ಇರಾನ್ ಮೇಲೆ ಅಮೆರಿಕದಿಂದ ಮತ್ತೆ ವೈಮಾನಿಕ ದಾಳಿ; ಬಹ್ರೇನ್, ಕುವೈತ್ ಗುರಿಯಾಗಿಸಿಕೊಂಡು ಎದಿರೇಟು ನೀಡಿದ ಇರಾನ್: ಪಶ್ಚಿಮ ಏಷ್ಯಾದಲ್ಲಿ ಮತ್ತೆ ಬಾಂಬ್ ಮೊರೆತ
US Launches Airstrikes on Iran: ಇರಾನ್ ಮೇಲೆ ಅಮೆರಿಕ ಮತ್ತೆ ವೈಮಾನಿಕ ದಾಳಿ ನಡೆಸಿದೆ. ಹೋರಾಟವನ್ನು ಶಾಶ್ವತವಾಗಿ ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಕಳೆದ ತಿಂಗಳ ಮಧ್ಯಂತರ ಒಪ್ಪಂದವು ಮುರಿದುಬಿದ್ದ ಹಿನ್ನೆಲೆಯಲ್ಲಿ ಮತ್ತು ಹೊರ್ಮುಜ್ ಜಲಸಂಧಿಯ ಮೂಲಕ ಸಾಗಣೆಯು ಸ್ಥಗಿತಗೊಂಡಿದ್ದರಿಂದ ಪಶ್ಚಿಮ ಏಷ್ಯಾ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಸಾಕ್ಷಿಯಾಗುತ್ತಿದೆ.
ಇರಾನ್ ಮೇಲೆ ಅಮೆರಿಕದಿಂದ ಮತ್ತೆ ವೈಮಾನಿಕ ದಾಳಿ -
ಟೆಹರಾನ್, ಜು. 20: ಸೋಮವಾರ (ಜುಲೈ 20) ಮುಂಜಾನೆ ಮತ್ತೋರ್ವ ಅಮೆರಿಕ ಸೈನಿಕ ಮೃತಪಟ್ಟ ಕೆಲವೇ ಗಂಟೆಗಳ ನಂತರ ಅಮೆರಿಕ ಮತ್ತೆ ಇರಾನ್ ಮೇಲೆ ವೈಮಾನಿಕ ದಾಳಿ (US Launches Airstrikes on Iran) ನಡೆಸಿತು. ಮಧ್ಯಪ್ರಾಚ್ಯ ಸಂಘರ್ಷವು (Middle east crisis) ಮತ್ತೆ ತಾರಕಕ್ಕೇರಿದೆ. ಇರಾನ್ ಪ್ರತಿಕಾರವಾಗಿ ಅಮೆರಿಕ ನೌಕಾಪಡೆಯ ಬಹ್ರೇನ್ ಮತ್ತು ಕುವೈತ್ ಅನ್ನು ಗುರಿಯಾಗಿಸಿಕೊಂಡು ಪ್ರತಿ ದಾಳಿಗಳನ್ನು ನಡೆಸಿತು.
ಹೋರಾಟವನ್ನು ಶಾಶ್ವತವಾಗಿ ಕೊನೆಗೊಳಿಸುವ ಗುರಿಯನ್ನು ಹೊಂದಿದ್ದ ಮಧ್ಯಂತರ ಒಪ್ಪಂದವು ಕಳೆದ ತಿಂಗಳು ಮುರಿದುಬಿದ್ದ ಹಿನ್ನೆಲೆಯಲ್ಲಿ ಮತ್ತು ಹೊರ್ಮುಜ್ ಜಲಸಂಧಿಯಲ್ಲಿನ ತೈಲ ಸಾಗಾಟ, ಹಡಗು ಸಂಚಾರ ಸ್ಥಗಿತಗೊಂಡಿದ್ದರಿಂದ ಇತ್ತೀಚಿನ ದಾಳಿಗಳು ನಡೆದಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಎರಡೂ ದೇಶಗಳು ಲಕ್ಷಾಂತರ ಜನರು ಬಳಸುವ ನಾಗರಿಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ.ಇದರ ಪರಿಣಾಮ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 90 ಡಾಲರ್‌ಗಿಂತ ಹೆಚ್ಚಾಗಿದೆ. ಇದು ಸಂಘರ್ಷದಿಂದ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿದೆ.
