ವಾಷಿಂಗ್ಟನ್: ಜೋರ್ಡಾನ್ ( strike on Jordan ) ಮೇಲೆ ಶುಕ್ರವಾರ ಇರಾನ್ ನಡೆಸಿದ ದಾಳಿಯಲ್ಲಿ (Iran war) ಇಬ್ಬರು ಅಮೆರಿಕನ್ ಸೈನಿಕರು (american soldiers) ಸಾವನ್ನಪ್ಪಿದ್ದಾರೆ. ಈ ಕುರಿತು ಯುಎಸ್ ಸೆಂಟ್ರಲ್ ಕಮಾಂಡ್ (US Central Command) ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಳೆದ ಫೆಬ್ರವರಿಯಲ್ಲಿ ಯುಎಸ್ ಮತ್ತು ಇರಾನ್ ನಡುವೆ ಸಂಘರ್ಷ ಪ್ರಾರಂಭವಾದ ಮೇಲೆ ಈವರೆಗೆ ಯುಎಸ್ ಮಿಲಿಟರಿಯ 16 ಮಂದಿ ಸಾವನ್ನಪ್ಪಿದ್ದಾರೆ. 430ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರ ವಿವರಗಳನ್ನು ಕುಟುಂಬ ಸದಸ್ಯರಿಗೆ ತಿಳಿಸಲಾದ 24 ಗಂಟೆಗಳ ಬಳಿಕ ಅವರ ಗುರುತುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.
ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ ಶುಕ್ರವಾರ ಜೋರ್ಡಾನ್‌ನಲ್ಲಿ ಇಬ್ಬರು ಅಮೆರಿಕನ್ ಸೇವಾ ಸದಸ್ಯರು ಸಾವನ್ನಪ್ಪಿದ್ದಾರೆ. ಒಬ್ಬರು ನಾಪತ್ತೆಯಾಗಿದ್ದಾರೆ. ಗಾಯಗೊಂಡಿರುವ ನಾಲ್ವರು ಅಮೆರಿಕನ್ ಸೇನಾ ಸಿಬ್ಬಂದಿಯನ್ನು ಜೋರ್ಡಾನ್‌ನ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಇತರ ನಾಲ್ವರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ತೆರಳಿದ್ದಾರೆ. ಇನ್ನು ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೆಲವರು ಈಗಾಗಲೇ ಕರ್ತವ್ಯಕ್ಕೆ ಮರಳಿದ್ದಾರೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಅಮೆರಿಕದ ವಿರುದ್ಧ ಕಿಡಿ ಕಾರಿದ ಇರಾನ್: ಡೊನಾಲ್ಡ್ ಟ್ರಂಪ್ ಕುಟುಂಬದ ಶವಪೆಟ್ಟಿಗೆ ಚಿತ್ರವಿರುವ ಬ್ಯಾನರ್ ಪ್ರದರ್ಶನ
ಮೃತ ಸೈನಿಕರ ಗುರುತು ಸೇರಿದಂತೆ ಹೆಚ್ಚಿನ ವಿವರಗಳನ್ನು ಅವರ ಸಂಬಂಧಿಕರಿಗೆ ಔಪಚಾರಿಕವಾಗಿ ತಿಳಿಸಲಾದ 24 ಗಂಟೆಗಳ ಅನಂತರ ಬಿಡುಗಡೆ ಮಾಡುವುದಾಗಿ ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿದೆ.
ದಾಳಿಯ ಕುರಿತು ಮಾಹಿತಿ ನೀಡಿರುವ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ, ಅಮೆರಿಕವು ಇರಾನ್ ಮೇಲೆ ದಾಳಿ ಮುಂದುವರಿಸಿದರೆ ಅವರು ಭವಿಷ್ಯದಲ್ಲಿ ಎಂದೂ ಮರೆಯಲಾಗದ ಪಾಠವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಯುಎಸ್ ಮಿಲಿಟರಿಯ ತಿಳಿಸಿದೆ.
ಕಳೆದ ಫೆಬ್ರವರಿಯಲ್ಲಿ ಯುದ್ಧ ಪ್ರಾರಂಭವಾದ ಮೇಲೆ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಖಮೇನಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿರುವ ಯುದ್ಧ ಮುಕ್ತಾಯ ಒಪ್ಪಂದ ಯಾವುದೇ ಪ್ರಯೋಜನಕ್ಕಿಲ್ಲ. ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಮಧ್ಯಪ್ರಾಚ್ಯ ಭಾಗದಲ್ಲಿ ಸಂಘರ್ಷ ಭುಗಿಲೆದ್ದಿರುವುದರಿಂದ ವಿಶ್ವದಾದ್ಯಂತ ಆತಂಕ ಹೆಚ್ಚಾಗಿದೆ. ಯುಎಸ್ ಸೇನಾ ಪಡೆಯು ಶನಿವಾರ ಇರಾನ್‌ನ ಕಣ್ಗಾವಲು ತಾಣಗಳು, ಮಿಲಿಟರಿ ಮೂಲಸೌಕರ್ಯ, ಭೂಗತ ಶಸ್ತ್ರಾಸ್ತ್ರಗಳ ಸಂಗ್ರಹಣಾ ತಾಣಗಳು ಸೇರಿದಂತೆ ಹಲವು ಪ್ರದೇಶಗಳ ಮೇಲೆ ದಾಳಿ ನಡೆಸಿದೆ.
ಮುಂದುವರಿದ ಅಮೆರಿಕ ದಾಳಿ; ಇನ್ನು ಮುಂದೆ ಯಾವುದೇ ದೇಶದ ಗಡಿಗಳು ಸುರಕ್ಷಿತವಾಗಿರುವುದಿಲ್ಲ: ಟೆಹರಾನ್ ಎಚ್ಚರಿಕೆ
ಯುಎಸ್ ಮಿಲಿಟರಿ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಕುವೈತ್, ಇರಾಕ್, ಬಹರೈನ್, ಜೋರ್ಡಾನ್ ಮತ್ತು ಸೌದಿ ಅರೇಬಿಯಾದಲ್ಲಿನ ಯುಎಸ್ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇರಾನ್ ನಡೆಸಿರುವ ದಾಳಿಯಿಂದ ಕುವೈತ್‌ನಲ್ಲಿ ಅತಿ ಹೆಚ್ಚು ಹಾನಿಯಾಗಿದೆ ಎಂದು ಕುವೈತ್ ಸರ್ಕಾರ ತಿಳಿಸಿದೆ.