ಢಾಕಾ, ಜ.1: ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮತ್ತಷ್ಟು ವಿಕೃತ ಸ್ವರೂಪ ಪಡೆದುಕೊಂಡಿದ್ದು, ಹಿಂದೂಗಳನ್ನು ಮನೆಯೊಳಗೆ ಕೂಡಿಹಾಕಿ ಮನೆಗೆ ಬೆಂಕಿ ಹಚ್ಚುವ ಘಟನೆಗಳು ಹೆಚ್ಚತೊಡಗಿವೆ. ಬುಧವಾರ ತಡರಾತ್ರಿ ಹಿಂಸಾತ್ಮಕ ಗುಂಪೊಂದು ಖೋಕೋನ್ ದಾಸ್ ಎಂಬ ಮತ್ತೊಬ್ಬ ಹಿಂದೂ ವ್ಯಕ್ತಿಯ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ ಘಟನೆ ಸಂಭವಿಸಿದೆ.
ಡಿ.18ರಂದು ಧರ್ಮನಿಂದನೆ ಆರೋಪ ಹೊರಿಸಿ ದೀಪು ಚಂದ್ರದಾಸ್ ಎಂಬುವವರನ್ನು ಗುಂಪೊಂದು ಹೊಡೆದು ಹತ್ಯೆ ಮಾಡಿ, ಶವವನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಿತ್ತು. ಇದಾದ ಬಳಿಕ ಅಮೃತ್ ಮಂಡಲ್, ಬಜೇಂದ್ರ ಬಿಸ್ವಾಸ್ ಎಂಬವರನ್ನು ಹತ್ಯೆ ಮಾಡಲಾಗಿತ್ತು. ಇದೀಗ 50 ವರ್ಷದ ಖೋಕೋನ್ ದಾಸ್ ಮೇಲೆ ಹಲ್ಲೆ ನಡೆಸಲಾಗಿದ್ದು ಅವರ ಸ್ಥತಿ ಗಂಭೀರವಾಗಿದೆ.
ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅಡಿಯಲ್ಲಿ ಬಾಂಗ್ಲಾದೇಶವು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ, ಇದು ಪ್ರಪಂಚದಾದ್ಯಂತ ಜನರು ಮತ್ತು ಹಲವಾರು ಮಾನವ ಹಕ್ಕುಗಳ ಸಂಘಟನೆಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.
ಇದನ್ನೂ ಓದಿ ಏನಾಗ್ತಿದೆ ಬಾಂಗ್ಲಾದೇಶದಲ್ಲಿ? ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ; 10 ದಿನಗಳ ಅಂತರದಲ್ಲಿ 3 ಹಿಂದೂಗಳ ಹತ್ಯೆ
ಕಳೆದ ವಾರ, ಭಾರತವು ಬಾಂಗ್ಲಾದೇಶದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರು ಸೇರಿದಂತೆ ಅಲ್ಪಸಂಖ್ಯಾತರ ವಿರುದ್ಧ ನಿರಂತರ ದ್ವೇಷದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಮತ್ತು ತನ್ನ ನೆರೆಹೊರೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಪ್ರತಿಪಾದಿಸಿತ್ತು.
ಡಿ.18ರಂದು ಬಾಂಗ್ಲಾ ವಿದ್ಯಾರ್ಥಿ ನಾಯಕ ಉಸ್ಮಾನ್ ಹದಿ ಹತ್ಯೆ ಬಳಿಕ ಹಿಂದೂಗಳ ಮೇಲೆ ದಾಳಿ ಹೆಚ್ಚಾಗಿದೆ. ಭಾನುವಾರ ತಡರಾತ್ರಿ ಕಿಡಿಗೇಡಿಗಳು ಇಲ್ಲಿನ ದುಮ್ರಿತಾಲಾ ಗ್ರಾಮದಲ್ಲಿ ಕನಿಷ್ಠ 5 ಕುಟುಂಬಗಳಿಗೆ ಬೆಂಕಿ ಹಚ್ಚಿದ್ದರು.
ಗಾಜಾ, ಪ್ಯಾಲೆಸ್ತೀನ್‌ನಲ್ಲಿ ಜನರ ಮೇಲೆ ದಾಳಿ ಮಾಡಿದರೆ ಸ್ಥಳೀಯ ಬುದ್ಧಿಜೀವಿಗಳು, ಪ್ರಗತಿಪರರು ತಕ್ಷಣ ಧ್ವನಿ ಎತ್ತುತ್ತಾರೆ. ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಜೀವಂತ ಸುಡುವಂತಹ ಘಟನೆ ನಡೆದರೂ ಅದರ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಯಾಕೆ, ಅವರು ಹಿಂದೂಗಳು, ದಲಿತರು ಎಂದೇ? ಹಿಂದೂಗಳ ಮೇಲೆ ದಾಳಿಯಾದರೂ ಏಕೆ ಖಂಡಿಸುತ್ತಿಲ್ಲ. ಇದು ಅತ್ಯಂತ ಬೇಜಬಾಬ್ದಾರಿಯ ವರ್ತನೆ ಎಂದು ಕೆಲವರು ಪ್ರಶ್ನಿಸಿದ್ದಾರೆ.