ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಸ್ಪತ್ರೆಯಲ್ಲಿ 10 ಹೆಜ್ಜೆ ನಡೆದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್: ಪೈಲಟ್ ಆರೋಗ್ಯದಲ್ಲಿ ಚೇತರಿಕೆ

Pilot Health: ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ನಿನ್ನೆ (ಬುಧವಾರ, ಅ.7) 10 ಹೆಜ್ಜೆ ನಡೆದಿದ್ದಾರೆ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ಪೈಲಟ್ ಮಚ್ಚಾರ್ ಸ್ಥಿರವಾದ ಪ್ರಗತಿ ಸಾಧಿಸುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಆಸ್ಪತ್ರೆಯಲ್ಲಿ 10 ಹೆಜ್ಜೆ ನಡೆದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್

ಸಂಗ್ರಹ ಚಿತ್ರ -

Priyanka P
Priyanka P Oct 8, 2026 12:52 PM

ದುಬೈ, ಅ.8: ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smith Machchhar) ಅವರ ಆರೋಗ್ಯ ಸುಧಾರಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅವರನ್ನು ಅಬುಧಾಬಿಯಿಂದ ದುಬೈ (Dubai) ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ನಿನ್ನೆ (ಬುಧವಾರ, ಅ.7) 10 ಹೆಜ್ಜೆ ನಡೆದಿದ್ದಾರೆ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ಓಮನ್ ಮೂಲದ ಸಹ ಪೈಲಟ್ ಅಲ್ ಹಮ್ಮಾಮಿಯು ಕಾಕ್‌ಪಿಟ್‌ನಲ್ಲಿ ಕೊಡಲಿಯಿಂದ ಹಲ್ಲೆ ನಡೆಸಿದ್ದ. ಇದರಿಂದ ಸ್ಮಿತ್ ಮಚ್ಚಾರ್ ಅವರ ತಲೆಬುರುಡೆಗೆ ಗಂಭೀರ ಗಾಯವಾಗಿತ್ತು. ಸೌದಿ ಅರೇಬಿಯಾದ ವಾಯುನೆಲೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ನಂತರ ಕ್ಯಾಪ್ಟನ್ ಮಚ್ಚಾರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅವರನ್ನು ಯುಎಇಯ ಅಬುಧಾಬಿಯಲ್ಲಿರುವ ಮತ್ತೊಂದು ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಯಿತು.

ಇದೀಗ ಪೈಲಟ್ ಮಚ್ಚಾರ್ ಸ್ಥಿರವಾದ ಪ್ರಗತಿ ಸಾಧಿಸುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಅವರ ಕುಟುಂಬ, ವೈದ್ಯರು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ತಿಳಿಸಿದೆ.

ಕ್ಯಾಪ್ಟನ್ ಮಚ್ಚಾರ್ ಅವರು ದುಬೈನಿಂದ ಟೆಲ್ ಅವೀವ್‌ಗೆ ಹಾರುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಮುಖ್ಯ ಪೈಲಟ್ ಆಗಿದ್ದರು. ಅದರಲ್ಲಿ ಬಹುತೇಕ ಇಸ್ರೇಲ್ ಮೂಲದ 174 ಪ್ರಯಾಣಿಕರು ಮತ್ತು ಸಿಬ್ಬಂದಿಗಳಿದ್ದರು. ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ನಡೆಸಿದ ಸಹ-ಪೈಲಟ್‌ನನ್ನು ಹಮ್ಮಾಮ್ ಅಲ್-ಹಮ್ಮಾಮಿ ಗುರುತಿಸಲಾಗಿದೆ. ಓಮನ್ ಪ್ರಜೆಯಾಗಿರುವ ಈತ ಫ್ಲೈದುಬೈನಲ್ಲಿ ಕೆಲಸಕ್ಕೆ ಸೇರುವ ಮೊದಲು ಓಮನ್ ಏರ್ ಮತ್ತು ರಾಯಲ್ ಏರ್ ಮರೋಕ್ ಅಮಾನತುಗೊಳಿಸಿತ್ತು.

