Mumbai Horror: ಶಾಕಿಂಗ್ ಘಟನೆ! ಮಗನ ಜೊತೆ ರೈಲನ್ನೇರಿದ ಮಹಿಳೆ ಮೇಲೆ ಅತ್ಯಾಚಾರ
ಮುಂಬೈನ ಎರಡು ಪ್ರತ್ಯೇಕ ರೈಲ್ವೇ ನಿಲ್ದಾಣಗಳಲ್ಲಿ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವಾಗಿದ್ದರೆ, ಇನ್ನೊಂದು ಪ್ರಕರಣದಲ್ಲಿ 12 ವರ್ಷದ ಬಾಲಕಿ ಮೇಲೆ ಪೈಶಾಚಿಕ ಕೃತ್ಯ ನಡೆದಿದೆ.
ಮುಂಬೈ: ಬಾಂದ್ರಾ ಟರ್ಮಿನಲ್ ನಲ್ಲಿ ಖಾಲಿ ಬೋಗಿಯಲ್ಲಿ ಕಿಡಿಗೇಡಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದ್ದು(Mumbai Horror) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲಿಯೊಬ್ಬನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಫೆ.1ರಂದು ರಾತ್ರಿವೇಳೆ ನಡೆದಿದ್ದು, ಆರೋಪಿಯನ್ನು ಫೆ.2ರಂದು ಬಂಧಿಸಲಾಗಿದೆ.
ಮಧ್ಯವಯಸ್ಕ ಮಹಿಳೆಯೊಬ್ಬರು ತನ್ನ ಪುತ್ರನೊಂದಿಗೆ ಹೊರಭಾಗದಿಂದ ಬಾಂದ್ರಾ ಟರ್ಮಿನಲ್ ಗೆ ಶನಿವಾರ ರಾತ್ರಿ ತಲುಪಿದ್ದರು. ಅಲ್ಲಿ ಆ ಮಹಿಳೆ ರೈಲಿನಿಂದ ಇಳಿದ ಬಳಿಕ ಆಕೆ ಫ್ಲ್ಯಾಟ್ ಫಾರಂನ ಇನ್ನೊಂದು ಬದಿಯಲ್ಲಿದ್ದ ರೈಲನ್ನೇರಿದ್ದರು. ಆ ರೈಲಿನ ಬೋಗಿಯಲ್ಲಿ ಒಬ್ಬ ಮಾಲಿಯನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ ಎಂದು ಸರಕಾರಿ ರೈಲ್ವೇ ಪೊಲೀಸರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಈ ಖಾಲಿ ಬೋಗಿಯಲ್ಲಿದ್ದ ಆ ಮಾಲಿ ಈ ಮಹಿಳೆಯ ಮೇಲೆ ಬಲಾತ್ಕಾರವೆಸಗಿದ್ದಾನೆ ಬಳಿಕ ಆತ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯಿಂದ ಆಘಾತಗೊಂಡ ಮಹಿಳೆ ಬಳಿಕ ಚೇತರಿಸಿಕೊಂಡು ಬಾಂದ್ರಾ ಜಿ.ಆರ್.ಪಿ. ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಮಹಿಳೆಯ ದೂರನ್ನು ಆಧರಿಸಿ ಎಫ್.ಐ.ಆರ್. ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹಿಳೆಯ ದೂರಿನ ಆಧಾರದಲ್ಲಿ ಆರೋಪಿಯ ಪತ್ತೆಗೆ ಮುಂದಾದ ರೈಲ್ವೇ ಪೊಲೀಸರು, ಆ ಸ್ಥಳದಲ್ಲಿದ್ದ ಎಲ್ಲಾ ಸಿಸಿ ಕೆಮರಾಗಳನ್ನು ಪರಿಶೀಲಿಸಿದ್ದಾರೆ. ಬಳಿಕ ಈ ಸಿಸಿಕೆಮರಾಗಳ ಆಧಾರದಲ್ಲಿ ಆರೋಪಿಯನ್ನು ಪತ್ತೆ ಮಾಡಿದ ಪೊಲೀಸರು ಈ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಮಾಲಿಯೊಬ್ಬನನ್ನು ಬಂಧಿಸಿದ್ದಾರೆ. ಇನ್ನು, ಮಹಿಳೆ ತನ್ನ ರೈಲನ್ನಿಳಿದ ಬಳಿಕ ಈ ಖಾಲಿ ಬೊಗಿಗೆ ಯಾಕೆ ಪ್ರವೇಶಿಸಿದಳು ಎಂಬ ನಿಟ್ಟಿನಲ್ಲೂ ಪೊಲೀಸರು ಇದೀಗ ತನಿಖೆ ಪ್ರಾರಂಭಿಸಿದ್ದಾರೆ.
