Ireland Car Crash: ಐರ್ಲೆಂಡ್‌ನಲ್ಲಿ ಭೀಕರ ಕಾರು ಅಪಘಾತ- ಇಬ್ಬರು ಭಾರತೀಯ ವಿದ್ಯಾರ್ಥಿಗಳು ಬಲಿ
ಐರ್ಲೆಂಡ್ ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತ ಇಬ್ಬರು ಭಾರತೀಯ ವಿದ್ಯಾರ್ಥಿಗಳನ್ನು ಬಲಿ ಪಡೆದುಕೊಂಡಿದೆ ಮತ್ತು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ವಿವರ ಇಲ್ಲಿದೆ. ಮೃತಪಟ್ಟ ದುರ್ದೈವಿಗಳನ್ನು ಆಂಧ್ರಪ್ರದೇಶ ಮೂಲದವರೆಂದು ಗುರುತಿಸಲಾಗಿದೆ.
ನವದೆಹಲಿ: ಐರ್ಲೆಂಡ್‌ನಲ್ಲಿ (Ireland) ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ (Car Crash) ಭಾರತೀಯ ವಿದ್ಯಾರ್ಥಿಗಳಿಬ್ಬರು (Indian Students) ದಾರುಣವಾಗಿ ಸಾವನ್ನಪ್ಪಿದ್ದಾರೆ. ದಕ್ಷಿಣ ಐರ್ಲ್ಯಾಂಡಿನ ಕೌಂಟಿ ಕಾರ್ಲೋ ಟೌನ್ ನಲ್ಲಿ (County Carlow town) ಜ.31ರಂದು ಈ ಅಪಘಾತ ಸಂಭವಿಸಿರುವ ಮಾಹಿತಿ ಲಭ್ಯವಾಗಿದೆ. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಲೋಟೌನ್ ನ ಗ್ರೇಗಿನೋಸ್ಪಿಡ್ಜೆ ಎಂಬಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಆಡಿ ಎ6 ಕಾರು ರಸ್ತೆಬಿಟ್ಟು ಮರಕ್ಕೆ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿರುವುದಾಗಿ ತಿಳಿದುಬಂದಿದೆ. ಮೃತಪಟ್ಟ ದುರ್ದೈವಿಗಳನ್ನು ಆಂಧ್ರಪ್ರದೇಶ (Andhra Pradesh) ಮೂಲದವರೆಂದು ಗುರುತಿಸಲಾಗಿದೆ.
ಮೃತರನ್ನು ಚೆರುಕುರಿ ಸುರೇಶ್ ಚೌಧರಿ ಮತ್ತು ಭಾರ್ಗವ್ ಚಿಟ್ಟೂರಿ ಎಂದು ಗುರುತಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಐರಿಶ್ ಪೊಲೀಸರು ಮಾಹಿತಿ ನೀಡಿದ್ದಾರೆ. ಡಬ್ಲಿನ್ ನಲ್ಲಿರುವ (Dublin) ಭಾರತೀಯ ದೂತಾವಾಸ ಕಚೇರಿಯು (Indian Embassy) ಇವರಿಬ್ಬರ ದುರ್ಮರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಂತಾಪ ಸಂದೇಶವನ್ನು ಪೋಸ್ಟ್ ಮಾಡಿದೆ.
ಈ ಅಪಘಾತದ ಸುದ್ದಿ ಕೇಳಿ ಆಘಾತವಾಗಿದೆ ಎಂದು ಐರಿಷ್ ಪ್ರಧಾನಿ ಮೈಕೆಲ್ ಮಾರ್ಟಿನ್ (Micheal Martin) ಕಾರ್ಕ್ (Cork) ನಲ್ಲಿ ಸೇರಿದ್ದವರಿಗೆ ಪ್ರತಿಕ್ರಿಯೆ ನೀಡುತ್ತಾ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಭಾರತೀಯ ದೂತವಾಸ ಕಚೇರಿಯೂ ಸಂತಾಪ ವ್ಯಕ್ತಪಡಿಸಿದ್ದು, ಈ ಅಪಘಾತದಲ್ಲಿ ಮೃತಪಟ್ಟವರ ಹಾಗೂ ಗಾಯಗೊಂಡವರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿಕೊಂಡಿದೆ.
ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಇಬ್ಬರು ವಿದ್ಯಾರ್ಥಿಗಳಿಗೆ ಅಗತ್ಯ ನೆರವನ್ನು ಒದಗಿಸುವ ಭರವಸೆಯನ್ನೂ ಸಹ ದೂತವಾಸ ಕಚೇರಿಯ ಅಧಿಕಾರಿಗಳು ನೀಡಿದ್ದಾರೆ. 20 ವರ್ಷ ಪ್ರಾಯದೊಳಗಿನವರಾಗಿರುವ ಇಬ್ಬರು ಗಾಯಾಳುಗಳನ್ನು ಕಿಲ್ ಕೆನ್ನೆಯಲ್ಲಿರುವ ಸೈಂಟ್ ಲ್ಯೂಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರ ಸ್ಥಿತಿ ಗಂಭೀರವಾಗಿದ್ದರೂ, ಜೀವಕ್ಕೆ ಅಪಾಯವಾಗಬಹುದಾದ ಗಾಯಗಳಾಗಿಲ್ಲವೆಂದು ತಿಳಿದುಬಂದಿದೆ.
‘ಕಾರ್ಲೊ ಟೌನ್ ಕಡೆಗೆ ಚಲಿಸುತ್ತಿದ್ದ ಕಪ್ಪು ಬಣ್ಣದ ಆಡಿ ಎ6 ಕಾರೊಂದು ಗ್ರೇಗಿನೋಸ್ಪಿಡ್ಜೆ ಎಂಬಲ್ಲಿ ರಸ್ತೆಯನ್ನು ಬಿಟ್ಟು ರಸ್ತೆ ಬದಿಯಲ್ಲಿದ್ದ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ’ ಎಂದು ಕಾರ್ಲೋ ಗರ್ಡಾ ಠಾಣೆಯ ಸುಪರಿಂಡೆಂಟೆಂಟ್ ಆಂಥೋಣಿ ಫರೆಲ್ ನೀಡಿರುವ ಹೇಳಿಕೆಯನ್ನು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: Mumbai Horror: ಶಾಕಿಂಗ್ ಘಟನೆ! ಮಗನ ಜೊತೆ ರೈಲನ್ನೇರಿದ ಮಹಿಳೆ ಮೇಲೆ ಅತ್ಯಾಚಾರ
‘ಈ ಕಾರು ಮೌಂಟ್ ಲಿನ್ಸ್ಟೆರ್ ಕಡೆಯಿಂದ ಬರುತ್ತಿತ್ತೆಂದು ನಂಬಲಾಗಿದ್ದು, ಫೆನಾಗ್ ಮೂಲಕ ಕಾರ್ಲೋಗೆ ಸಾಗುತ್ತಿತ್ತು. ಈ ಕಾರಿನಲ್ಲಿದ್ದವರೆಲ್ಲರೂ ಕಾರ್ಲೋ ಟೌನ್ ನಲ್ಲಿ ವಾಸಿಸುತ್ತಿರುವ ನಮ್ಮ ಭಾರತೀಯ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಂದರ್ಭದಲ್ಲಿ ಆ ಸಂತ್ರಸ್ತ ಕುಟುಂಬಸ್ಥರ ದುಃಖದಲ್ಲಿ ನಾವೂ ಭಾಗಿಗಳಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಇಲ್ಲಿನ ಸ್ಥಳೀಯ ಪತ್ರಿಕೆಯೊಂದರ ವರದಿ ಪ್ರಕಾರ ಈ ನಾಲ್ವರು ಯುವಕರು ಸೌತ್ ಈಸ್ಟ್ ಟೆಕ್ನಲಾಜಿಕಲ್ ವಿಶ್ವವಿದ್ಯಾನಿಲಯದ (SETU) ಹಳೆ ವಿದ್ಯಾರ್ಥಿಗಳಾಗಿದ್ದಾರೆ. ಮತ್ತು ಇವರೆಲ್ಲರೂ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಇವರಲ್ಲಿ ಒಬ್ಬರು ಫಾರ್ಮಾಸ್ಯುಟಿಕಲ್ ಕಂಪೆನಿಯಾಗಿರುವ ಎಂ.ಎಸ್.ಡಿ.ಗೆ (MSD) ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ಅಪಘಾತಕ್ಕೆ ಸಂಬಂಧಿಸಿದ ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದು, ಇದರಿಂದ ಆ ಸಂತ್ರಸ್ತರ ಕುಟುಂಬದವರಿಗೆ ಆಘಾತವಾಗಬಹುದೆಂಬ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಇಬ್ಬರು ಯುವಕರ ಅಂತ್ಯ ಸಂಸ್ಕಾರ ಮತ್ತು ಸಂಬಂಧಿತ ಖರ್ಚು-ವೆಚ್ಚಗಳಿಗಾಗಿ ಫಂಡ್ ರೈಸರ್ ಒಬ್ಬರು 24 ಗಂಟೆಗಳೊಳಗೆ 25 ಸಾವಿರ ಯೂರೋಗಳನ್ನು ಸಂಗ್ರಹಿಸಿದ್ದಾರೆ.