವನ್ನು ಸೇನಾಮುಕ್ತಗೊಳಿಸುವವರೆಗೆ ತನ್ನ ದಾಳಿ ಮುಂದುವರಿಸುವುದಾಗಿ ಇಸ್ರೇಲ್ ತಿಳಿಸಿದೆ. ಇದಕ್ಕೆ ಪ್ರತಿಯಾಗಿ ಹಮಾಸ್ ಕೂಡ ಕೆಲವು ಷರತ್ತುಗಳನ್ನು ಇಟ್ಟಿದ್ದು, ಯುದ್ಧ ಕೊನೆಗೊಳಿಸುವುದು, ನಮಗೆ ಹಾಕಿರುವ ದಿಗ್ಬಂಧನವನ್ನು ತೆಗೆದುಹಾಕಿದರೆ ಮಾತ್ರ ಮುಂದಿನ ಮಾತುಕತೆ ನಡೆಸುವುದಾಗಿ ಹೇಳಿದೆ.