ಜೆರುಸಲೇಂ, ಅ. 11: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದ (Flydubai Flight) ಸಹ ಪೈಲಟ್, ಉಗ್ರ ಹಮಾಮ್ ಅಲ್-ಹಮ್ಮಾಮಿಯಿಂದ ದಾಳಿಗೊಳಗಾಗಿದ್ದರೂ 174 ಪ್ರಯಾಣಿಕ ಜೀವ ಉಳಿಸಿದ ಭಾರತದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smit Machchhar) ಸಾಹಸವನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಈಗಾಗಲೇ ಇಸ್ರೇಲ್ ಸರ್ಕಾರ ಸ್ಮಿತ್ ಮಚ್ಚಾರ್ ಅವರಿಗೆ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿ ಘೋಷಿಸಿದೆ. ಈ ವಿಚಾರವನ್ನು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ (Isaac Herzog) ಪ್ರಕಟಿಸಿದ್ದು, ಇದೀಗ ಅವರು ಸ್ಮಿತ್ ಅವರನ್ನು ಇಸ್ರೇಲ್, ಭಾರತ ಮತ್ತು ಮಾನವೀಯತೆಯ ಹೀರೋ ಎಂದು ಬಣ್ಣಿಸಿದ್ದಾರೆ. ಪತ್ರ ಬರೆದ ಅವರು ಸ್ಮಿತ್ ಚೇತರಿಸಿಕೊಂಡ ನಂತರ ಇಸ್ರೇಲ್‌ನ 'ಪ್ರೆಸಿಡೆನ್ಶಿಯಲ್ ಅವಾರ್ಡ್ ಫಾರ್ ಸಿವಿಲಿಯನ್ ಹೀರೊಯಿಸಂ' ಪ್ರದಾನ ಮಾಡುವುದಾಗಿ ಹೇಳಿದ್ದಾರೆ.
ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಐಸಾಕ್ ಹೆರ್ಜಾಗ್, ಕೆಲವು ದಿನಗಳ ಹಿಂದೆ ತಾವು ಮಚ್ಚಾರ್ ಅವರಿಗೆ ಪತ್ರವೊಂದನ್ನು ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಆ ಪತ್ರದಲ್ಲಿ ಅವರು ಕ್ಯಾಪ್ಟನ್ ಮಚ್ಚಾರ್ ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದು, ಚೇತರಿಸಿಕೊಂಡ ನಂತರ ಜೆರುಸಲೇಂಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ.
ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರ ಎಕ್ಸ್ ಪೋಸ್ಟ್:
"ಜನರ ಪರವಾಗಿ, ನಾಗರಿಕ ಸಾಹಸಕ್ಕಾಗಿ ನೀಡಲಾಗುವ ಇಸ್ರೇಲ್‌ನ ಅತ್ಯುನ್ನತ ಗೌರವ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿ ನಿಮಗೆ ಪ್ರದಾನ ಮಾಡುವುದು ನನಗೆ ಹೆಮ್ಮೆಯ ವಿಷಯ" ಎಂದು ಬರೆದುಕೊಂಡಿದ್ದಾರೆ. ಸೆಪ್ಟೆಂಬರ್ 30ರಂದು ಫ್ಲೈದುಬೈ FZ1073 ವಿಮಾನ ಹೈಜಾಕ್ ತಪ್ಪಿಸಿದ ಮಚ್ಚಾರ್ ಅವರಿಗೆ ಇತ್ತೀಚೆಗೆ ಐಸಾಕ್ ಹೆರ್ಜಾಗ್ ಪ್ರಶಸ್ತಿ ಘೋಷಿಸಿದ್ದರು. ಈ ಪತ್ರವು ಘೋಷಣೆಯ ಮುಂದುವರಿದ ಭಾಗ.
ಆಸ್ಪತ್ರೆಯಲ್ಲಿ 10 ಹೆಜ್ಜೆ ನಡೆದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್: ಪೈಲಟ್ ಆರೋಗ್ಯದಲ್ಲಿ ಚೇತರಿಕೆ
ಐಸಾಕ್ ಹೆರ್ಜಾಗ್ ಪತ್ರದಲ್ಲಿ ಏನಿದೆ?
