ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Illegal Immigrants: ತನ್ನ ನೆಲದಿಂದ ಅಕ್ರಮ ವಲಸಿಗರನ್ನು ಹೊರದಬ್ಬಲು ಟ್ರಂಪ್ ಅನುಸರಿಸುತ್ತಿರುವ ರೀತಿ ಯಾವುದು?

ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಡೊನಾಲ್ಡ್ ಟ್ರಂಪ್ ಅವರು ತಮ್ಮ ಕೆಲವೊಂದು ಕಠಿಣ ನಿರ್ಧಾರಗಳಿಂದ ಈಗಾಗಲೇ ಜಗತ್ತಿನ ಗಮನವನ್ನು ಸೆಳೆದಿದ್ದಾರೆ. ಇವುಗಳಲ್ಲಿ ಅಮೆರಿಕ ನೆಲದಲ್ಲಿರುವ ಅಕ್ರಮ ವಲಸಿಗರನ್ನು ಹೊರ ಹಾಕುವ ಪ್ರಕ್ರಿಯೆಯೂ ಒಂದು. ಇದು ಹೇಗೆ ನಡೆಯುತ್ತದೆ ಎಂಬುದರ ವಿವರ ಇಲ್ಲಿದೆ...

ಮಿಲಿಟರಿ ವಿಮಾನಗಳಲ್ಲಿ ಅಕ್ರಮ ವಲಸಿಗರ ರವಾನೆ – ಯಾಕೆ? ಹೇಗೆ? ಇಲ್ಲಿದೆ ವಿವರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Profile Sushmitha Jain Feb 6, 2025 4:46 PM

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ (Donald Trump) ಎರಡನೇ ಬಾರಿಗೆ ಅಮೆರಿಕಾ (United States) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ವಲಸೆ ನೀತಿಯನ್ನು ಇನ್ನಷ್ಟು ಬಿಗುಗೊಳಿಸಿದ್ದಾರೆ ಮತ್ತು ಅಮೆರಿಕದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವ, ಮೆಕ್ಸಿಕೋ ಸೇರಿದಂತೆ ವಿವಿಧ ದೇಶಗಳ ವಲಸಿಗರನ್ನು (Illegal Immigrants) ಅವರವರ ದೇಶಕ್ಕೆ ವಾಪಾಸು ಕಳಿಸುವ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ. ಇದೇ ಪ್ರಕಾರವಾಗಿ, ಸುಮಾರು 200 ಜನ ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕ ಮಿಲಿಟರಿ ವಿಮಾನವು (US military Aircraft) ಪಂಜಾಬಿನ ಅಮೃತಸರದಲ್ಲಿ (Amritsar) ಫೆ.05 ಬುಧವಾರದಂದು ಇಳಿದಿರುವ ಬಗ್ಗೆ ಪಿಟಿಐ (PTI) ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಅಕ್ರಮ ವಲಸಿಗರನ್ನು ಪಂಜಾಬ್ ಅಧಿಕಾರಿಗಳು ಬರಮಾಡಿಕೊಂಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಟೆಕ್ಸಾಸ್ ನ (Texas) ಸ್ಯಾನ್ ಆಂಟಾನಿಯೋದಿಂದ (San Antonio) 205 ಭಾರತೀಯ ಪ್ರಜೆಗಳನ್ನು ಹೊತ್ತ ಸಿ-17 (C-17) ವಿಮಾನವು ಫೆ.04ರಂದು ಸ್ಥಳೀಯ ಕಾಲಮಾನ ಅಪರಾಹ್ನ 3 ಗಂಟೆಗೆ ಅಲ್ಲಿಂದ ಹೊರಟಿತ್ತು. ಟ್ರಂಪ್ ಅಧಿಕಾರಕ್ಕೇರಲು ‘ಟ್ರಂಪ್ ಕಾರ್ಡ್’ ಆಗಿದ್ದೇ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮದ ಭರವಸೆಯನ್ನು ಅವರು ತಮ್ಮ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನೀಡಿದ್ದಾಗಿತ್ತು. ಅಕ್ರಮ ವಲಸಿಗರನ್ನು ಮರಳಿ ತಮ್ಮ ದೇಶಕ್ಕೆ ಕರೆಸಿಕೊಳ್ಳುವುದನ್ನು ವಿರೋಧಿಸುವ ಯಾವುದೇ ದೇಶದ ಮೇಲೆ ಸುಂಕ ಮತ್ತು ದಂಡ ವಿಧಿಸುವ ಬೆದರಿಕೆಯನ್ನೂ ಸಹ ಟ್ರಂಪ್ ಅವರು ತಾವು ಅಧಿಕಾರಕ್ಕೆ ಬಂದ ಬಳಿಕ ನೀಡಿದ್ದರು.

