ʼʼನಿಯಮ ಉಲ್ಲಂಘಿಸಿದರೆ ಇರಾನ್ ಮೇಲೆ ಮತ್ತೆ ಬಾಂಬ್ ದಾಳಿʼʼ: ಫ್ರಾನ್ಸ್‌ನಲ್ಲಿ ನಿಂತು ಗುಡುಗಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Middle East Crisis: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ನಡೆಯುತ್ತಿದ್ದ ಪ್ರಯತ್ನಗಳು ಫಲ ನೀಡಲಿವೆ ಎಂಬ ನಿರೀಕ್ಷೆ ಮೂಡುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಹೊಸ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಒಪ್ಪಂದ ಇನ್ನೂ ಪೂರ್ಣಗೊಂಡಿಲ್ಲ ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -
ಪ್ಯಾರಿಸ್, ಜೂ. 17: ಮಧ್ಯ ಪ್ರಾಚ್ಯದಲ್ಲಿ (Middle East Crisis) ಶಾಂತಿ ಸ್ಥಾಪನೆಗೆ ನಡೆಯುತ್ತಿದ್ದ ಪ್ರಯತ್ನಗಳು ಫಲ ನೀಡಲಿವೆ ಎಂಬ ನಿರೀಕ್ಷೆಗಳು ಮೂಡಿದ್ದ ವೇಳೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್‌ಗೆ ಹೊಸ ಎಚ್ಚರಿಕೆ ನೀಡುವ ಮೂಲಕ ಆ ಆಶಾವಾದಕ್ಕೆ ತಣ್ಣೀರೆರಚಿದ್ದಾರೆ. ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್, ʼʼಇರಾನ್‌ನೊಂದಿಗೆ ಯಾವುದೇ ಅಂತಿಮ ಒಪ್ಪಂದ ಇನ್ನೂ ಪೂರ್ಣಗೊಂಡಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ತನ್ನ ಬದ್ಧತೆ ಪಾಲಿಸದಿದ್ದರೆ ಮತ್ತೆ ಬಾಂಬ್ ದಾಳಿಯನ್ನು ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಒಪ್ಪಂದದ ಕುರಿತು ಸ್ಪಷ್ಟನೆ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ʼʼಸದ್ಯ ಕೇವಲ ಒಂದು ಒಪ್ಪಂದದ ತಿಳುವಳಿಕೆ ಪತ್ರ ರೂಪುಗೊಳ್ಳುತ್ತಿರುವ ಹಂತದಲ್ಲಿದ್ದು, ಯಾವುದೂ ಪೂರ್ಣಗೊಂಡಿಲ್ಲʼʼ ಎಂದು ಹೇಳಿದ್ದಾರೆ. ತನಗೆ ಅದು ಇಷ್ಟವಾಗದಿದ್ದರೆ ಮತ್ತೆ ಅವರ ಮೇಲೆ ಗುಂಡಿನ ದಾಳಿ ನಡೆಸುವುದಾಗಿ ಗುಡುಗಿದ್ದಾರೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರೊಂದಿಗೆ ಕುಳಿತಿದ್ದ ವೇಳೆ ಈ ಹೇಳಿಕೆ ನೀಡಿದ್ದಾರೆ.
ಜೂನ್ 19ರಂದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿರುವ ಕೆಲವೇ ದಿನಗಳ ಮೊದಲು ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಈ ಶಾಂತಿ ಸಂಧಾನದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಇಲ್ಲಿದೆ ವಿಡಿಯೊ:
BREAKING: "If I don't like it, we'll go back to shooting at them, dropping bombs on their head."
— Fox News (@FoxNews) June 17, 2026
President Trump warns Iran that any change to the peace agreement or failure to comply could bring an immediate military response.
"If they don't behave, we'll go right back to… pic.twitter.com/67JRcDptYS
ಸಂಘರ್ಷಕ್ಕೆ ಅಂತ್ಯ ಹಾಡುವ ಉದ್ದೇಶದೊಂದಿಗೆ ಅಮೆರಿಕ ಮತ್ತು ಇರಾನ್ ನಡುವಿನ ಅಂತಿಮ ಒಪ್ಪಂದದ ಕುರಿತ ಮಾತುಕತೆ, ಒಪ್ಪಂದದ ತಿಳುವಳಿಕೆ ಪತ್ರಕ್ಕೆ ಸಹಿ ಆದ ತಕ್ಷಣವೇ ಆರಂಭವಾಗಲಿದೆ. ಈ ಮಾತುಕತೆ 60 ದಿನಗಳ ಅವಧಿಯವರೆಗೆ ಮುಂದುವರಿಯಲಿದೆ.
ಅಮೆರಿಕ-ಇರಾನ್ ಒಪ್ಪಂದಕ್ಕೆ ಇಸ್ರೇಲ್‌ನಲ್ಲಿ ಭಾರಿ ವಿರೋಧ
ಕಳೆದ ವಾರ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದವು, ಇದುವರೆಗೆ ಎಂದಿಗೂ ಇರದಷ್ಟು ಹತ್ತಿರದಲ್ಲಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಬೆಂಬಲ ವ್ಯಕ್ತಪಡಿಸಿದ್ದರು.
ಹೊರ್ಮುಜ್‌ನಲ್ಲಿ ಶುಲ್ಕ ವಿಧಿಸಲು ಇರಾನ್ ಚಿಂತನೆ
ಹೊರ್ಮುಜ್ ಜಲಸಂಧಿಯ ಪ್ರಮುಖ ತೈಲ ಸಾಗಣೆ ಮಾರ್ಗವು ಈ ವಾರದಿಂದ ಶಾಶ್ವತವಾಗಿ ಟೋಲ್ ಫ್ರೀ ಮತ್ತು ಸಂಪೂರ್ಣ ಮುಕ್ತವಾಗಿರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಮತ್ತೊಂದೆಡೆ ಇರಾನ್ ಜಲಸಂಧಿಯಲ್ಲಿ ಚಲಿಸುವ ವಾಣಿಜ್ಯ ನೌಕೆಗಳಿಂದ ಕೆಲವು ಅನಿರ್ದಿಷ್ಟ ಸೇವೆಗಳಿಗಾಗಿ ಶುಲ್ಕ ವಸೂಲಿ ಮಾಡಲು ಉದ್ದೇಶಿಸಿರುವುದಾಗಿ ಸೂಚನೆ ನೀಡಿದೆ.
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಯುದ್ಧ ಆರಂಭಿಸುವ ಮುನ್ನ ಇಂತಹ ಯಾವುದೇ ಸೇವಾ ಶುಲ್ಕದ ಅಗತ್ಯವಿರಲಿಲ್ಲ. ಆದರೆ ಈಗ ಇರಾನ್ ಜಾರಿಗೆ ತರಲು ಹೊರಟಿರುವ ಈ ನಿಯಮದಿಂದಾಗಿ ಜಾಗತಿಕ ವಾಣಿಜ್ಯ ನೌಕೆಗಳಿಗೆ ಕೋಟ್ಯಂತರ ರುಪಾಯಿ ಹೆಚ್ಚುವರಿ ಹೊರೆ ಬೀಳಲಿದ್ದು, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಹೊಸದೊಂದು ಅಪಾಯಕಾರಿ ಮುನ್ಸೂಚನೆಗೆ ಕಾರಣವಾಗಲಿದೆ.