ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ ಚೇತರಿಸಿಕೊಳ್ಳುತ್ತಿದ್ದಾರೆʼʼ: ಫ್ಲೈದುಬೈ ಹೀರೋ ಆರೋಗ್ಯದ ಬಗ್ಗೆ ಮಹತ್ವದ ಅಪ್‌ಡೇಟ್‌ ನೀಡಿದ ಭಾರತೀಯ ರಾಯಭಾರ ಕಚೇರಿ

Smit Machchhar: ಸಹ ಪೈಲಟ್‌ ಹಮಾಮ್ ಅಲ್-ಹಮ್ಮಾಮಿಯಿಂದ ದಾಳಿಗೊಳಗಾದ ಫ್ಲೈದುಬೈ ವಿಮಾನದ ಪೈಲಟ್‌ ಕ್ಯಾಪ್ಟ್‌ನ ಸ್ಮಿತ್‌ ಮಚ್ಚಾರ್‌ ಸದ್ಯ ಅಬುಧಾಬಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಸ್ಮಿತ್‌ ಮಚ್ಚಾರ್‌ ಆರೋಗ್ಯದ ಬಗ್ಗೆ ಮಹತ್ವದ ಅಪ್‌ಡೇಟ್‌

ಸ್ಮಿತ್‌ ಮಚ್ಚಾರ್‌ ಮತ್ತು ಹಮಾಮ್ ಅಲ್-ಹಮ್ಮಾಮಿ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Oct 6, 2026 11:23 PM

ಅಬು ದಾಬಿ, ಅ. 6: ಸೆಪ್ಟೆಂಬರ್‌ 30 ಭಾರತೀಯರ ಪಾಲಿಗೆ ಅವಿಸ್ಮರಣೀಯ ದಿನ. ದುಬೈಯಿಂದ ಇಸ್ರೇಲ್‌ನ ಟೆಲ್‌ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ (Flydubai‍ Flight) ಹೈಜಾಕ್‌ ಆಗುವುದನ್ನು ಭಾರತದ ಪೈಲಟ್‌ ಸ್ಮಿತ್‌ ಮಚ್ಚಾರ್‌ (Smit Machchhar) ತಪ್ಪಿಸಿದ್ದಾರೆ. ಆ ಮೂಲಕ ಬಹುದೊಡ್ಡ ವೈಮಾನಿಕ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಮತ್ತೊಂದು 9/11 ಮಾದರಿಯ ಉಗ್ರ ದಾಳಿ ಸಂಚು ವಿಫಲವಾಗಿದೆ. ಎಫ್‌ಝಡ್‌ 1073 ವಿಮಾನದ ಕೋ ಪೈಲಟ್‌, ಒಮಾನಿ ಪ್ರಜೆ, ಉಗ್ರ ಹಮಾಮ್ ಅಲ್-ಹಮ್ಮಾಮಿ ಕೊಡಲಿಯಿಂದ ಮಚ್ಚಾರ್‌ ಮೇಲೆ ದಾಳಿ ನಡೆಸಿ ವಿಮಾನವನ್ನು ಹೈಜಾಕ್‌ ಮಾಡಲು ಪ್ರಯತ್ನಿಸುವ ಮೂಲಕ ಇಸ್ರೇಲ್‌ನ ವಿಮಾನ ನಿಲ್ದಾಣಕ್ಕೆ ಡಿಕ್ಕಿ ಹೊಡೆಯಲು ಸಂಚು ರೂಪಿಸಿದ್ದ. ಗಂಭೀರ ಗಾಯಗೊಂಡಿದ್ದರೂ ಕಾಕ್‌ಪಿಟ್‌ ಬಾಗಿಲು ತೆರೆಯುವ ಮೂಲಕ ಸ್ಮಿತ್‌ ವಿಮಾನ ಪತನವಾಗುವುದನ್ನು ತಪ್ಪಿಸಿದ್ದರು. ಇದೀಗ ಗಂಭೀರ ಗಾಯಗೊಂಡ ಅವರಿಗೆ ಅಬು ದಾಬಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಲೆಬುರುಡೆಗೆ ಏಟು ಬಿದ್ದಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಸ್ಮಿತ್ ಮಚ್ಚಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಂಗಳವಾರ (ಅಕ್ಟೋಬರ್‌ 6) ಮಾಹಿತಿ ನೀಡಿದೆ. 174 ಪ್ರಯಾಣಿಕರಿದ್ದ ವಿಮಾನದ ಹೆಚ್ಚುವರಿ ಪೈಲಟ್‌ಗಳು ಸೌದಿ ಅರೇಬಿಯಾದ ತಬೂಕ್‌ ಏರ್‌ಪೋಟ್‌ನಲ್ಲಿ ಸುರಕ್ಷಿತವಾಗಿ ಇಳಿಸಿದ ನಂತರ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಮಚ್ಚಾರ್‌ ಅವರಿಗೆ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಯುಎಇಯ ಅಬು ದಾಬಿಗೆ ಸ್ಥಳಾಂತರಿಸಲಾಯಿತು. ಸದ್ಯ ಹಮಾಮ್ ಅಲ್-ಹಮ್ಮಾಮಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಸ್ಮಿತ್‌ ಮಚ್ಚಾರ್‌ ಆರೋಗ್ಯದಲ್ಲಿ ಪ್ರಗತಿ:



