ಹೊರ್ಮುಜ್ ಜಲಸಂಧಿಯಲ್ಲಿ 'ಟೋಲ್' ಇಲ್ಲ, ಕೇವಲ 'ಸೇವಾ ಶುಲ್ಕ': ಇರಾನ್ ಹೇಳಿಕೆಯ ಹಿಂದಿನ ಮರ್ಮವೇನು?
Strait Of Hormuz: ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಿಂದ ಭದ್ರತೆ ಹಾಗೂ ಇತರ ಕಡಲ ಸೇವೆಗಳ ಹೆಸರಿನಲ್ಲಿ ಶುಲ್ಕ ವಿಧಿಸುವುದಾಗಿ ಇರಾನ್ ಸೂಚಿಸಿದೆ. ಇದು ಟೋಲ್ ಅಲ್ಲ, ಸೇವೆಗಳಿಗೆ ನೀಡುವ ಶುಲ್ಕ ಎಂದು ಇರಾನ್ ಸ್ಪಷ್ಟಪಡಿಸಿದರೂ, ಅಂತಾರಾಷ್ಟ್ರೀಯ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಹೊರ್ಮುಜ್‌ನಂತಹ ನೈಸರ್ಗಿಕ ಜಲಮಾರ್ಗದಲ್ಲಿ ಸಂಚಾರಕ್ಕೆ ಶುಲ್ಕ ವಿಧಿಸುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಚಾಟ್ ಜಿಪಿಟಿ ರಚಿತ ಚಿತ್ರ -
ಟೆಹರಾನ್, ಜೂ. 17: ಹಾರ್ಮುಜ್ ಜಲಸಂಧಿ (Strait of Hormuz)ಯ ಪ್ರಮುಖ ತೈಲ ಸಾಗಣೆ ಮಾರ್ಗವು ಈ ವಾರದಿಂದ 'ಶಾಶ್ವತವಾಗಿ ಟೋಲ್ ಫ್ರೀ' ಮತ್ತು 'ಸಂಪೂರ್ಣ ಮುಕ್ತ'ವಾಗಿರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ. ಆದರೆ ಮತ್ತೊಂದೆಡೆ ಇರಾನ್ ಜಲಸಂಧಿಯಲ್ಲಿ ಚಲಿಸುವ ವಾಣಿಜ್ಯ ನೌಕೆಗಳಿಂದ ಕೆಲವು ಅನಿರ್ದಿಷ್ಟ ಸೇವೆಗಳಿಗಾಗಿ ಶುಲ್ಕ ವಸೂಲಿ ಮಾಡಲು ಉದ್ದೇಶಿಸಿರುವುದಾಗಿ ಸೂಚನೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಯುದ್ಧ ಆರಂಭಿಸುವ ಮುನ್ನ ಇಂತಹ ಯಾವುದೇ ಸೇವಾ ಶುಲ್ಕದ ಅಗತ್ಯವಿರಲಿಲ್ಲ. ಆದರೆ ಈಗ ಇರಾನ್ ಜಾರಿಗೆ ತರಲು ಹೊರಟಿರುವ ಈ ನಿಯಮದಿಂದಾಗಿ ಜಾಗತಿಕ ವಾಣಿಜ್ಯ ನೌಕೆಗಳಿಗೆ ಕೋಟ್ಯಂತರ ರುಪಾಯಿ ಹೆಚ್ಚುವರಿ ಹೊರೆ ಬೀಳಲಿದ್ದು, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಹೊಸದೊಂದು ಅಪಾಯಕಾರಿ ಮುನ್ಸೂಚನೆಗೆ ಕಾರಣವಾಗಲಿದೆ.