ಇತ್ತೀಚೆಗಷ್ಟೇ ಕೊಲಂಬಿಯಾ (Colombia) ದೇಶದ ಅಧ್ಯಕ್ಷ ಗುಸ್ತಾವೋ ಪೆಟ್ರೋ (Gustavo Petro), ತನ್ನ ದೇಶದ ಅಕ್ರಮ ವಲಸಿಗರನ್ನು ಹೊತ್ತು ಬಂದಿದ್ದ ಯುಎಸ್ ಮಿಲಿಟರಿ ವಿಮಾನವನ್ನು ಹಿಂದಕ್ಕೆ ಕಳುಹಿಸಿದ್ದರು ಮತ್ತು ತಾನು ತನ್ನ ದೇಶದ ನೆಲದಲ್ಲಿ ಕೇವಲ ನಾಗರಿಕ ವಿಮಾನಗಳ ಇಳಿಯುವಿಕೆ ಮಾತ್ರವೇ ಅವಕಾಶ ಕೊಡುವುದಾಗಿ ಅವರು ಖಡಕ್ ಪ್ರತಿಕ್ರಿಯೆ ನೀಡಿದ್ದರು. ಆದರೆ ಆ ಬಳಿಕ ಅಧ್ಯಕ್ಷ ಟ್ರಂಪ್ ಅವರಿಗೆ ದಂಡದ ಬೆದರಿಕೆಯೊಡ್ಡಿದ ಬಳಿಕ ಕೊಲಂಬಿಯಾದ ಅಕ್ರಮ ವಲಸಿಗರನ್ನು ಸ್ವೀಕರಿಸಲು ಒಪ್ಪಿದ್ದರು.

ಈ ವಿಚಾರ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದ್ದು, ತನ್ನ ದೇಶದಲ್ಲಿರುವ ಅಕ್ರಮ ವಲಸಿಗರ ಬಗ್ಗೆ ಟ್ರಂಪ್ ಕೈಗೊಳ್ಳುತ್ತಿರುವ ಕಠಿಣ ಕ್ರಮಗಳು ಮತ್ತು ಅಕ್ರಮ ವಲಸಿಗರನ್ನು ಮಿಲಿಟರಿ ವಿಮಾನಗಳ ಮೂಲಕ ಅವರವರ ದೇಶಕ್ಕೆ ತಂದು ಬಿಡುತ್ತಿರುವ ವಿಚಾರ ಇದೀಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಹಿನ್ನಲೆಯಲ್ಲಿ ಅಕ್ರಮ ವಲಸಿಗರ ಸಾಗಾಟಕ್ಕೆ ಮಿಲಿಟರಿ ವಿಮಾನಗಳನ್ನು ಬಳಸುತ್ತಿರುವುದೇಕೆ? ಮತ್ತು ಇದಕ್ಕೆ ಎಷ್ಟು ವೆಚ್ಚ ತಗಲುತ್ತದೆ ಎಂಬ ಮಾಹಿತಿ ಇಲ್ಲಿದೆ.



ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜ.20ರಂದು ಆದೇಶವೊಂದಕ್ಕೆ ಸಹಿ ಮಾಡಿದ್ದರು, ಆ ಆದೇಶದ ಪ್ರಕಾರ ಯು.ಎಸ್. ಮಿಲಿಟರಿ ದೇಶದ ಗಡಿ ರಕ್ಷಣೆಯಲ್ಲಿ ತನ್ನ ಸಹಕಾರವನ್ನು ನೀಡಲಿದೆ. ಆ ಸಂದರ್ಭದಲ್ಲಿ ಪ್ರಭಾರ ರಕ್ಷಣಾ ಕಾರ್ಯದರ್ಶಿಯಾಗಿದ್ದ ರಾಬರ್ಟ್ ಸೆಲೆಸ್ಸೆಸ್ ಹೇಳಿಕೆಯೊಂದನ್ನು ನೀಡಿ, 5000ಕ್ಕೂ ಅಧಿಕ ಅನಧಿಕೃತ ಜನರನ್ನು ಇಲ್ಲಿಂದ ಹೊರ ಹಾಕಲು ಹೋಮ್ ಲ್ಯಾಂಡ್ ಸಕ್ಯುರಿಟಿ ಇಲಾಖೆಗೆ ಮಿಲಿಟರಿ ಏರ್ ಲಿಫ್ಟ್ ಬೆಂಬಲವನ್ನು ಒದಗಿಸುವುದಾಗಿ ಹೇಳಿಕೊಂಡಿದ್ದರು.

ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಪಡೆಗಳು ದೇಶದ ದಕ್ಣಿಣ ಗಡಿ ಪ್ರದೇಶದಲ್ಲಿ ಈ ಅಕ್ರಮ ವಲಸಿಗರನ್ನು ಹಿಡಿದಿಟ್ಟುಕೊಂಡಿದ್ದಾರೆ ಎಂದು ಸೆಲೆಸ್ಸೆಸ್ ಹೇಳಿರುವುದನ್ನು ನ್ಯೂಯಾರ್ಕ್ ರಿಪೋರ್ಟ್ ಟೈಮ್ಸ್ ವರದಿ ಮಾಡಿದೆ. ಈ ನಡುವೆ ಅಕ್ರಮ ವಲಸಿಗರು ಯುಎಸ್ ಪ್ರವೇಶಿಸುವುದನ್ನು ತಡೆಯುವಲ್ಲಿ ಮಿಲಿಟರಿ ವಿಮಾನಗಳನ್ನೂ ಸಹ ಸಾಂಕೇತಿಕವಾಗಿ ಬಳಸಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: Viral Video: ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಅಲ್ಬಿನೋ ಜಿಂಕೆ; ವಿಡಿಯೊ ವೈರಲ್

ವೈಟ್ ಹೌಸ್ ನ ಮಾಧ್ಯಮ ಕಾರ್ಯದರ್ಶಿ ಕೆರೊಲಿನ್ ಲೆವಿಟ್, ವಲಸಿಗರನ್ನು ಹೊತ್ತು ಸಾಗುತ್ತಿರುವ ಸಿ-17 ಏರ್ ಫೋರ್ಸ್ ವಿಮಾನದ ಫೊಟೋವನ್ನು ಹಂಚಿಕೊಂಡಿದ್ದು, ಹೀಗೆ ಬರೆದುಕೊಂಡಿದ್ದಾರೆ... ‘ಅದ್ಯಕ್ಷ ಟ್ರಂಪ್ ವಿಶ್ವಕ್ಕೇ ಒಂದು ಬಲವಾದ ಮತ್ತು ಸ್ಪಷ್ಟ ಸಂದೇಶವನ್ನು ನೀಡುತ್ತಿದ್ದಾರೆ : ಒಂದು ವೇಳೆ ನೀವು ಅಮೆರಿಕಾದೊಳಗೆ ಅಕ್ರಮವಾಗಿ ಪ್ರವೇಶಿಸಿದರೆ, ನೀವು ಅದರ ತಿವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ’ ಎಂದು ಅವರು ಬರೆದುಕೊಂಡಿದ್ದಾರೆ.



