ಟೆಹರಾನ್, ಮಾ. 28: ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ (Iranian President Masoud Pezeshkian) ತಮ್ಮ ನೆರೆಯ ಗಲ್ಫ್ ರಾಷ್ಟ್ರಗಳಿಗೆ (Gulf countries) ಪ್ರಬಲ ಸಂದೇಶ ರವಾನಿಸಿದ್ದು, ಅಭಿವೃದ್ಧಿ ಮತ್ತು ಶಾಂತಿ ಬೇಕಾದರೆ, ತಮ್ಮ ನೆಲದಲ್ಲಿ ಅಮೆರಿಕ ಮತ್ತು ಇಸ್ರೇಲ್ ಸೇನೆಗೆ ಸ್ಥಳಾವಕಾಶ, ಬೆಂಬಲ ನೀಡಬೇಡಿ. ಯುದ್ಧವನ್ನು ನಡೆಸಲು ಅವಕಾಶ ನೀಡಬೇಡಿ ಎಂದು ಸೂಚಿಸಿದ್ದಾರೆ.
ಫೆಬ್ರವರಿ 28ರಂದು ಆರಂಭವಾದ ಯುದ್ಧ 29ನೇ ದಿನಕ್ಕೆ ಕಾಲಿಟ್ಟಿದೆ. ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಒಮನ್, ಕುವೈತ್, ಕತಾರ್ ಮತ್ತು ಇತರ ದೇಶಗಳ ಮೇಲೂ ದಾಳಿ ನಡೆಯುತ್ತಿರುವ ಮಧ್ಯೆ ಇರಾನ್ ಈ ಸಂದೇಶ ರವಾನಿಸಿದೆ. ಅಮೆರಿಕವು ಇರಾನ್‌ನ ಮೇಲೆ ದಾಳಿ ನಡೆಸಲು ಗಲ್ಫ್ ದೇಶಗಳಲ್ಲಿನ ತನ್ನ ಮಿಲಿಟರಿ ನೆಲೆಗಳನ್ನು ಬಳಸುತ್ತಿದೆ. ಹೀಗಾಗಿ ಇರಾನ್ ಪ್ರತೀಕಾರವಾಗಿ ಈ ದೇಶಗಳಲ್ಲಿ ದಾಳಿ ನಡೆಸುತ್ತಿದೆ.
ಇರಾನ್ ಪೂರ್ವಭಾವಿ ದಾಳಿಗಳನ್ನು ನಡೆಸುವುದಿಲ್ಲ ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಆದರೆ ನಮ್ಮ ಮೂಲಸೌಕರ್ಯ ಅಥವಾ ಆರ್ಥಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡರೆ ನಾವು ಬಲವಾಗಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಪೆಜೆಶ್ಕಿಯಾನ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ನೀವು ಅಭಿವೃದ್ಧಿ ಮತ್ತು ಭದ್ರತೆಯನ್ನು ಬಯಸಿದರೆ, ನಮ್ಮ ಶತ್ರುಗಳಿಗೆ ನಿಮ್ಮ ಭೂಮಿಯಿಂದ ಯುದ್ಧವನ್ನು ನಡೆಸಲು ಬಿಡಬೇಡಿ ಎಂದು ಅವರು ತಾಕೀತು ಮಾಡಿದರು.
ಇಲ್ಲಿದೆ ಪೋಸ್ಟ್:
ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದ ಕುರಿತು ಮಾತುಕತೆ ನಡೆಸಲು ನಂಬಿಕೆ ಬಹಳ ಮುಖ್ಯ ಎಂದು ಪೆಜೆಶ್ಕಿಯಾನ್ ತಮಗೆ ತಿಳಿಸಿರುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿರುವುದಾಗಿ ವರದಿ ತಿಳಿಸಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ಇಸ್ಲಾಮಾಬಾದ್ ಕೈಗೊಂಡ ಶಾಂತಿ ಪ್ರಯತ್ನಗಳನ್ನು ಪೆಜೆಶ್ಕಿಯಾನ್ ಪ್ರಶಂಸಿಸಿದ್ದಾರೆ ಎಂದು ಷರೀಫ್ ಕಚೇರಿ ತಿಳಿಸಿದೆ.
ಸೌದಿ ಅರೇಬಿಯಾದ ಅಮೆರಿಕನ್ ನೆಲೆ ಮೇಲೆ ಇರಾನ್ ದಾಳಿ; 12 ಸೈನಿಕರಿಗೆ ಗಾಯ
ಈ ಪ್ರದೇಶದಲ್ಲಿನ ಯುದ್ಧವನ್ನು ಕೊನೆಗೊಳಿಸಲು ಚರ್ಚೆಗಳನ್ನು ನಡೆಸಲು ಪಾಕಿಸ್ತಾನವು ಅಮೆರಿಕ ಮತ್ತು ಇರಾನ್ ನಡುವೆ ಪ್ರಮುಖ ಮಧ್ಯವರ್ತಿಯಾಗಿ ಹೊರಹೊಮ್ಮಿದೆ. ಸೌದಿ ಅರೇಬಿಯಾ, ಈಜಿಪ್ಟ್ ಮತ್ತು ಟರ್ಕಿಯ ವಿದೇಶಾಂಗ ಸಚಿವರು ಪಾಕಿಸ್ತಾನದಲ್ಲಿ ಸಭೆ ಸೇರಿ ಯುದ್ಧದ ಕುರಿತು ಚರ್ಚೆ ನಡೆಸಲಿದ್ದಾರೆ. ಸಂಘರ್ಷಗಳನ್ನು ಕಡಿಮೆ ಮಾಡುವ ಪ್ರಯತ್ನಗಳು ಸೇರಿ ಹಲವುವಿಷಯಗಳ ಕುರಿತು ಆಳವಾದ ಚರ್ಚೆ ನಡೆಸಲಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ತಮ್ಮ ಸಹವರ್ತಿಗಳನ್ನು ಭೇಟಿ ಮಾಡಲಿದ್ದಾರೆ. ನಂತರ ಅವರು ಷರೀಫ್ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕ್ಷಿಪಣಿ ಮೇಲೆ ಭಾರತದ ಹೆಸರು ಹಾಕಿ ಧನ್ಯವಾದ ತಿಳಿಸಿದ್ದ ಇರಾನ್
ಮಧ್ಯಪ್ರಾಚ್ಯದ ಸಂಘರ್ಷದ ನಡುವೆ ಇರಾನ್ ಭಾರತಕ್ಕೆ ಧನ್ಯವಾದ ತಿಳಿಸಿತ್ತು. ಇಸ್ರೇಲ್ ಮೇಲೆ ದಾಳಿ ನಡೆಸುತ್ತಿರುವ ಕ್ಷಿಪಣಿಗಳ ಮೇಲೆ ಧನ್ಯವಾದ ಭಾರತ ಎಂದು ಬರೆಯಲಾಗಿತ್ತು. ಇರಾನ್‌ಗೆ ಒಗ್ಗಟ್ಟನ್ನು ತೋರಿಸಿದ ದೇಶಗಳಿಗೆ ಧನ್ಯವಾದ ಹೇಳುವ ಸಂದೇಶಗಳನ್ನು ಹೊತ್ತ ಕ್ಷಿಪಣಿಗಳನ್ನು ಇಸ್ರೇಲ್ ಕಡೆಗೆ ಹಾರಿಸಿತು.