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮೇಲ್ ಬಘೇಯ್ ಈ ಕುರಿತು ಮಾತನಾಡಿ, "ಹೊರ್ಮುಜ್ ಜಲಸಂಧಿಯಲ್ಲಿ ಚಲಿಸುವ ಹಡಗುಗಳಿಗೆ ಭದ್ರತೆ, ಪರಿಸರ ಸಂರಕ್ಷಣೆ ಮತ್ತು ಇತರ ಕಡಲ ಸೇವೆಗಳ ಆಧಾರದ ಮೇಲೆ ಶುಲ್ಕವನ್ನು ವಿಧಿಸಬಹುದು. ನಾವು ಯಾವುದೇ ಸಾರಿಗೆ ಟೋಲ್ ಪಡೆಯುತ್ತಿಲ್ಲ, ಬದಲಿಗೆ ಒದಗಿಸುವ ಸೇವೆಗಳಿಗೆ ಪ್ರತಿಯಾಗಿ ಶುಲ್ಕವನ್ನು ಮಾತ್ರ ವಿಧಿಸಲಾಗುತ್ತಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇರಾನ್ ಯಾವ ರೀತಿಯ ಸೇವೆಗಳನ್ನು ನೀಡಲಿದೆ ಎಂಬ ಬಗ್ಗೆ ಅವರು ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಯುದ್ಧದ ಆರಂಭದಿಂದಲೂ ಇರಾನ್ ತನ್ನ ಶತ್ರು ರಾಷ್ಟ್ರಗಳಿಗೆ ಲಿಂಕ್ ಇರುವ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದು, ಈಗ ಈ ಆಯಕಟ್ಟಿನ ಜಲಮಾರ್ಗವನ್ನು ಆರ್ಥಿಕವಾಗಿ ಬಳಸಿಕೊಳ್ಳಲು ಸಂಚು ರೂಪಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೆರಿಕ-ಇರಾನ್ ಶಾಂತಿ ಒಪ್ಪಂದ ಅಂತಿಮ; ಕುಸಿದ ತೈಲದ ದರ
ಅಂತಾರಾಷ್ಟ್ರೀಯ ಕಡಲ ಕಾನೂನಿನ ಪ್ರಕಾರ (UNCLOS), ನೈಸರ್ಗಿಕ ಜಲಸಂಧಿಗಳ ಮೂಲಕ ಹಾದುಹೋಗುವ ಹಡಗುಗಳಿಗೆ ಕೇವಲ ಸಂಚಾರದ ಅನುಮತಿಗಾಗಿ ಯಾವುದೇ ದೇಶಗಳು ಹಣವನ್ನು ಅಥವಾ ಟೋಲ್ ಕೇಳುವಂತಿಲ್ಲ. ಆದರೆ ಹಡಗು ಮುನ್ನಡೆಸುವಿಕೆ ಅಥವಾ ಬಂದರು ಸೇವೆಗಳಂತಹ ನಿರ್ದಿಷ್ಟ ಸೇವೆಗಳಿಗೆ ಮಾತ್ರ ಸೀಮಿತ ಶುಲ್ಕ ವಿಧಿಸಬಹುದು.
ನೇವಲ್ ವಾರ್ ಕಾಲೇಜಿನ ಕಡಲ ಕಾರ್ಯತಂತ್ರದ ಮುಖ್ಯಸ್ಥ ಜೇಮ್ಸ್ ಆರ್. ಹೋಮ್ಸ್ ಈ ಬಗ್ಗೆ ಪ್ರತಿಕ್ರಿಯಿಸಿ, "ಹೊರ್ಮುಜ್ ಒಂದು ನೈಸರ್ಗಿಕ ಜಲಮಾರ್ಗವಾಗಿದ್ದು, ಇಲ್ಲಿ ಇರಾನ್ ವಿಧಿಸಲು ಹೊರಟಿರುವ ಏಕೈಕ ಸೇವೆ ಎಂದರೆ ವಾಣಿಜ್ಯ ನೌಕೆಗಳ ಮೇಲೆ 'ದಾಳಿ ಮಾಡದಿರುವುದು' ಅಷ್ಟೇ! ದಾಳಿ ಮಾಡದಿರುವುದನ್ನು ಒಂದು ಸೇವೆ ಎಂದು ಪರಿಗಣಿಸಿ ಶುಲ್ಕ ವಸೂಲಿ ಮಾಡಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಸೇರಿ ವಿಶ್ವದ ಪ್ರಮುಖ ನಾಯಕರು ಇರಾನ್‌ನ ಈ ಧೋರಣೆಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಈ ಜಲಮಾರ್ಗದಲ್ಲಿ ಯಾವುದೇ ರೀತಿಯ ಟೋಲ್ ಅಥವಾ ಶುಲ್ಕ ವಿಧಿಸದಂತೆ ತಡೆಯಲು ಅಂತಾರಾಷ್ಟ್ರೀಯ ಕಾನೂನಿನಡಿ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ತಿಳಿಸಿದ್ದಾರೆ.