ಶನಿವಾರ (ಜುಲೈ18) ಇರಾಕ್‌ನಲ್ಲಿ ಇರಾನಿನ ಡ್ರೋನ್ ಹೊಡೆದುರುಳಿಸಿದಾಗ ಅಮೆರಿಕ ಸೈನಿಕನೋರ್ವ ಮೃತಪಟ್ಟಿದ್ದಾಗಿ ಸೇನೆ ತಿಳಿಸಿದೆ. “ನಾವು ಇಂದು ರಾತ್ರಿ ಮತ್ತೆ ಅವರ ಮೇಲೆ ಬಲವಾದ ದಾಳಿ ನಡೆಸಿದ್ದೇವೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಬಲಿಯಾದ ಸೈನಿಕರ ಗೌರವಾರ್ಥವಾಗಿ ದಾಳಿ ಮಾಡಲಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಜೋರ್ಡಾನ್ ಮೇಲೆ ಇರಾನ್ ದಾಳಿ: ಅಮೆರಿಕ ಸೈನಿಕರಿಬ್ಬರು ಸಾವು, ಓರ್ವ ನಾಪತ್ತೆ
ಅಮೆರಿಕ ಸೇನೆಯ ಕೇಂದ್ರ ಕಮಾಂಡ್, ಸತತ ಒಂಬತ್ತನೇ ರಾತ್ರಿಯೂ ದಾಳಿ ನಡೆಸಿದೆ ಎಂದು ಹೇಳಿದೆ. ಇತ್ತೀಚಿನ ದಾಳಿಗಳಲ್ಲಿ ಇರಾನಿನ ಸೇನಾ ಕಮಾಂಡ್ ಕೇಂದ್ರಗಳು, ವಾಯು ರಕ್ಷಣಾ ಮತ್ತು ಕರಾವಳಿ ಕಣ್ಗಾವಲು ತಾಣಗಳು, ಕಡಲ ಸಾಮರ್ಥ್ಯಗಳು, ಕ್ಷಿಪಣಿ ಮತ್ತು ಡ್ರೋನ್ ಉಡಾವಣಾ ತಾಣಗಳು ಮತ್ತು ಸಂವಹನ ಜಾಲಗಳು ಸೇರಿವೆ ಎಂದು ಅದು ಹೇಳಿದೆ.
ವಾಯುವ್ಯ ಇರಾನ್‌ನ ಟ್ಯಾಬ್ರಿಜ್ ಸುತ್ತಮುತ್ತ ಅಮೆರಿಕದ ದಾಳಿಯಲ್ಲಿ ಓರ್ವ ಹತನಾಗಿದ್ದಾನೆ. ಖುಜೆಸ್ತಾನ್ ಪ್ರಾಂತ್ಯದ ಬಂದರ್ ಇಮಾಮ್ ಖೊಮೇನಿ, ಹಾರ್ಮೋಜ್ಗನ್ ಪ್ರಾಂತ್ಯದ ಸಿರಿಕ್ ಮತ್ತು ಜಾಸ್ಕ್ ಹಾಗೂ ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯದ ಕೊನಾರಕ್ ಮತ್ತು ಚಾಹಬಹಾರ್ ಮೇಲೆ ದಾಳಿಗಳು ನಡೆದಿರಬಹುದು ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಐಆರ್‌ಎನ್‌ಎ ವರದಿ ಮಾಡಿದೆ.
ಸೋಮವಾರ (ಜು. 20) ಮುಂಜಾನೆ ಒಮಾನ್‌ನ ಕರಾವಳಿಯ ಬಳಿಯ ಹೊರ್ಮುಜ್ ಜಲಸಂಧಿಯಲ್ಲಿ ಹಡಗೊಂದಕ್ಕೆ ಬೆಂಕಿ ಹೊತ್ತಿಕೊಂಡಿತು. ಬೆಂಕಿಯ ಕಾರಣ ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಇರಾನ್‌ನ ನಿಯಂತ್ರಣದಿಂದ ದೂರವಿರಲು ಹಡಗುಗಳಿಗೆ ಒಮಾನ್ ಸಮುದ್ರ ಮಾರ್ಗವನ್ನು ಬಳಸುವಂತೆ ಅಮೆರಿಕ ಸೇನೆ ಸಲಹೆ ನೀಡಿದೆ. ಈ ನಡುವೆ, ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ (IRGC) ಹೇಳಿದೆ.
ಡೊನಾಲ್ಡ್ ಟ್ರಂಪ್ ಕುಟುಂಬದ ಶವಪೆಟ್ಟಿಗೆ ಚಿತ್ರವಿರುವ ಬ್ಯಾನರ್ ಪ್ರದರ್ಶನ
ಈ ಪ್ರದೇಶದಲ್ಲಿನ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ಇರಾನ್ ದಾಳಿಯನ್ನು ಹೆಚ್ಚಿಸಿದೆ. ಸೋಮವಾರ ಬೆಳಗ್ಗೆ ಬಹ್ರೇನ್ ಕ್ಷಿಪಣಿ ಎಚ್ಚರಿಕೆ ಸೈರನ್‌ಗಳನ್ನು ಮೊಳಗಿಸಿತು. ಇರಾನ್ ಗುಂಡು ಹಾರಿಸುತ್ತಿರುವುದಾಗಿ ಕುವೈತ್ ವಾಯು ರಕ್ಷಣಾ ಪಡೆಗಳು ಹೇಳಿವೆ.
ಜಾಗತಿಕ ತೈಲ ಪೂರೈಕೆಯ ಐದನೇ ಒಂದು ಭಾಗವು ಸಾಗುವ ಹೊರ್ಮುಜ್ ಜಲಸಂಧಿಯ ಮೇಲಿನ ಹಿಡಿತವನ್ನು ಸಡಿಲಿಸುವಂತೆ ಟೆಹರಾನ್ ಮೇಲೆ ಒತ್ತಡ ಹೇರಲಾಗುತ್ತಿದೆ. ಇಲ್ಲದಿದ್ದಲ್ಲಿ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳನ್ನು ಗುರಿಯಾಗಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.