ಟೆಹರಾನ್, ಜು. 27: ಇರಾನ್‌ನ(Iran) ಪರಮೋಚ್ಚ ನಾಯಕ ಆಯತೊಲ್ಲಾ ಮೊಜ್ತಬಾ ಖಮೇನಿ, ಲೆಬನಾನ್‌ನ ಹೆಜ್ಬೊಲ್ಲಾ ಸಂಘಟನೆಗೆ ಇರಾನ್‌ನ ಅಚಲ ಬೆಂಬಲವನ್ನು ಪುನರುಚ್ಚರಿಸಿದ್ದು, ಇಸ್ರೇಲ್ ವಿರುದ್ಧ ಹೋರಾಟ ನಡೆಸುತ್ತಿರುವ ಹೆಜ್ಬೊಲ್ಲಾ ಹೋರಾಟಗಾರರನ್ನು ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣ Xನಲ್ಲಿ ಹೆಜ್ಬೊಲ್ಲಾ ಪ್ರಧಾನ ಕಾರ್ಯದರ್ಶಿ ಶೇಖ್ ನಯೀಮ್ ಖಾಸಿಂ ಅವರಿಗೆ ಉದ್ದೇಶಿಸಿ ಸಂದೇಶ ಪ್ರಕಟಿಸಿರುವ ಖಮೇನಿ, ಹೆಜ್ಬೊಲ್ಲಾವನ್ನು ರಕ್ಷಿಸುವುದು ಇರಾನ್‌ನ "ಕಾರ್ಯತಂತ್ರದ ಜವಾಬ್ದಾರಿ" ಎಂದು ಹೇಳಿದ್ದಾರೆ. ಜತೆಗೆ, ಅಮೆರಿಕದೊಂದಿಗೆ ನಡೆಯುತ್ತಿರುವ ಸಂಘರ್ಷ ಅಂತ್ಯಗೊಳ್ಳಬೇಕಾದರೆ ಲೆಬನಾನ್ ಮೇಲಿನ ಇಸ್ರೇಲ್‌ನ ಎಲ್ಲ ಸೇನಾ ದಾಳಿಗಳು ಯಾವುದೇ ಷರತ್ತಿಲ್ಲದೆ ಸಂಪೂರ್ಣವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.
ಹೆಜ್ಬೊಲ್ಲಾ ಇರಾನ್‌ನ ಇಸ್ಲಾಮಿಕ್ ಗಣರಾಜ್ಯಕ್ಕೆ ನಿಷ್ಠೆ ವ್ಯಕ್ತಪಡಿಸಿದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಮಾತನಾಡಿದ ಅವರು, "ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಜಿಹಾದ್ ಮತ್ತು ಪ್ರತಿರೋಧವನ್ನು ಹೊರತುಪಡಿಸಿ ಬೇರೆ ದಾರಿ ಇಲ್ಲ" ಎಂದು ಹೇಳಿದ್ದಾರೆ.
"ಅಮೆರಿಕ ಸರ್ಕಾರ ಮತ್ತು ಜಿಯೋನಿಸ್ಟ್ ಶಕ್ತಿಗಳ ದಬ್ಬಾಳಿಕೆಯಿಂದ ಜಗತ್ತಿನ ರಾಷ್ಟ್ರಗಳು ಬೇಸತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಜಿಹಾದ್ ಮತ್ತು ಪ್ರತಿರೋಧವೇ ಮುಂದಿನ ಏಕೈಕ ಮಾರ್ಗವಾಗಿದೆ" ಎಂದು ಖಮೇನಿ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಪಂಜಾಬ್ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ: ಕಾನೂನು ಸುವ್ಯವಸ್ಥೆ ಬಗ್ಗೆ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ
ಇದೇ ವೇಳೆ, ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಹೆಜ್ಬೊಲ್ಲಾದ ಮಾಜಿ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಹಸನ್ ನಸ್ರಲ್ಲಾ ಸೇರಿ ಹಲವು ಹೋರಾಟಗಾರರಿಗೆ ಅವರು ಗೌರವ ನಮನ ಸಲ್ಲಿಸಿದ್ದಾರೆ. ಅವರ ತ್ಯಾಗವೇ ಹೆಜ್ಬೊಲ್ಲಾವನ್ನು "ಸಣ್ಣ ಗಿಡದಿಂದ ಬೃಹತ್ ಮರವಾಗಿ ಬೆಳೆಸಿದೆ" ಎಂದು ಖಮೇನಿ ಹೇಳಿದ್ದಾರೆ.
ಹೆಜ್ಬೊಲ್ಲಾ ಹೋರಾಟಗಾರರು, ಯುದ್ಧದಿಂದ ಸ್ಥಳಾಂತರಗೊಂಡ ನಾಗರಿಕರು ಹಾಗೂ ಹುತಾತ್ಮರ ಕುಟುಂಬಗಳಿಗೆ ಶುಭ ಹಾರೈಸಿದ ಖಮೇನಿ, ಅಂತಿಮವಾಗಿ ಹೆಜ್ಬೊಲ್ಲಾ ವಿಜಯ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.