ವಾಷಿಂಗ್ಟನ್: ಇರಾನ್ ವಿರುದ್ಧ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, (Donald Trump) ದಾಳಿಯ ಭೀತಿಯನ್ನು ಎದುರಿಸುತ್ತಿದ್ದಾರೆ. ಟ್ರಂಪ್ ಹತ್ಯೆಗೆ ಇರಾನ್ (Iran - America War) ಸಂಚು ರೂಪಿಸುತ್ತಿದೆ ಎಂಬ ಗುಪ್ತಚರ ವರದಿ ಹಿನ್ನೆಲೆಯಲ್ಲಿ ಟ್ರಂಪ್‌ಗೆ ಬಿಗಿ ಭದ್ರತೆಯನ್ನು ಒದಗಿಸಲಾಗುತ್ತಿದೆ. ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ಟರ್ಕಿ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಅವರನ್ನು ಹತ್ಯೆಗೈಯಲು ಇರಾನ್ ಯೋಜನೆ ಹೂಡಿತ್ತು ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದ್ದು, ಟ್ರಂಪ್ ಕೂದಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರನ್ನು ಟರ್ಕಿಯಿಂದ ಅಮೆರಿಕಕ್ಕೆ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ. ಟರ್ಕಿಯಿಂದ ಹೊರಹೋಗಲು ಮೊದಲು ಟ್ರಂಪ್ ಅವರು ವಿಮಾನ ನಿಲ್ದಾಣದ ಕಿಚನ್ ಟ್ರಕ್‌ನಲ್ಲಿ ಪ್ರಯಾಣಿಸಿ ಆ ಬಳಿಕ ಏರ್ ಫೋರ್ಸ್ ಸಿ -32 ಎ ವಿಮಾನದಲ್ಲಿ ರಹಸ್ಯವಾಗಿ ಪ್ರಯಾಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಟ್ರಂಪ್ ಅವರು ತಮ್ಮ ಟರ್ಕಿ ಪ್ರವಾಸಕ್ಕೆ ಕತಾರ್ ಉಡುಗೊರೆಯಾಗಿ ನೀಡಿದ ಹೊಸ ಜೆಟ್‌ನ್ನು ಬಳಸಿದ್ದರು. ಆದರೆ ಇರಾನ್ ದಾಳಿಯ ಭೀತಿಯಿಂದಾಗಿ ಏರ್ ಫೋರ್ಸ್ ಸಿ -32 ಎ ವಿಮಾನದಲ್ಲಿ ರಹಸ್ಯವಾಗಿ ಪ್ರಯಾಣಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರನ್ನು ಹಳೆಯ ಏರ್‌ಫೋರ್ಸ್ ಒನ್ ವಿಮಾನ ಹತ್ತಿಸಿದ ಭದ್ರತಾ ಸಿಬ್ಬಂದಿ, ಆ ಬಳಿಕ ಅದೇ ವಿಮಾನದ ಕಿಚನ್ ಟ್ರಕ್‌ನಲ್ಲಿ ಅಡಗಿಸಿ ಏರ್ ಫೋರ್ಸ್ ಸಿ -32 ಎ ವಿಮಾನಕ್ಕೆ ರಹಸ್ಯವಾಗಿ ಸ್ಥಳಾಂತರಿಸಲಾಗಿದೆ. ಎಲ್ಲರಿಗೂ ಟ್ರಂಪ್ ಏರ್‌ಫೋರ್ಸ್ ಒನ್ ವಿಮಾನದಲ್ಲೇ ಪ್ರಯಾಣ ಮಾಡುತ್ತಿರುವುದಾಗಿ ಹೇಳಿದ್ದ ಟ್ರಂಪ್, ಟ್ರಕ್ ನೆರವಿನಿಂದ ಬೇರೊಂದು ವಿಮಾನಕ್ಕೆ ಯಾರಿಗೂ ಗೊತ್ತಾಗದಂತೆ ಶಿಫ್ಟ್ ಆಗಿದ್ದಾರೆ.
ಟ್ರಂಪ್ ಟರ್ಕಿಯಿಂದ ನಿರ್ಗಮನವು ಸಂಪೂರ್ಣವಾಗಿ ಮಾಮೂಲಿಯಾಗಿ ಕಾಣುತ್ತಿತ್ತು. ಟೆಲಿವಿಷನ್ ಕ್ಯಾಮೆರಾಗಳು ಅವರು ಲಿಮೋಸಿನ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುವುದನ್ನು ಸೆರೆಹಿಡಿದಿವೆ. ಆದರೆ ಕ್ಯಾಮರಾ ಕಣ್ಣು ತಪ್ಪಿಸಿ ವಿಮಾನ ನಿಲ್ದಾಣದ ಅಡುಗೆ ಟ್ರಕ್ ಮೂಲಕ ಮತ್ತೊಂದು ಸಣ್ಣ ವಿಮಾನಕ್ಕೆ ಟ್ರಂಪ್ ಅವರನ್ನು ಶಿಫ್ಟ್ ಮಾಡಲಾಗಿತ್ತು.