ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆ; 7 ಮಂದಿ ಶಂಕಿತರ ಬಂಧನ

Hindu youth murdered in Bangladesh: ಬಾಂಗ್ಲಾದೇಶದಲ್ಲಿ ನಡೆದ ಹಿಂದೂ ಯುವಕನ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣವು ಧಾರ್ಮಿಕ ಹಿಂಸಾಚಾರ ಪ್ರಕರಣವಾಗಿದ್ದು, ತೀವ್ರ ಕಳವಳಕ್ಕೆ ಕಾರಣವಾಗಿದೆ.

ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಪ್ರತಿಭಟನೆ ಮತ್ತು ಮುಹಮ್ಮದ್ ಯೂನುಸ್ (ಸಂಗ್ರಹ ಚಿತ್ರ)

ಢಾಕಾ, ಡಿ. 20: ಬಾಂಗ್ಲಾದೇಶದ ಮೈಮನಿಸಿಂಗ್‌ ಜಿಲ್ಲೆಯಲ್ಲಿ ಹಿಂದೂ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ ಎಂದು ಪ್ರಧಾನಿ ಮೊಹಮ್ಮದ್ ಯೂನುಸ್ ಶನಿವಾರ ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು 27 ವರ್ಷದ ಹಿಂದೂ ಯುವಕ ದೀಪು ಚಂದ್ರದಾಸ್ ಎಂದು ಗುರುತಿಸಲಾಗಿದೆ. ಬಲೂಕಾದಲ್ಲಿ ಹಿಂದೂ ಯುವಕ ದೀಪು ಚಂದ್ರದಾಸ್‍ನ ಹತ್ಯೆ ಪ್ರಕರಣದಲ್ಲಿ ಕ್ಷಿಪ್ರ ಕಾರ್ಯ ಬೆಟಾಲಿಯನ್ ಏಳು ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಿದೆ.

ಬಂಧಿತರು ಎಂಡಿ ಲಿಮೋನ್ ಸರ್ಕಾರ್ (19), ಎಂಡಿ ತಾರೆಕ್ ಹುಸೈನ್ (19), ಎಂಡಿ ಮಾಣಿಕ್ ಮಿಯಾ (20), ಇರ್ಷಾದ್ ಅಲಿ (39), ನಿಜುಮ್ ಉದ್ದೀನ್ (20), ಅಲೋಮ್ಗಿರ್ ಹೊಸೈನ್ (38) ಮತ್ತು ಎಂಡಿ ಮಿರಾಜ್ ಹೊಸೈನ್ ಎಕಾನ್ (46) ಎಂದು ತಿಳಿಸಲಾಗಿದೆ. ಆರ್‌ಎಬಿ ಘಟಕಗಳು ನಡೆಸಿದ ಸಂಘಟಿತ ಕ್ರಮದ ನಂತರ ಶಂಕಿತರನ್ನು ಬಂಧಿಸಲಾಗಿದೆ ಎಂದು ಯೂನಸ್ ಹೇಳಿದರು. ಆರ್‌ಎಬಿ -14 ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.

ಶೇಖ್ ಹಸೀನಾ ಗಡಿಪಾರು ಮಾಡಲು ಇಂಟರ್‌ಪೋಲ್ ಸಹಾಯ ಕೇಳಲು ಮುಂದಾದ ಬಾಂಗ್ಲಾ

ಕಳೆದ ವರ್ಷದ ವಿದ್ಯಾರ್ಥಿ ನೇತೃತ್ವದ ಜುಲೈ ದಂಗೆಯ ಪ್ರಮುಖ ವ್ಯಕ್ತಿ ಮತ್ತು ಇಂಕಿಲಾಬ್ ಮಂಚದ ವಕ್ತಾರ ಷರೀಫ್ ಉಸ್ಮಾನ್ ಹಾದಿಯ ಸಾವಿನ ನಂತರ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ನಡುವೆ ಹಿಂದೂ ಯುವಕನ ಹತ್ಯೆಯಾಗಿದೆ. ಡಿಸೆಂಬರ್ 12ರಂದು ಢಾಕಾದಲ್ಲಿ ಮುಸುಕುಧಾರಿ ಬಂದೂಕುಧಾರಿಗಳಿಂದ ತಲೆಗೆ ಗುಂಡು ಬಿದ್ದು, ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹಾದಿ, ಗುರುವಾರ (ಡಿಸೆಂಬರ್‌ 18) ಸಿಂಗಾಪುರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದ್ದಾನೆ.

ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಮೈಮನಿಸಿಂಗ್‌ನಲ್ಲಿ ಹಿಂದೂ ವ್ಯಕ್ತಿಯ ಹತ್ಯೆಯನ್ನು ಬಲವಾಗಿ ಖಂಡಿಸಿತ್ತು. ಶಾಂತಿ ಸಂಯಮಕ್ಕಾಗಿ ಮನವಿ ಮಾಡಿತ್ತು. ʼʼಮೈಮನಿಸಿಂಗ್‌ ಹಿಂದೂ ವ್ಯಕ್ತಿಯನ್ನು ಹೊಡೆದು ಕೊಂದ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಬಾಂಗ್ಲಾದೇಶದಲ್ಲಿ ಇಂತಹ ಹಿಂಸಾಚಾರಗಳಿಗೆ ಆಸ್ಪದವಿಲ್ಲ. ಈ ಕ್ರೂರ ಅಪರಾಧದಲ್ಲಿ ಭಾಗಿಯಾಗಿರುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲʼʼ ಎಂದು ಯೂನುಸ್ ಆಡಳಿತ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ಗುಂಡು ಬಿದ್ದು ಮೃತಪಟ್ಟ ಹಾದಿಯನ್ನು ಹುತಾತ್ಮ ಎಂದು ಸರ್ಕಾರ ಕರೆದಿದೆ. ಹಿಂಸೆ, ಪ್ರಚೋದನೆ ಮತ್ತು ದ್ವೇಷವನ್ನು ತಿರಸ್ಕರಿಸುವಂತೆ ಜನರನ್ನು ಒತ್ತಾಯಿಸಿದೆ. ಈ ನಡುವೆ ಪ್ರಮುಖ ರಾಷ್ಟ್ರೀಯ ದಿನಪತ್ರಿಕೆಗಳಾದ ದಿ ಡೈಲಿ ಸ್ಟಾರ್, ಪ್ರೋಥೋಮ್ ಅಲೋ ಕಚೇರಿಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತ್ತು. ಅದೃಷ್ಟವಶಾತ್ ಕಚೇರಿಯಲ್ಲಿದ್ದ ಸಿಬ್ಬಂದಿ ಅಪಾಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ಇತ್ತೀಚೆಗಷ್ಟೇ ಉಗ್ರಗಾಮಿಗಳ ಬೆದರಿಕೆಗಳು ಮತ್ತು ಬಾಂಗ್ಲಾದೇಶದ ನಾಯಕರ ಪ್ರಚೋದನಕಾರಿ ಹೇಳಿಕೆಗಳ ನಂತರ ಹೆಚ್ಚುತ್ತಿರುವ ಭದ್ರತಾ ಅಪಾಯದ ನಡುವೆ ಭಾರತವು ಕಳೆದ ಬುಧವಾರ ಢಾಕಾದಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರವನ್ನು (IVAC) ತಾತ್ಕಾಲಿಕವಾಗಿ ಮುಚ್ಚಿತ್ತು.