“ಯುದ್ಧ ಇನ್ನೂ ಮುಗಿದಿಲ್ಲ”: ಫ್ಲೈದುಬೈ ವಿಮಾನ ದಾಳಿ ಬೆನ್ನಲ್ಲೇ ಇಸ್ರೇಲ್‌ಗೆ ಅಲ್‌ಖೈದಾ ಎಚ್ಚರಿಕೆ
Al-Qaida Warns: ಅಮೆರಿಕನ್ನರು ಮತ್ತು ಇಸ್ರೇಲಿಗಳು ಪ್ರಯಾಣಿಸುವ ವಿಮಾನಗಳ ಮೇಲೆ ಫ್ಲೈದುಬೈನಲ್ಲಿ ನಡೆಸಿದ ರೀತಿಯಲ್ಲೇ ದಾಳಿ ನಡೆಸುವಂತೆ ಅಲ್‌ಖೈದಾ ಸಂಘಟನೆ ಕರೆ ನೀಡಿದೆ. ಅಲ್-ಬಯಾನ್ ಎಂಬ ವಾರಪತ್ರಿಕೆಯ ಇತ್ತೀಚಿನ ಸಂಚಿಕೆಯಲ್ಲಿ ಈ ಎಚ್ಚರಿಕೆ ಪ್ರಕಟವಾಗಿದೆ.
ಸಾಂದರ್ಭಿಕ ಚಿತ್ರ -
ಕಾಬೂಲ್, ಅ.4: ಅಮೆರಿಕನ್ನರು ಮತ್ತು ಇಸ್ರೇಲಿಗಳು ಪ್ರಯಾಣಿಸುವ ವಿಮಾನಗಳ ಮೇಲೆ ಫ್ಲೈದುಬೈನಲ್ಲಿ (Flydubai Plane Attack) ನಡೆಸಿದ ರೀತಿಯಲ್ಲೇ ದಾಳಿ ನಡೆಸುವಂತೆ ಅಲ್‌ಖೈದಾ ಸಂಘಟನೆ ಕರೆ ನೀಡಿದೆ. ಈ ವೇಳೆ ಸೆಪ್ಟೆಂಬರ್ 30ರಂದು ಫ್ಲೈದುಬೈ ವಿಮಾನದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಅವರ ಮೇಲೆ ಅವರ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ನಡೆಸಿದ ಕಾಕ್‌ಪಿಟ್ ದಾಳಿ ಹಾಗೂ 9/11 ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದೆ.
ಅಲ್-ಬಯಾನ್ ಎಂಬ ವಾರಪತ್ರಿಕೆಯ ಇತ್ತೀಚಿನ ಸಂಚಿಕೆಯಲ್ಲಿ ಈ ಎಚ್ಚರಿಕೆ ಪ್ರಕಟವಾಗಿದೆ. ಈ ವಾರಪತ್ರಿಕೆಯನ್ನು ಅಲ್‌ಖೈದಾ ಪರ ಬೆಂಬಲಿಗರು ಜುಲೈನಲ್ಲಿ ಆರಂಭಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಅದರಲ್ಲಿ 2001ರ ಸೆಪ್ಟೆಂಬರ್ 11ರ ದಾಳಿ ಮತ್ತು ಸೆಪ್ಟೆಂಬರ್ 30 ರಂದು ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ವಶಕ್ಕೆ ಪಡೆಯಲು ನಡೆದ ಪ್ರಯತ್ನವನ್ನು ಉಲ್ಲೇಖಿಸಲಾಗಿದೆ. ಇಸ್ಲಾಂ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಅದು ಆರೋಪಿಸಿ, ಅಮೆರಿಕನ್ನರು, ಇಸ್ರೇಲಿಗಳು ಮತ್ತು ಇತರರು ಪ್ರಯಾಣಿಸುವ ವಿಮಾನಗಳ ಮೇಲೆ ದಾಳಿ ನಡೆಸುವಂತೆ ಪ್ರಕಟಣೆ ಕರೆ ನೀಡಿದೆ.
ಯುಎಇ ವಶದಲ್ಲಿರುವ ಅಲ್-ಹಮ್ಮಾಮಿಯ ಹಿನ್ನೆಲೆ ಮತ್ತು ಆತನಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಯಾವುದೇ ಸಂಪರ್ಕವಿದೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ಈ ಬೆಳವಣಿಗೆ ನಡೆದಿರುವ ಸಂದರ್ಭದಲ್ಲೇ ಅಲ್-ಖೈದಾ ಈ ಕರೆ ನೀಡಿದೆ. ಕೋ ಪೈಲಟ್ ಅಲ್-ಹಮ್ಮಾಮಿಯ ಸಾಮಾಜಿಕ ಜಾಲತಾಣ ಖಾತೆಗಳನ್ನೂ ಪರಿಶೀಲಿಸಲಾಗುತ್ತಿದೆ. ಏಕೆಂದರೆ, ಆ ಖಾತೆಗಳಲ್ಲಿ ಒಸಾಮಾ ಬಿನ್ ಲಾಡೆನ್ ಮತ್ತು ಅಯ್ಮಾನ್ ಅಲ್-ಜವಾಹಿರಿ ಸೇರಿದಂತೆ ಅಲ್‌ಖೈದಾದ ಹಲವು ನಾಯಕರ ಚಿತ್ರಗಳಿವೆ.