ಆರೋಗ್ಯದಲ್ಲಿ ಚೇತರಿಕೆ

ಕೆಲವು ದಿನಗಳ ಹಿಂದೆ ಯುಎಇಯಲ್ಲಿನ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಮಾತನಾಡಿ, ಮಚ್ಚಾರ್ ಆರೋಗ್ಯದ ಬಗ್ಗೆ ಅಪ್‌ಡೇಟ್‌ ನೀಡಿದ್ದರು. ಮಚ್ಚಾರ್‌ ಚೇತರಿಸಿಕೊಳ್ಳುತ್ತಿದ್ದು, ಅಬು ದಾಬಿಯ ಆಸ್ಪತ್ರೆಯಲ್ಲಿ ನಗುತ್ತ, ಹರಟೆ ಹೊಡೆಯುತ್ತಿದ್ದಾರೆ ಎಂದು ತಿಳಿಸಿದ್ದರು. ಮಿತ್ತಲ್ ಆಸ್ಪತ್ರೆಯಲ್ಲಿ ಮಚ್ಚಾರ್ ಮತ್ತು ಅವರ ಕುಟುಂಬವನ್ನು ಭೇಟಿಯಾಗಿದ್ದರು. ಅವರು ಉತ್ತಮ ವೈದ್ಯಕೀಯ ಆರೈಕೆ ಪಡೆಯುತ್ತಿದ್ದಾರೆ ಎಂದು ಅವರು ಭರವಸೆ ನೀಡಿದ್ದರು. ಇದೀಗ ಮಚ್ಚಾರ್‌ ಮತ್ತಷ್ಟು ಚೇತರಿಸಿಕೊಂಡಿರುವುದಾಗಿ ಮಾಲಗಳು ಖಚಿತಪಡಿಸಿವೆ.

ಯುಎಇಯ ಉಪ ಪ್ರಧಾನ ಮಂತ್ರಿಯೂ ಆಗಿರುವ ದುಬೈಯ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅಕ್ಟೋಬರ್ 3ರಂದು ಮಚ್ಚಾರ್‌ ಅವರನ್ನು ಭೇಟಿಯಾಗಿ ʼಧೈರ್ಯ ಮತ್ತು ಜವಾಬ್ದಾರಿʼಯನ್ನು ಶ್ಲಾಘಿಸಿದ್ದರು.

ಒಮನ್ ಏರ್‌ನಿಂದ ಕಿತ್ತು ಹಾಕಲ್ಪಟ್ಟ ಹಮಾಮ್ ಅಲ್-ಹಮ್ಮಾಮಿ ಫ್ಲೈದುಬೈ ಸಹ ಪೈಲಟ್‌ ಆಗಿದ್ದೇಗೆ?

ಸಪ್ಟೆಂಬರ್‌ 30ರಂದು ಆಗಿದ್ದೇನು?

ಸೆಪ್ಟೆಂಬರ್‌ 30ರಂದು ದುಬೈಯಿಂದ ಟೆಲ್‌ ಅವೀವ್‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ಬೋಯಿಂಗ್‌ 737 ಮ್ಯಾಕ್ಸ್‌ 8 ವಿಮಾನವು ಸುಮಾರು 34 ಸಾವಿರ ಅಡಿ ಎತ್ತರದಲ್ಲಿದ್ದಾಗ ಒಮಾನ್‌ ಮೂಲದ ಸಹ ಪೈಲಟ್‌ ಹಮಾಮ್ ಅಲ್-ಹಮ್ಮಾಮಿ ಏಕಾಏಕಿ ಪೈಲಟ್‌ ಸ್ಮಿತ್‌ ಮಚ್ಚಾರ್‌ ಮೇಲೆ ದಾಳಿ ನಡೆಸಿದ್ದ. ವಿಮಾನವನ್ನು ಪತನಗೊಳಿಸುವ ಉದ್ದೇಶದಿಂದ ಸುತ್ತಿಗೆಯಂತಹ ಆಯುಧದಿಂದ ಸ್ಮಿತ್‌ ಮೇಲೆ ಎರಗಿದ್ದ. ತೀವ್ರ ಗಾಯಗೊಂಡಿದ್ದರೂ ಸ್ಮಿತ್‌ ಕಾಕ್‌ಪಿಟ್‌ನ ಬಾಗಿಲು ತೆರೆದು ಅಪಾಯದ ಸೂಚನೆ ನೀಡಿದ್ದರು. ತಕ್ಷಣ ಪ್ರಯಾಣಿಕರು ಕ್ಯಾಬಿನ್‌ಗೆ ನುಗ್ಗಿ ದಾಳಿಕೋರನನ್ನು ವಶಕ್ಕೆ ಪಡೆದಿದ್ದರು. ಬಳಿಕ ವಿಮಾನದಲ್ಲಿದ್ದ ಪೈಲಟ್‌ಗಳು ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ ಏರ್‌ಪೋರ್ಟ್‌ನಲ್ಲಿ ಸುರಕ್ಷಿತವಾಗಿ ಇಳಿಸಿದ್ದರು. ಅದಾದ ಬಳಿಕ ಸ್ಮಿತ್‌ ಅವರ ಸಾಹಸಕ್ಕೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ವಿದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.