ಟೆಹರಾನ್: ಇರಾನ್‌ನ ಸರ್ವೋಚ್ಚ ನಾಯಕ (Irans Supreme Leader) ಮೊಜ್ತಬಾ ಖಮೇನಿ (Mojtaba Khamenei) ಅವರ ಮುಖ ಸುಟ್ಟುಹೋಗಿದೆ, ಕಾಲಿಗೆ ಮೂರು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ, ಕೃತಕ ಅಂಗಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ನಡೆಸಿದ ದಾಳಿಯಿಂದ (Iran war) ಗಂಭೀರ ಗಾಯಗೊಂಡಿರುವ ಮೊಜ್ತಬಾ ಖಮೇನಿ ಅವರ ಒಂದು ಕಾಲಿಗೆ ಮೂರು ಬಾರಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಅವರು ಕೃತಕ ಅಂಗಕ್ಕಾಗಿ ಕಾಯುತ್ತಿದ್ದಾರೆ. ಒಂದು ಕೈ ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರ ಮುಖ ಮತ್ತು ತುಟಿಗಳು ತೀವ್ರವಾಗಿ ಸುಟ್ಟು ಹೋಗಿದ್ದು, ಮಾತನಾಡಲು ಕಷ್ಟವಾಗುತ್ತಿದೆ. ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿದೆ ಎನ್ನಲಾಗಿದೆ.
ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಳಿಕ ಇರಾನ್ ನ ಸರ್ವೋಚ್ಛ ನಾಯಕನಾಗಿ ಅಧಿಕಾರ ವಹಿಸಿಕೊಂಡ ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿದ್ದು, ಗೌಪ್ಯವಾಗಿ ಉಳಿದುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂವಹನ ನಡೆಸಲು ಸೀಮಿತ ಸಾಮರ್ಥ್ಯ ಹೊಂದಿದ್ದಾರೆ. ಅವರು ಗಂಭೀರವಾಗಿ ಗಾಯಗೊಂಡಿದ್ದರೂ ಮಾನಸಿಕವಾಗಿ ಸಕ್ರಿಯರಾಗಿದ್ದಾರೆ. ಅವರ ದೇಹಕ್ಕೆ ಗಂಭೀರ ಗಾಯಗಳಾಗಿವೆ. ನಿಧಾನವಾಗಿ ಅವರು ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ. ಹೆಚ್ಚು ಸ್ಪಷ್ಟವಾಗಿ ಮಾತನಾಡಲು ಅವರಿಗೆ ಕಷ್ಟವಾಗುತ್ತಿದೆ ಎಂದು ನಾಲ್ವರು ಹಿರಿಯ ಇರಾನಿನ ಅಧಿಕಾರಿಗಳು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗು ಹೊಡೆದುರುಳಿಸಲು ಡೊನಾಲ್ಡ್ ಟ್ರಂಪ್ ಆದೇಶ
ಇರಾನಿನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಖಮೇನಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಯಾವುದೇ ವಿಡಿಯೊ, ಆಡಿಯೊ ಸಂದೇಶವನ್ನು ನೀಡಿಲ್ಲ. ಅವರೊಂದಿಗೆ ಸಂವಹನವನ್ನು ಗುಪ್ತ ರೂಪದಲ್ಲಿ ನಡೆಸಲಾಗುತ್ತಿದೆ. ಕೈಬರಹದಲ್ಲಿ ಸಂದೇಶಗಳನ್ನು ಲಕೋಟೆಯಲ್ಲಿ ಮುಚ್ಚಿ ಕಳುಹಿಸಲಾಗುತ್ತದೆ. ಹಿರಿಯ ಅಧಿಕಾರಿಗಳಿಗೂ ಅವರನ್ನು ಭೇಟಿ ಮಾಡಲು ಅವಕಾಶವಿಲ್ಲ ಎನ್ನಲಾಗಿದೆ.
ಸರ್ವೋಚ್ಚ ನಾಯಕನ ಭೇಟಿಗೆ ನಿರ್ಬಂಧ ಹೆಚ್ಚಾಗಿರುವುದರಿಂದ ಆಡಳಿತವು ಮಿಲಿಟರಿ ಕೇಂದ್ರೀಕೃತವಾಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಕಮಾಂಡರ್‌ಗಳು ಯುದ್ಧ, ರಾಜತಾಂತ್ರಿಕತೆ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಮೊಜ್ತಬಾ ಅವರು ಮಂಡಳಿಯ ನಿರ್ದೇಶಕರಂತೆ ದೇಶವನ್ನು ನಿರ್ವಹಿಸುತ್ತಿದ್ದಾರೆ ಎಂದು ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರ ಮಾಜಿ ಸಲಹೆಗಾರ ಅಬ್ದುಲ್ರೆಜಾ ದಾವರಿ ತಿಳಿಸಿದ್ದಾರೆ.
ಜನರಲ್‌ಗಳು ಮಂಡಳಿಯ ಸದಸ್ಯರಾಗಿದ್ದಾರೆ, ಅವರು ಸಾಮೂಹಿಕವಾಗಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಸರ್ವೋಚ್ಚ ನಾಯಕರು ಪ್ರಮುಖ ನಿರ್ಧಾರಗಳಿಗೆ ಸಹಿ ಹಾಕುತ್ತಿದ್ದರೂ, ಉಪಕ್ರಮವು ಮಿಲಿಟರಿ ಕಮಾಂಡರ್‌ಗಳ ಬಳಿ ಇದೆ ಎಂದು ಅವರು ತಿಳಿಸಿದ್ದಾರೆ.