ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇರಾನ್‌ಗೆ 300 ಬಿಲಿಯನ್ ಡಾಲರ್ ನೆರವು ನೀಡುತ್ತಾ ಅಮೆರಿಕ? ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೀಡಿದ ಸ್ಪಷ್ಟನೆಯಲ್ಲಿ ಏನಿದೆ?

JD Vance: ಅಮೆರಿಕವು ಇರಾನ್‌ಗೆ 300 ಬಿಲಿಯನ್ ಡಾಲರ್ ನೆರವು ನೀಡುತ್ತಿದೆ ಎಂಬ ವರದಿಗಳನ್ನು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಳ್ಳಿ ಹಾಕಿದ್ದಾರೆ. ಒಪ್ಪಂದದ ಷರತ್ತುಗಳನ್ನು ಇರಾನ್ ಪಾಲಿಸಿದರೆ ಮಾತ್ರ ಇತರ ರಾಷ್ಟ್ರಗಳಿಗೆ ಅಲ್ಲಿನ ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್, ಜೂ. 17: ಅಮೆರಿಕ (United States) ಮತ್ತು ಇರಾನ್ (Iran) ನಡುವಿನ ಮಧ್ಯಂತರ ಒಪ್ಪಂದದ (Interim Agreement) ಭಾಗವಾಗಿ ಅಮೆರಿಕವು ಇರಾನ್‌ಗೆ 300 ಬಿಲಿಯನ್ ಡಾಲರ್ ಪುನರ್‌ನಿರ್ಮಾಣ ನಿಧಿ ನೀಡುತ್ತಿದೆ ಎಂಬ ವರದಿಗಳನ್ನು ಅಮೆರಿಕದ ಉಪಾಧ್ಯಕ್ಷ (US Vice President) ಜೆಡಿ ವ್ಯಾನ್ಸ್ (JD Vance) ತಳ್ಳಿ ಹಾಕಿದ್ದಾರೆ. ಬದಲಾಗಿ, ಒಪ್ಪಂದದ ಷರತ್ತುಗಳನ್ನು ಇರಾನ್ ಪಾಲಿಸಿದರೆ, ಇತರ ರಾಷ್ಟ್ರಗಳು ಅಲ್ಲಿನ ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಕೆಲವು ಮಾಧ್ಯಮ ವರದಿಗಳಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಮಧ್ಯಸ್ಥಿಕೆಯಲ್ಲಿ ರೂಪುಗೊಂಡ ಶಾಂತಿ ಒಪ್ಪಂದದ ಭಾಗವಾಗಿ ಇರಾನ್‌ಗೆ 300 ಬಿಲಿಯನ್ ಡಾಲರ್ ಮೌಲ್ಯದ ಪುನರ್‌ನಿರ್ಮಾಣ ನಿಧಿ ಲಭ್ಯವಾಗಲಿದೆ ಎಂದು ಹೇಳಲಾಗಿತ್ತು.

ಅಮೆರಿಕ ಹಣ ನೀಡುವುದಿಲ್ಲ

'ದಿ ಮೆಗಿನ್ ಕೆಲ್ಲಿ ಶೋ' ಕಾರ್ಯಕ್ರಮದಲ್ಲಿ ಮಾತನಾಡಿದ ಜೆ.ಡಿ. ವ್ಯಾನ್ಸ್, "ಅಮೆರಿಕ ಇರಾನ್‌ಗೆ ನೇರವಾಗಿ ಹಣ ನೀಡುವುದಿಲ್ಲ. ಆದರೆ ಇರಾನ್ ತನ್ನ ವರ್ತನೆಯಲ್ಲಿ ಬದಲಾವಣೆ ತಂದು ಒಪ್ಪಂದದ ನಿಯಮಗಳನ್ನು ಪಾಲಿಸಿದರೆ, ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿ ಇತರ ರಾಷ್ಟ್ರಗಳು ಹೂಡಿಕೆ ಮಾಡಲು ಅವಕಾಶ ನೀಡಲಾಗುತ್ತದೆ" ಎಂದು ಹೇಳಿದರು.

ಅವರು ಉದಾಹರಣೆಯಾಗಿ, "ಸಂಯುಕ್ತ ಅರಬ್ ಎಮಿರೇಟ್ಸ್‌ (UAE) ಇರಾನ್‌ನಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಹೂಡಿಕೆ ಮಾಡಲು ಬಯಸಿದರೆ, ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿರುವ ಕೆಲವು ನಿರ್ಬಂಧಗಳನ್ನು ತೆಗೆದುಹಾಕಬೇಕಾಗುತ್ತದೆ. ಇದನ್ನು ಅಮೆರಿಕ ಹಣ ನೀಡಿದೆ ಎಂದು ಅರ್ಥೈಸಬಾರದು" ಎಂಬುದಾಗಿ ಹೇಳಿದರು.

