ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮೆರಿಕ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ; ಕುವೈತ್‌, ಬಹ್ರೇನ್‌ನಲ್ಲಿ ಹೈ ಅಲರ್ಟ್

ಕ್ವೆಶ್ಮ್ ದ್ವೀಪದ ಮೇಲಿನ ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಘೋಷಿಸಿದೆ. ಕುವೈತ್ ತನ್ನ ವಾಯು ರಕ್ಷಣಾ ವ್ಯವಸ್ಥೆಗಳ ಮೂಲಕ ದಾಳಿಯನ್ನು ತಡೆದಿರುವುದಾಗಿ ತಿಳಿಸಿದ್ದು, ಬಹ್ರೇನ್‌ನಲ್ಲಿ ಸೈರನ್ ಮೊಳಗಿಸಲಾಗಿದೆ. ಈ ಬೆಳವಣಿಗೆಯಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ಕ್ಷಿಪಣಿ ದಾಳಿ

ಟೆಹರಾನ್‌, ಜೂ. 3: ಮಧ್ಯ ಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತೀವ್ರಗೊಂಡಿದೆ (Middle East Tensions). ಬುಧವಾರ ಇರಾನ್ ಕುವೈತ್ ಹಾಗೂ ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದಾಗಿ ಘೋಷಿಸಿದೆ. ಈ ದಾಳಿಗಳು ಜೂನ್ 2ರಂದು ಅಮೆರಿಕ ನಡೆಸಿದ ಸೈನಿಕ ಕಾರ್ಯಾಚರಣೆಗೆ ಪ್ರತೀಕಾರ ಎಂದೂ ಇರಾನ್ ಹೇಳಿದೆ.

ಇರಾನ್ ಸಶಸ್ತ್ರ ಪಡೆಗಳ ಪ್ರಕಾರ, ಅಮೆರಿಕವು ಇರಾನ್‌ನ ಕ್ವೆಶ್ಮ್ ದ್ವೀಪದಲ್ಲಿರುವ ದೂರಸಂಪರ್ಕ ಮತ್ತು ಡ್ರೋನ್ ನಿಯಂತ್ರಣ ಕೇಂದ್ರದ ಮೇಲೆ ದಾಳಿ ನಡೆಸಿತ್ತು. ಜತೆಗೆ ಇರಾನ್‌ನ ತೈಲ ಟ್ಯಾಂಕರ್‌ಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕದ ಐದನೇ ನೌಕಾಪಡೆ ಹಾಗೂ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ವಾಯುನೆಲೆಗಳನ್ನು ಗುರಿಯಾಗಿಸಿ ಪ್ರತೀಕಾರಾತ್ಮಕ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇರಾನ್ ತಿಳಿಸಿದೆ.

ವೈರಲ್‌ ಪೋಸ್ಟ್‌ ಇಲ್ಲಿದೆ:



ಇರಾನ್ ಸರ್ಕಾರಿ ಮಾಧ್ಯಮ ಐಆರ್‌ಐಬಿ (IRIB) ವರದಿ ಪ್ರಕಾರ, ಈ ದಾಳಿ ಪೂರ್ವ ಎಚ್ಚರಿಕೆಯಂತೆ ನಡೆದಿದೆ ಎನ್ನಲಾಗಿದೆ. “ಆಕ್ರಮಣಕ್ಕೆ ಇನ್ನಷ್ಟು ಕಠಿಣ ಉತ್ತರ ನೀಡಲಾಗುವುದು” ಎಂಬ ಎಚ್ಚರಿಕೆಯನ್ನು ಈಗ ಕಾರ್ಯರೂಪಕ್ಕೆ ತರಲಾಗಿದೆ ಎಂದು ಸಶಸ್ತ್ರ ಪಡೆಗಳು ಹೇಳಿವೆ.

