ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆತ್ಮಾಹುತಿ ಸಂಚು ಭಗ್ನಗೊಳಿಸಿ 174 ಜೀವ ರಕ್ಷಿಸಿದ ಭಾರತೀಯ ಕ್ಯಾಪ್ಟನ್ ಸ್ಮಿತ್‌ಗೆ ಇಸ್ರೇಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆ

ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನವನ್ನು ಪತನಗೊಳಿಸಲು ಒಮಾನಿ ಮೂಲದ ಸಹ-ಪೈಲಟ್ ನಡೆಸಿದ ಭೀಕರ ಆತ್ಮಾಹುತಿ ದಾಳಿಯ ಸಂಚನ್ನು ಪ್ರಾಣದ ಹಂಗು ತೊರೆದು ಭಗ್ನಗೊಳಿಸಿದ ಫ್ಲೈದುಬೈ ಸಂಸ್ಥೆಯ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಇಸ್ರೇಲ್ ಸರ್ಕಾರವು ತನ್ನ ಅತ್ಯುನ್ನತ ನಾಗರಿಕ ಗೌರವವನ್ನು ಘೋಷಿಸಿದೆ.

ಸಂಗ್ರಹ ಚಿತ್ರ

ಜೆರುಸಲೆಮ್: ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನವನ್ನು ಪತನಗೊಳಿಸಲು ಒಮಾನಿ ಮೂಲದ ಸಹ-ಪೈಲಟ್ ನಡೆಸಿದ ಭೀಕರ ಆತ್ಮಾಹುತಿ ದಾಳಿಯ ಸಂಚನ್ನು ಪ್ರಾಣದ ಹಂಗು ತೊರೆದು ಭಗ್ನಗೊಳಿಸಿದ ಫ್ಲೈದುಬೈ ಸಂಸ್ಥೆಯ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ (Smit Machchhar) ಅವರಿಗೆ ಇಸ್ರೇಲ್ ಸರ್ಕಾರವು ತನ್ನ ಅತ್ಯುನ್ನತ ನಾಗರಿಕ ಗೌರವವನ್ನು ಘೋಷಿಸಿದೆ. ವಿಮಾನದಲ್ಲಿದ್ದ 174 ಪ್ರಯಾಣಿಕರ ಜೀವ ಉಳಿಸಲು ಅಸಾಧಾರಣ ಧೈರ್ಯ ಮತ್ತು ಸಮಯಪ್ರಜ್ಞೆ ಮೆರೆದ ಕ್ಯಾಪ್ಟನ್ ಸ್ಮಿತ್ ಅವರಿಗೆ ಇಸ್ರೇಲ್‌ನ ಪ್ರತಿಷ್ಠಿತ 'ಪ್ರೆಸಿಡೆನ್ಶಿಯಲ್ ಅವಾರ್ಡ್ ಫಾರ್ ಸಿವಿಲಿಯನ್ ಹೀರೊಯಿಸಂ' (Presidential Award for Civilian Heroism) ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರು ಜೆರುಸಲೆಮ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಕಳೆದ ಸೆಪ್ಟೆಂಬರ್ 30 ರಂದು ದುಬೈನಿಂದ ಟೆಲ್ ಅವೀವ್‌ಗೆ ಫ್ಲೈದುಬೈ ಸಂಸ್ಥೆಯ 'FZ1073' ವಿಮಾನವು ಹೊರಟಿತ್ತು. ವಿಮಾನವು ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದಾಗ, ಒಮಾನಿ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಎಂಬಾತ ವಿಮಾನವನ್ನು ನಿಯಂತ್ರಣಕ್ಕೆ ತಗೆದುಕೊಂಡು ಯಾವುದಾದರೂ ಕಟ್ಟಡಕ್ಕೆ ಡಿಕ್ಕಿ ಹೊಡೆಸಿ ಪತನಗೊಳಿಸಲು ಸಂಚು ರೂಪಿಸಿದ್ದನು.