“ತುಟಿ ನೀಲಿ ಬಣ್ಣಕ್ಕೆ ತಿರುಗಿತ್ತು, ನಾಡಿಮಿಡಿತ ಕಡಿಮೆಯಾಗಿತ್ತು”: ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಜೀವ ಉಳಿಸಲು ಮಾಡಿದ ಪ್ರಯತ್ನ ನೆನಪಿಸಿಕೊಂಡ ದಂತ ವೈದ್ಯ

ಸೆಪ್ಟೆಂಬರ್ 30 ರಂದು, ಟೆಲ್ ಅವೀವ್‌ಗೆ ಹಾರಾಟ ನಡೆಸುತ್ತಿದ್ದ ವೇಳೆ, ಕಾಕ್‌ಪಿಟ್‌ನಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿ ಕ್ಯಾಪ್ಟನ್ ಹಿಂದೆ ಹೋಗಿ ಹಲ್ಲೆ ನಡೆಸಿದ್ದಾನೆ. ವಿಮಾನವು ಸುಮಾರು 17,000 ಅಡಿ ಎತ್ತರಕ್ಕೆ ಜಾರಿದ ದೃಶ್ಯ ಕಂಡುಬಂದಿತು. ತುರ್ತು ಸಂಕೇತವು ಇಸ್ರೇಲಿ ಅಧಿಕಾರಿಗಳಿಗೆ ಅಪಹರಣದ ಎಚ್ಚರಿಕೆಯನ್ನು ನೀಡಿತು. ಆದರೆ, ಈ ವೇಳೆಗಾಗಲೇ ಕ್ಯಾಪ್ಟನ್ ಮಚ್ಚಾರ್ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಪ್ರಯಾಣಿಕರು, ವಿಮಾನವನ್ನು ಅಪಘಾತಗೊಳಿಸಿ ವಿಮಾನದಲ್ಲಿದ್ದ ಎಲ್ಲರನ್ನೂ ಕೊಲ್ಲಲು ಬಯಸಿದ್ದ ಸಹ-ಪೈಲಟ್‌ನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು.

ಪ್ರಯಾಣಿಕರಾಗಿದ್ದ ಇಬ್ಬರು ಆಫ್ ಡ್ಯೂಟಿ ಪೈಲಟ್‌ಗಳು ಕಾಕ್‌ಪಿಟ್‌ನ ನಿಯಂತ್ರಣವನ್ನು ತೆಗೆದುಕೊಂಡು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ಕ್ಯಾಪ್ಟನ್ ಮಚ್ಚಾರ್ ತೋರಿದ ಧೈರ್ಯದಿಂದಾಗಿ ವಿಮಾನದಲ್ಲಿದ್ದವರೆಲ್ಲರ ಜೀವ ಉಳಿಯಿತು. ಅವರ ಶೌರ್ಯವನ್ನು ಪ್ರಪಂಚದಾದ್ಯಂತ ಪ್ರಶಂಸಿಸಲಾಯಿತು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸ್ಮಿತ್ ಮಚ್ಚಾರ್ ಅವರನ್ನು ಹೀರೋ ಎಂದು ಕರೆದರು. ಅವರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗಂಭೀರವಾಗಿ ಗಾಯಗೊಂಡಿದ್ದರೂ ಸಹ ಇತರರ ಜೀವಗಳನ್ನು ರಕ್ಷಿಸುವಲ್ಲಿ ಅವರು ತೋರಿದ ಧೈರ್ಯ ಮತ್ತು ಅಚಲ ಸಂಕಲ್ಪಕ್ಕಾಗಿ ಶ್ಲಾಘಿಸಿದ್ದಾರೆ. ದುಬೈನ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಆಸ್ಪತ್ರೆಯಲ್ಲಿ ಕ್ಯಾಪ್ಟನ್ ಮಚ್ಚಾರ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.