ದೆಹಲಿ, ಮಾ. 14: ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿ (Pakistan's Air Strikes) 16 ನಾಗರಿಕರ ಸಾವಿಗೆ ಕಾರಣವಾದ ಪಾಕಿಸ್ತಾನದ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಜತೆಗೆ ಇದನ್ನು ʼಆಕ್ರಮಣಕಾರಿ ಕೃತ್ಯʼ ಎಂದು ಕರೆದಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಈ ಬಗ್ಗೆ ಮಾತನಾಡಿ, ಪಾಕಿಸ್ತಾನ ಸೇನೆ ಅಫ್ಘಾನಿಸ್ತಾನ ಮೇಲೆ ನಡೆಸಿದ ದಾಳಿಯನ್ನು ಕಟುವಾದ ಶಬ್ಧಗಳಲ್ಲಿ ಖಂಡಿಸಿದರು.
"ಅಫ್ಘಾನಿಸ್ತಾನದ ಭೂಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಗಳನ್ನು ಭಾರತ ಖಂಡಿಸುತ್ತದೆ. ಈ ದಾಳಿಯು ಹಲವು ನಾಗರಿಕರ ಸಾವಿಗೆ ಮತ್ತು ಮೂಲಸೌಕರ್ಯಗಳ ನಾಶಕ್ಕೆ ಕಾರಣವಾಗಿದೆ. ಇದು ಅಫ್ಘಾನಿಸ್ತಾನದ ಸಾರ್ವಭೌಮತೆಯ ಮೇಲಿನ ಪಾಕಿಸ್ತಾನದ ಮತ್ತೊಂದು ದಾಳಿ. ಅಫ್ಘಾನಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಸಂಪೂರ್ಣವಾಗಿ ಗೌರವಿಸಬೇಕು ಎಂದು ಭಾರತ ಪುನರುಚ್ಚರಿಸುತ್ತದೆ" ಎಂದು ಹೇಳಿದರು.
ಪಾಕಿಸ್ತಾನವು ಕಾಬೂಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಾಯುದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಶುಕ್ರವಾರ (ಮಾರ್ಚ್ 13) ಹೇಳಿತ್ತು. ಅದಾದ ಬಳಿಕ ತಿರುಗೇಟು ನೀಡಿದ ಅಫ್ಘಾನಿಸ್ತಾನದ ಸೇನೆಯು ಇಸ್ಲಾಮಾಬಾದ್ ಸೇರಿದಂತೆ ಪಾಕಿಸ್ತಾನದಲ್ಲಿನ ವಿವಿಧ ಸೇನಾನೆಲೆಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸಿತ್ತು.
ಪಾಕಿಸ್ತಾನದ ವೈಮಾನಿಕ ದಾಳಿಸಿ ಖಂಡಿಸಿದ ಭಾರತ:
ಅಫ್ಘಾನಿಸ್ತಾನ ಹೇಳಿದ್ದೇನು?
ʼʼದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್ ವಿಮಾನ ನಿಲ್ದಾಣದ ಬಳಿಯಿರುವ ಖಾಸಗಿ ವಿಮಾನಯಾನ ಸಂಸ್ಥೆ ಕಾಮ್ ಏರ್‌ಗೆ ಸೇರಿದ ಇಂಧನ ಸಂಗ್ರಹಣಾ ಸೌಲಭ್ಯದ ಮೇಲೆ ಪಾಕಿಸ್ತಾನದ ವಿಮಾನಗಳು ದಾಳಿ ಮಾಡಿವೆʼʼ ಎಂದು ಅಫ್ಘಾನ್ ಸರ್ಕಾರದ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ. ಮುಜಾಹಿದ್ ಪ್ರಕಾರ, ಈ ಇಂಧನ ಸರಬರಾಜು ಕೇಂದ್ರವನ್ನು ನಾಗರಿಕ ಮತ್ತು ವಿಶ್ವಸಂಸ್ಥೆಯ ವಿಮಾನಗಳಿಗೆ ಬಳಸಲಾಗುತ್ತದೆ.
ʼʼಪಾಕಿಸ್ತಾನದ ಸೇನಾ ಪಡೆಗಳು ಕೆಲವು ಪ್ರದೇಶಗಳಲ್ಲಿ ನಾಗರಿಕರ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಮಹಿಳೆಯರು ಮತ್ತು ಮಕ್ಕಳನ್ನು ಹತ್ಯೆ ಮಾಡಿವೆ. ಪವಿತ್ರ ರಂಜಾನ್ ತಿಂಗಳಲ್ಲಿ ಇಂತಹ ಕ್ರೂರ ಕೃತ್ಯ ಎಸಗಿದ ಪಾಕಿಸ್ತಾನ ಯಾವುದೇ ಮಾನವೀಯ ತತ್ವಗಳು ಮತ್ತು ನೈತಿಕ ಮೌಲ್ಯಗಳಿಗೆ ಬದ್ಧವಾದ ದೇಶವಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆʼʼ ಎಂದು ಕಿಡಿಕಾರಿದ್ದಾರೆ.
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ದಾಳಿ; ನೆರೆಹೊರೆಯ ಎರಡು ರಾಷ್ಟ್ರಗಳ ನಡುವಿನ ಯುದ್ಧದ ಬಗ್ಗೆ ಭಾರತದ ನಿಲುವೇನು?
ಪ್ರತೀಕಾರದ ದಾಳಿ
ಇನ್ನು ಅಘ್ಘಾನಿಸ್ತಾನ ಕೂಡ ಪ್ರತೀಕಾರದ ದಾಳಿಯ ಮೂಲಕ ಪಾಕಿಸ್ತಾನಕ್ಕೆ ಸರಿಯಾಗಿಯೇ ತಿರುಗೇಟು ನೀಡಿದೆ. ಪಾಕಿಸ್ತಾನದ ಖೂಬರ್ ಪಖ್ತಂಖ್ವದ ಕೊಹಾತ್ ಪ್ರದೇಶದಲ್ಲಿರುವ ಪಾಕ್ ಸೇನಾ ನೆಲೆಗಳ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ನಾಸಕ್ಕೆ ಕಾರಣವಾಗಿದೆ. ಡುರಾಂಡ್ ರೇಖೆಯ ಉದ್ದಕ್ಕೂ ಇರುವ ಯುದ್ಧ ಕಮಾಂಡ್ ಕೇಂದ್ರವಾದ ಪಾಕಿಸ್ತಾನದ ಕೊಹಾತ್ ಮಿಲಿಟರಿ ಕೋಟೆ ಮತ್ತು ಕೋಟೆಯ ಕಮಾಂಡರ್ ಕಚೇರಿಗೆ ತೀವ್ರ ಹಾನಿಯಾಗಿದೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ತಿಳಿಸಿದೆ. ಸೇನಾ ನೆಲೆಗಳು, ಡಿಪೋಗಳು ಮತ್ತು ಸೈನಿಕರ ವಸತಿ ನಿಲಯಗಳು ಧ್ವಂಸಗೊಂಡಿದ್ದು, ಹಲವರು ಮೃತಪಟ್ಟಿದ್ದಾರೆ. ಜತೆಗೆ ಅಪಾರ ಪ್ರಮಾಣದಲ್ಲಿ ಆಸ್ತಿಗೆ ಹಾನಿಯಾಗಿದೆ ಎಂದೂ ಮಾಹಿತಿ ನೀಡಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.