300 ಬಿಲಿಯನ್ ಡಾಲರ್ ಹೂಡಿಕೆ ನಿಧಿ ಎಂದರೇನು?

ರಾಯಿಟರ್ಸ್ ವರದಿಯ ಪ್ರಕಾರ, ಇರಾನ್‌ನಲ್ಲಿ ಖಾಸಗಿ ಹೂಡಿಕೆಗಳನ್ನು ಉತ್ತೇಜಿಸಲು ಸುಮಾರು 300 ಬಿಲಿಯನ್ ಡಾಲರ್ ಮೌಲ್ಯದ ಖಾಸಗಿ ಹೂಡಿಕೆ ನಿಧಿಯ ಪ್ರಸ್ತಾವನೆ ರೂಪಿಸಲಾಗಿದೆ. ಈ ನಿಧಿಯಲ್ಲಿ ಅಮೆರಿಕ ಸರ್ಕಾರದ ಹಣ ಅಥವಾ ಅನುದಾನ ಇರುವುದಿಲ್ಲ.

ಅಮೆರಿಕ, ಗಲ್ಫ್ ರಾಷ್ಟ್ರಗಳು, ಏಷ್ಯಾ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದ ಕಂಪನಿಗಳು ಇಂಧನ, ಸಾರಿಗೆ, ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೊರ್ಮುಜ್ ಜಲಸಂಧಿಯಲ್ಲಿ 'ಟೋಲ್' ಇಲ್ಲ, ಕೇವಲ 'ಸೇವಾ ಶುಲ್ಕ': ಇರಾನ್ ಹೇಳಿಕೆಯ ಹಿಂದಿನ ಮರ್ಮವೇನು?

ಇರಾನ್‌ಗೆ ಹೇಗೆ ನೆರವಾಗಲಿದೆ?

ಇರಾನ್ ಕಳೆದ ನಾಲ್ಕು ದಶಕಗಳಿಂದ ಅಮೆರಿಕ ಮತ್ತು ಅಂತಾರಾಷ್ಟ್ರೀಯ ನಿರ್ಬಂಧಗಳಿಂದಾಗಿ ವಿದೇಶಿ ನೇರ ಹೂಡಿಕೆಗಳನ್ನು ಬಹುತೇಕ ಕಳೆದುಕೊಂಡಿದೆ. ವಿಶ್ವದ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲ ಸಂಗ್ರಹ ಮತ್ತು ನಾಲ್ಕನೇ ಅತಿ ದೊಡ್ಡ ತೈಲ ಸಂಗ್ರಹ ಹೊಂದಿರುವ ದೇಶವಾಗಿದ್ದರೂ, ನಿರ್ಬಂಧಗಳಿಂದ ಅದರ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಿದೆ.

ಹೊಸ ಹೂಡಿಕೆ ನಿಧಿ ಜಾರಿಯಾದರೆ, ಇಂಧನ, ಮೂಲಸೌಕರ್ಯ, ವಿಮಾನ ನಿಲ್ದಾಣಗಳು, ಉಕ್ಕು ಕಾರ್ಖಾನೆಗಳು ಹಾಗೂ ಇತರ ಕೈಗಾರಿಕಾ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಾಗಿ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ಸಿಗಲಿದೆ.

ಅಂತಿಮ ಒಪ್ಪಂದದ ಬಳಿಕವೇ ಜಾರಿ

ಮೂಲಗಳ ಪ್ರಕಾರ, ಈ ಹೂಡಿಕೆ ನಿಧಿ ಅಂತಿಮ ಶಾಂತಿ ಒಪ್ಪಂದಕ್ಕೆ ಸಹಿ ಆದ ಬಳಿಕ ಮಾತ್ರ ಕಾರ್ಯರೂಪಕ್ಕೆ ಬರಲಿದೆ. ಮುಂದಿನ 60 ದಿನಗಳಲ್ಲಿ ಯೋಜನೆಗಳ ರೂಪುರೇಷೆ ಸಿದ್ಧಪಡಿಸಿ ಹೂಡಿಕೆದಾರರೊಂದಿಗೆ ಚರ್ಚೆ ನಡೆಸಲಾಗುತ್ತದೆ.

ಇದೇ ವೇಳೆ, ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಅಂತ್ಯಗೊಳಿಸುವ ಹಾಗೂ ಹೋರ್ಮುಜ್ ಜಲಸಂಧಿಯನ್ನು ಮರುತೆರೆಯುವ ಕುರಿತ ಚೌಕಟ್ಟಿನ ಒಪ್ಪಂದಕ್ಕೆ ಉಭಯ ದೇಶಗಳು ಸಮ್ಮತಿಸಿವೆ ಎಂದು ವರದಿಯಾಗಿದೆ.