ದಾಳಿ ಸಮಯದಲ್ಲಿ ಫ್ಲೈದುಬೈ ವಿಮಾನದಲ್ಲಿದ್ದ ಇಬ್ಬರು ಹೆಚ್ಚುವರಿ ಪೈಲಟ್‌ಗಳು ಯಾರು? ಏನಿವರ ಪಾತ್ರ?
“ಯುದ್ಧ ಇನ್ನೂ ಮುಗಿದಿಲ್ಲ. ಇಸ್ರೇಲಿಯರು, ಅಮೆರಿಕನ್ನರು ಮತ್ತು ಇಸ್ಲಾಂ ವಿರುದ್ಧ ಹೋರಾಡುತ್ತಿರುವ ಇತರ ಎಲ್ಲಾ ನಾಸ್ತಿಕರನ್ನು ಹೊತ್ತ ವಿಮಾನಗಳು ಇನ್ನೂ ಆಕಾಶದಲ್ಲಿ ಸುಳಿದಾಡುತ್ತಿವೆ. ಸೆಪ್ಟೆಂಬರ್ 11 ಮತ್ತು 30 ರಂದು ನಡೆದಂತೆ ಅವುಗಳ ಮೇಲೆಯೂ ದಾಳಿ ಮಾಡಬಹುದು” ಎಂದು ಅರೇಬಿಕ್ ಭಾಷೆಯ ಅಲ್-ಬಯಾನ್ ಲೇಖನ ಹೇಳಿದೆ.
ಈ ಬೆದರಿಕೆಯ ಸಂದೇಶದ ಜೊತೆಗೆ, ನ್ಯೂಯಾರ್ಕ್ ನಗರದ ಟ್ವಿನ್ ಟವರ್ಸ್‌ಗೆ ವಿಮಾನ ಡಿಕ್ಕಿ ಹೊಡೆಯುತ್ತಿರುವ ಚಿತ್ರವನ್ನು (9/11 ದಾಳಿಯ ಚಿತ್ರ) ಹಾಗೂ ಫ್ಲೈದುಬೈ ವಿಮಾನದಲ್ಲಿ ನಡೆದ ದಾಳಿಯನ್ನು ಉಲ್ಲೇಖಿಸುವ ಮತ್ತೊಂದು ಚಿತ್ರವನ್ನು ಪ್ರಕಟಿಸಲಾಗಿತ್ತು.
ಅಮೆರಿಕ ಮತ್ತು ಇಸ್ರೇಲ್‌ಗೆ ಹಿಂದೆಂದಿಗಿಂತಲೂ ಹೆಚ್ಚು ಶತ್ರುಗಳಿದ್ದಾರೆ ಎಂದು ಎಚ್ಚರಿಸಲಾಗಿದೆ. ಅಲ್ಲದೆ, ದುಷ್ಟ ಅಮೆರಿಕ ಸಾಮ್ರಾಜ್ಯ ಅಂತಿಮವಾಗಿ ಕೊನೆಗೊಳ್ಳಲಿದೆ ಎಂದು ಬರೆಯಲಾಗಿದೆ ಅಂತಾ ಹೇಳಲಾಗಿದೆ.
ದಾಳಿ ನಡೆಸಿದ ಅಲ್-ಹಮ್ಮಾಮಿ ಇಸ್ಲಾಮಿಸ್ಟ್ ಉಗ್ರವಾದಿ ಸಿದ್ಧಾಂತದಿಂದ ಪ್ರಭಾವಿತನಾಗಿದ್ದ ಮತ್ತು ವಿಮಾನದಲ್ಲಿದ್ದ ಪ್ರಯಾಣಿಕರ ಸಹಿತ ವಿಮಾನವನ್ನು ಪತನಗೊಳಿಸುವ ಉದ್ದೇಶ ಹೊಂದಿದ್ದ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಅಲ್-ಹಮ್ಮಾಮಿ ಕೂಡ ಉಗ್ರವಾದಿ ಸಿದ್ಧಾಂತಕ್ಕೆ ಒಳಗಾಗಿದ್ದ ಎಂದು ಇಸ್ರೇಲಿ ಅಧಿಕಾರಿಗಳು ಹೇಳಿದ್ದಾರೆ.