ಜೆರುಸಲೇಂಗೆ ಸ್ಮಿತ್ ಅವರನ್ನು ಸ್ವಾಗತಿಸಲು ಕಾಯುತ್ತಿರುವುದಾಗಿ ಐಸಾಕ್ ಹೆರ್ಜಾಗ್ ಹೇಳಿದ್ದಾರೆ. ಸ್ಮಿತ್ ಅವರ ಧೈರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ತಾವು ಗಂಭೀರ ಗಾಯಗೊಂಡಿದ್ದರೂ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ನೆರವಾದ ಮಚ್ಚಾರ್ ಸಾಹಸವನ್ನು ಉಲ್ಲೇಖಿಸಿದ್ದಾರೆ.
'ಇಸ್ರೇಲ್ ನ್ಯಾಷನಲ್ ನ್ಯೂಸ್' ಪ್ರಕಾರ, ಮಚ್ಚಾರ್ ಕಾರ್ಯವನ್ನೂ ಶತಮಾನದ ಹಿಂದೆ ಪವಿತ್ರ ಭೂಮಿಯ ನಗರಗಳನ್ನು ವಿಮೋಚನೆಗೊಳಿಸಲು ಹೋರಾಡಿದ ಭಾರತೀಯ ಸೈನಿಕರ ಐತಿಹಾಸಿಕ ಪಾತ್ರವನ್ನೂ ಐಸಾಕ್ ಹೆರ್ಜಾಗ್ ಹೋಲಿಸಿದ್ದಾರೆ. ಸದ್ಯ ಮಚ್ಚಾರ್ ಅಬುಧಾಬಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. "ನೀವು ಚೇತರಿಸಿಕೊಂಡ ನಂತರ, ಜೆರುಸಲೇಂಗೆ ಸ್ವಾಗತಿಸಲು ಕಾಯುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.
ಫ್ಲೈದುಬೈ ಹೀರೋ ಆರೋಗ್ಯದ ಬಗ್ಗೆ ಮಹತ್ವದ ಅಪ್‌ಡೇಟ್ ನೀಡಿದ ಭಾರತೀಯ ರಾಯಭಾರ ಕಚೇರಿ
ಸಪ್ಟೆಂಬರ್ 30ರಂದು ಆಗಿದ್ದೇನು?
ಸೆಪ್ಟೆಂಬರ್ 30ರಂದು ದುಬೈಯಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಸುಮಾರು 34 ಸಾವಿರ ಅಡಿ ಎತ್ತರದಲ್ಲಿದ್ದಾಗ ಒಮಾನ್ ಮೂಲದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಏಕಾಏಕಿ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ನಡೆಸಿದ್ದ. ವಿಮಾನವನ್ನು ಪತನಗೊಳಿಸುವ ಉದ್ದೇಶದಿಂದ ಸುತ್ತಿಗೆಯಂತಹ ಆಯುಧದಿಂದ ಸ್ಮಿತ್ ಮೇಲೆ ಎರಗಿದ್ದ. ತೀವ್ರ ಗಾಯಗೊಂಡಿದ್ದರೂ ಸ್ಮಿತ್ ಕಾಕ್‌ಪಿಟ್‌ನ ಬಾಗಿಲು ತೆರೆದು ಅಪಾಯದ ಸೂಚನೆ ನೀಡಿದ್ದರು. ತಕ್ಷಣ ಪ್ರಯಾಣಿಕರು ಕ್ಯಾಬಿನ್‌ಗೆ ನುಗ್ಗಿ ದಾಳಿಕೋರನನ್ನು ವಶಕ್ಕೆ ಪಡೆದಿದ್ದರು. ಬಳಿಕ ವಿಮಾನದಲ್ಲಿದ್ದ ಪೈಲಟ್‌ಗಳು ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ಏರ್‌ಪೋರ್ಟ್‌ನಲ್ಲಿ ಸುರಕ್ಷಿತವಾಗಿ ಇಳಿಸಿದ್ದರು.
ವಿದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.