ಸದ್ಯಕ್ಕೆ, ಅಮೆರಿಕಾದಲ್ಲಿರುವ ಅಕ್ರಮ ವಲಸಿಗರನ್ನು ಅವರವರ ದೇಶಕ್ಕೆ ವಾಪಾಸು ಕಳುಹಿಸಲು ಆರು ಮಿಲಿಟರಿ ವಿಮಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ದಿ ನ್ಯೂಯಾರ್ಕ್ ಟೈಮ್ಸ್ (New York Times) ವರದಿಗಳ ಪ್ರಕಾರ ಟ್ರಂಪ್ ಆಡಳಿತ ನಾಗರಿಕ ವಿಮಾನಗಳನ್ನೂ ಸಹ ಈ ಉದ್ದೇಶಕ್ಕಾಗಿ ಬಳಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೆಕ್ಸಿಕೋ, ಗ್ವಾಟೆಮಾಲಾ, ಕೊಲಂಬಿಯಾ ಮತ್ತು ಹೊಂಡುರಸ್ ದೇಶಗಳಿಗೆ ನಾಗರಿಕ ವಿಮಾನಗಳ ಮೂಲಕ ಆ ದೇಶದ ಅಕ್ರಮ ವಲಸಿಗರನ್ನು ಬಿಟ್ಟು ಬರಲಾಗುತ್ತಿದೆ ಎಂದು ತಿಳಿದು ಬಂದಿದೆ. ಮಿಟಲಿಟರಿ ಸಿ-17 ವಿಮಾನಗಳಿಗೆ ಹೊಲಿಸಿದರೆ, ಯು.ಎಸ್. ಕಸ್ಟಮ್ಸ್ ಮತ್ತು ವಲಸೆ ಜಾರಿ (ಐ.ಸಿ.ಇ) ಮೂಲಕ ಕಾರ್ಯಾಚರಿಸುತ್ತಿರುವ ಕಮರ್ಷಿಯಲ್ ಚಾರ್ಟರ್ ಗಳನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಬೈಡೆನ್ ಮತ್ತು ಟ್ರಂಪ್ ಇಬ್ಬರ ಅವಧಿಯಲ್ಲೂ ಅಮೆರಿಕಾದಿಂದ ಲಕ್ಷಕ್ಕೂ ಅಧಿಕ ಅಕ್ರಮ ವಲಸಿಗರನ್ನು ಹೊರಹಾಕಲಾಗಿದೆ ಎಂದು ವಾಷಿಂಗ್ಟನ್ ನಲ್ಲಿರುವ ವಲಸೆ ನೀತಿ ಸಂಸ್ಥೆ ತಿಳಿಸಿದೆ.

ರಾಯಿಟರ್ಸ್ ವರದಿಗಳ ಪ್ರಕಾರ, ಗ್ವಾಟೆಮಾಲಾಗೆ ತೆರಳಿದ್ದ ಮಿಲಿಟರಿ ವಿಮಾನದಲ್ಲಿ ಪ್ರತೀ ವಲಸಿಗರಿಗೆ 4675 ಡಾಲರ್ ನಂತೆ ವೆಚ್ಚ ತಗಲುತ್ತದೆ. ಇದು ಅಮೆರಿಕಾದ ಏರ್ ಲೈನ್ಸ್ ಗಳ ಫರ್ಸ್ಟ್ ಕ್ಲಾಸ್ ಟಿಕೆಟ್ ವೆಚ್ಚಕ್ಕಿಂತ ಐದು ಪಟ್ಟು ಹೆಚ್ಚಾಗಿದೆ. ಮಾತ್ರವಲ್ಲದೇ ಇದು ಕಮರ್ಷಿಯಲ್ ಚಾರ್ಟರ್ ವಿಮಾನದ ದರಕ್ಕಿಂತಲೂ ಅಧಿಕ ಎಂದು ಐ.ಸಿ.ಇ. ಹೇಳಿದೆ.

ತನ್ನ ನೆಲದಲ್ಲಿರುವ ಅಕ್ರ ವಲಸಿಗರನ್ನು ಅವರವರ ದೇಶಕ್ಕೇ ತಂದು ಬಿಡುತ್ತಿರುವ ಅಮೆರಿಕಾದ ಈ ನೀತಿಗೆ ಹಲವಾರು ದೇಶಗಳು ವಿರೋ‍ಧ ವ್ಯಕ್ತಪಡಿಸಿವೆ. ಮೆಕ್ಸಿಕೋ ಅಧ್ಯಕ್ಷ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, ‘ಅವರ ಗಡಿ ಭಾಗದೊಳಗೆ ಅವರು ಕಾರ್ಯಾಚರಣೆ ನಡೆಸಬಹುದು. ಆದರೆ ಮೆಕ್ಸಿಕೋ ವಿಚಾರಕ್ಕೆ ಬಂದಾಗ ನಾವು ನಮ್ಮ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುತ್ತೇವೆ ಮತ್ತು ಇದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಇಷ್ಟಪಡುತ್ತೇವೆ’ ಎಂದು ಹೇಳಿದ್ದಾರೆ.

ಅಕ್ರಮ ವಲಸಿಗರನ್ನು ಕರೆತರುವ ಸಂದರ್ಭದಲ್ಲಿ ಅವರನ್ನು ವಿಮಾನಗಳಲ್ಲಿ ನಡೆಸಿಕೊಳ್ಳುತ್ತಿರುವ ರೀತಿಯ ಕುರಿತಾಗಿಯೂ ಲ್ಯಾಟಿನ್ ಅಮೆರಿಕಾ ದೇಶಗಳ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.