ಆರೋಪಿ ಮಾಲಿಯ ಮೇಲೆ ಭಾರತೀಯ ನ್ಯಾಯ ಸಂಹಿತೆಯಡಿಯಲ್ಲಿ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಮತ್ತು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಇದನ್ನೂ ಓದಿ: Crime News: ತನ್ನ ಸಹಪಾಠಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲು ಸುಪಾರಿ ಕೊಟ್ಟ 7ನೇ ತರಗತಿ ವಿದ್ಯಾರ್ಥಿ!
ಇನ್ನೊಂದು ಪ್ರಕರಣದಲ್ಲಿ 12 ವರ್ಷ ಪ್ರಾಯದ ಹುಡುಗಿಯೊಬ್ಬಳು ಅನಾಥ ಸ್ಥಿತಿಯಲ್ಲಿ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದಾಳೆ. ನವಿ ಮುಂಬಯಿ ಟೌನ್ ಶಿಪ್ ನ ನಿಲ್ದಾಣದಲ್ಲಿ ಈ ಹುಡುಗಿ ಪತ್ತೆಯಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ಈಕೆಯ ಮೇಲೆ ಅತ್ಯಾಚಾರವಾಗಿರುವುದು ಬೆಳಕಿಗೆ ಬಂದಿದೆ. ವಾಶಿ ಸರಕಾರಿ ರೈಲ್ವೇ ಪೊಲೀಸ್ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳು ಮತ್ತು ಈ ಹುಡುಗಿಯ ಕುಟುಂಬದವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಈ ಹುಡುಗಿಯನ್ನು ವಿಚಾರಿಸಿದಾಗ, ಆಕೆ ತನ್ನ ಹೆಸರನ್ನಾಗಲಿ, ಅಥವಾ ತನ್ನ ಬಗ್ಗೆ ಹೆಚ್ಚಿನ ಮಾಹಿತಿಗಳನ್ನಾಗಲಿ ನೀಡಲಿಲ್ಲ ಎಂದು ಹಿರಿಯ ಪೊಲೀಸ್ ಇನ್ ಸ್ಪೆಕ್ಟರ್ ರಾಜೇಶ್ ಶಿಂಧೆ ಪಿಟಿಐಗೆ ತಿಳಿಸಿದ್ದಾರೆ.
ಬಳಿಕ ಆ ಹುಡುಗಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆ ಸಂದರ್ಭದಲ್ಲಿ ಆಕೆಯ ಮೆಲೆ ಅತ್ಯಾಚಾರವಾಗಿರುವುದು ಬೆಳಕಿಗೆ ಬಂತು, ಮತ್ತು ತನ್ನ ಮೇಲೆ ನಡೆದಿರುವ ಈ ಪೈಶಾಚಿಕ ಕೃತ್ಯದ ಬಗ್ಗೆ ಆ ಅಪ್ರಾಪ್ತೆ ಹೆಚ್ಚಿನ ಮಾಹಿತಿ ನೀಡುವ ಸ್ಥಿತಿಯಲ್ಲಿರಲಿಲ್ಲವೆಂದು ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಬಿ.ಎನ್.ಎಸ್.ನ 65(1) (ಅತ್ಯಾಚಾರ), 115 (2) (ಐಚ್ಛಿಕವಾಗಿ ನೋವನ್ನುಂಟು ಮಾಡಿರುವುದು) ಮತ್ತು 3(5) (ಏಕ ಉದ್ದೇಶದಿಂದ ಹಲವಾರು ವ್ಯಕ್ತಿಗಳಿಂದ ನಡೆದ ಕ್ರಿಮಿನಲ್ ಘಟನೆ) ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.