ಹೊರ್ಮುಜ್ ಬಿಕ್ಕಟ್ಟಿನ ನಡುವೆ ರಸಗೊಬ್ಬರ ಪೂರೈಕೆಗೆ ಭಾರತದ ಹೊಸ ಸಮುದ್ರ ಮಾರ್ಗ ಯೋಜನೆ

ದಾಳಿಯ ಬೆನ್ನಲ್ಲೇ ಕುವೈತ್‌ನಲ್ಲಿ ಹಲವು ಪ್ರದೇಶಗಳ ನಿವಾಸಿಗಳು ಭಾರೀ ಸ್ಫೋಟದ ಶಬ್ದಗಳನ್ನು ಕೇಳಿದ್ದಾರೆ. ಕುವೈತ್ ಸೇನೆಯು ತನ್ನ ವಾಯು ರಕ್ಷಣಾ ವ್ಯವಸ್ಥೆಯು ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಯಶಸ್ವಿಯಾಗಿ ತಡೆದಿವೆ ಎಂದು ತಿಳಿಸಿದೆ. ಅಲ್ಲದೆ, ನೆಲಕ್ಕೆ ಬಿದ್ದಿರುವ ಅವಶೇಷಗಳು ಅಥವಾ ಶಂಕಾಸ್ಪದ ವಸ್ತುಗಳನ್ನು ಸಾರ್ವಜನಿಕರು ಮುಟ್ಟಬಾರದು ಎಂದು ಎಚ್ಚರಿಕೆ ನೀಡಿದೆ. ಬಹ್ರೇನ್‌ನಲ್ಲೂ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಆಂತರಿಕ ಸಚಿವಾಲಯವು ತುರ್ತು ಸೈರನ್ ಮೊಳಗಿಸಿ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಹ್ರೇನ್ ಆಕಾಶದಲ್ಲಿ ಕ್ಷಿಪಣಿಗಳು ಸಂಚರಿಸುತ್ತಿರುವ ದೃಶ್ಯಗಳೂ ಹರಿದಾಡುತ್ತಿವೆ.



ಈ ನಡುವೆ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಇರಾನ್ ಮಾಡಿರುವ ಕೆಲವು ದಾವೆಗಳನ್ನು ತಳ್ಳಿ ಹಾಕಿದೆ. ಅಮೆರಿಕದ ಯಾವುದೇ ಪ್ರಮುಖ ಸೇನಾ ನೆಲೆಗಳಿಗೆ ಗಂಭೀರ ಹಾನಿಯಾಗಿಲ್ಲ ಎಂದು ಸೆಂಟ್ಕಾಮ್ ಸ್ಪಷ್ಟಪಡಿಸಿದೆ. ಆದರೆ ಪರಿಸ್ಥಿತಿಯ ಮೇಲೆ ನಿಕಟ ನಿಗಾ ವಹಿಸಲಾಗಿದೆ ಎಂದು ತಿಳಿಸಿದೆ. ಗಲ್ಫ್ ಪ್ರದೇಶವು ಜಾಗತಿಕ ತೈಲ ಸಾಗಣೆ ಮತ್ತು ವಾಣಿಜ್ಯಕ್ಕೆ ಅತ್ಯಂತ ಮಹತ್ವದ್ದಾಗಿರುವುದರಿಂದ, ಈ ಸಂಘರ್ಷವು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅಮೆರಿಕ ಮತ್ತು ಇರಾನ್ ನಡುವಿನ ನೇರ ಸಂಘರ್ಷದ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹಲವು ದೇಶಗಳು ಶಾಂತಿ ಕಾಪಾಡುವಂತೆ ಎರಡೂ ರಾಷ್ಟ್ರಗಳಿಗೆ ಕರೆ ನೀಡಿವೆ.

ಈ ಘಟನೆಯು ಮಧ್ಯಪ್ರಾಚ್ಯದಲ್ಲಿ ಹೊಸ ಭದ್ರತಾ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆ ಇದ್ದು, ಮುಂದಿನ ಬೆಳವಣಿಗೆಗಳತ್ತ ವಿಶ್ವ ಕುತೂಹಲದಿಂದ ಗಮನಿಸುತ್ತಿದೆ.