ಇದಕ್ಕಾಗಿ ಆತ ಕಾಕ್‌ಪಿಟ್ ಒಳಗಡೆಯೇ ಮುಖ್ಯ ಪೈಲಟ್ ಆಗಿದ್ದ ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಕೊಡಲಿಯಿಂದ ಭೀಕರವಾಗಿ ಹಲ್ಲೆ ನಡೆಸಿದನು. ತಲೆಬುರುಡೆ ಹಾಗೂ ದೇಹದ ಹಲವು ಭಾಗಗಳಿಗೆ ಕೊಡಲಿ ಏಟು ಬಿದ್ದು ತೀವ್ರ ರಕ್ತಸ್ರಾವವಾಗುತ್ತಿದ್ದರೂ ಧೃತಿಗೆಡದ ಕ್ಯಾಪ್ಟನ್ ಸ್ಮಿತ್, ದಾಳಿಕೋರ ಸಹ-ಪೈಲಟ್‌ನೊಂದಿಗೆ ತೀವ್ರವಾಗಿ ಹೋರಾಡಿದರು. ಅಲ್ಲದೆ, ತೀವ್ರ ಗಾಯದ ಸ್ಥಿತಿಯಲ್ಲೂ ಕಾಕ್‌ಪಿಟ್‌ನ ತುರ್ತು ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು.

ಕಾಕ್‌ಪಿಟ್ ಬಾಗಿಲು ತೆರೆಯುತ್ತಿದ್ದಂತೆ ವಿಮಾನದಲ್ಲಿದ್ದ ಇಸ್ರೇಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ತಕ್ಷಣವೇ ಒಳ ನುಗ್ಗಿ, ದಾಳಿಕೋರ ಸಹ-ಪೈಲಟ್ ಹಮಾಮಿಯನ್ನು ಸೆರೆಹಿಡಿದು ನಿಯಂತ್ರಿಸಿದರು. ತದನಂತರ ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಅವರ ಮಾರ್ಗದರ್ಶನದಲ್ಲೇ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಅತ್ಯಂತ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಇದರಿಂದಾಗಿ ವಿಮಾನದಲ್ಲಿದ್ದ ಎಲ್ಲಾ 174 ಪ್ರಯಾಣಿಕರು ಮತ್ತು ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ʼʼಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ ಚೇತರಿಸಿಕೊಳ್ಳುತ್ತಿದ್ದಾರೆʼʼ: ಫ್ಲೈದುಬೈ ಹೀರೋ ಆರೋಗ್ಯದ ಬಗ್ಗೆ ಮಹತ್ವದ ಅಪ್‌ಡೇಟ್‌ ನೀಡಿದ ಭಾರತೀಯ ರಾಯಭಾರ ಕಚೇರಿ

ಭಾರತೀಯ ಪೈಲಟ್‌ನ ಈ ಶೌರ್ಯಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೂ ಕೂಡ ಶ್ಲಾಘಿಸಿದ್ದಾರೆ. ಇಸ್ರೇಲ್‌ನ ಮುಂಬರುವ ಅಧಿಕೃತ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಗೌರವಾನ್ವಿತ 'ಜ್ವಾಲೆ ಬೆಳಗಿಸುವ' ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಸ್ಮಿತ್ ಮಚ್ಚಾರ್‌ ಅವರಿಗೆ ಪ್ರಧಾನಿ ಕಚೇರಿಯಿಂದ ವಿಶೇಷ ಆಹ್ವಾನ ಕಳುಹಿಸಲಾಗಿದೆ. ಇದೇ ವೇಳೆ ವಿಮಾನದಲ್ಲಿ ದಾಳಿಕೋರನನ್ನು ಮಟ್ಟಹಾಕಲು ನೆರವಾದ ಆರು ಮಂದಿ ಇಸ್ರೇಲಿ ನಾಗರಿಕರಿಗೂ ಅಧ್ಯಕ್ಷರು ನಾಗರಿಕ ವೀರ ಪ್ರಶಸ್ತಿ ಘೋಷಿಸಿದ್ದಾರೆ.

Vishakha Bhat Heggar

View all posts by this author