ಅಮೆರಿಕಕ್ಕೆ ಅನಿವಾಸಿ ಭಾರತೀಯರ ಕೊಡುಗೆ ಅಪಾರ: ಭಾರತೀಯ ಮೂಲದ ಅತ್ತೆ-ಮಾವಂದಿರನ್ನು ಕೊಂಡಾಡಿದ ಜೆಡಿ ವ್ಯಾನ್ಸ್
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ತಮ್ಮ ಭಾರತೀಯ ಮೂಲದ ಅತ್ತೆ-ಮಾವಂದಿರನ್ನು ಶ್ಲಾಘಿಸಿ, ವಲಸಿಗರು ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಮೆಚ್ಚಿದರು. ಆದರೆ ಎಚ್-1ಬಿ ವೀಸಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ವಲಸಿಗರು ತಮ್ಮ ಮೂಲ ದೇಶಕ್ಕಿಂತ ಅಮೆರಿಕದ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಿಹೇಳಿದರು.
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ -
ನವದೆಹಲಿ: ಅಮೆರಿಕ (US)ದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (JD Vance ) ಅವರು ಭಾರತೀಯ ಮೂಲದ ತಮ್ಮ ಅತ್ತೆ-ಮಾವಂದಿರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ವಲಸಿಗರು ಅಮೆರಿಕದ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ಮೂಲಕ ಹೇಗೆ ಈ ದೇಶವನ್ನು ಸಮೃದ್ಧಗೊಳಿಸಿದ್ದಾರೆ ಎಂಬುದಕ್ಕೆ ಅವರೇ ಸಾಕ್ಷಿ ಎಂದು ವ್ಯಾನ್ಸ್ ಹೇಳಿದ್ದಾರೆ. ಜಾರ್ಜಿಯಾ ವಿಶ್ವವಿದ್ಯಾಲಯ (University of Georgia)ದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಪ್ರಶಂಸೆಯ ನಡುವೆಯೇ ಎಚ್-1ಬಿ (H-1B) ವೀಸಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.
ಜೆಡಿ ವ್ಯಾನ್ಸ್ ಅವರು ಆಂಧ್ರಪ್ರದೇಶ (Andhra Pradesh) ಮೂಲದ ಉಷಾ ವ್ಯಾನ್ಸ್ (Usha Vance) ಅವರನ್ನು ವಿವಾಹವಾಗಿದ್ದಾರೆ. ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಎಚ್-1ಬಿ ವೀಸಾ ಮತ್ತು ಗ್ರೀನ್ ಕಾರ್ಡ್ ಪಡೆಯಲು ಅನುಭವಿಸುತ್ತಿರುವ ವಿಳಂಬದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವ್ಯಾನ್ಸ್, "ನಾನು ಭಾರತೀಯ ಮೂಲದ ವಲಸಿಗರ ಮಗಳನ್ನು ವಿವಾಹವಾಗಿದ್ದೇನೆ. ನನ್ನ ಅತ್ತೆ-ಮಾವ ಅದ್ಭುತ ವ್ಯಕ್ತಿಗಳು ಮತ್ತು ಅಮೆರಿಕದ ಏಳಿಗೆಗೆ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ವಲಸಿಗರು ಈ ದೇಶವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ನಾನು ನಂಬುತ್ತೇನೆ. ಆದರೆ ಅದೇ ಸಮಯದಲ್ಲಿ ಎಚ್-1ಬಿ ವೀಸಾ ವ್ಯವಸ್ಥೆಯಲ್ಲಿನ ವಂಚನೆಗಳನ್ನು ನಾವು ನಿರ್ಲಕ್ಷಿಸುವಂತಿಲ್ಲ," ಎಂದು ತಿಳಿಸಿದರು.
PM Narendra Modi: ವಿಕಸಿತ ಭಾರತಕ್ಕೆ ಪ್ರಧಾನಿ ಮೋದಿ 9 ಸೂತ್ರ; ರಾಗಿ ಮುದ್ದೆ, ಕಾವೇರಿ ನೀರು ನೆನೆದ ಪಿಎಂ
ಅಮೆರಿಕದ ಪೌರತ್ವ ಪಡೆಯುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹಿನ್ನೆಲೆಯನ್ನು ಮರೆತು ದೇಶದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಜವಾಬ್ದಾರಿಯನ್ನು ಅವರು ಒತ್ತಿಹೇಳಿದರು. "ನಿಮ್ಮ ಕುಟುಂಬವು ಇಲ್ಲಿ ಒಂಬತ್ತು ತಲೆಮಾರುಗಳಿಂದ ವಾಸಿಸುತ್ತಿರಲಿ ಅಥವಾ ನೀವು ಈಗಷ್ಟೇ ಬಂದಿರಲಿ, ಅಮೆರಿಕನ್ ಎಂಬ ನೆಲೆಯಲ್ಲಿ ಈ ದೇಶದ ಬಗ್ಗೆ ಯೋಚಿಸುವುದು ನಿಮ್ಮ ಕರ್ತವ್ಯ. ನೀವು ಬಂದ ಮೂಲ ದೇಶ ಅಥವಾ ಗುಂಪಿನ ಹಿತಾಸಕ್ತಿಗಿಂತ ಅಮೆರಿಕದ ಹಿತಾಸಕ್ತಿಯೇ ನಿಮಗೆ ಮುಖ್ಯವಾಗಬೇಕು," ಎಂದು ವ್ಯಾನ್ಸ್ ಅಭಿಪ್ರಾಯಪಟ್ಟರು.
ತಮ್ಮ ಮಾವನವರ ಉದಾಹರಣೆ ನೀಡಿದ ಅವರು, "ಭಾರತದಿಂದ ಅಮೆರಿಕಕ್ಕೆ ಬಂದು ಶಿಕ್ಷಣ ಪಡೆದು ಇಲ್ಲಿನ ಪೌರತ್ವ ಪಡೆದ ನನ್ನ ಮಾವ, ತಮ್ಮ ಜೀವನದಲ್ಲಿ ಒಂದೇ ಒಂದು ಬಾರಿಯೂ ನಾನು ಬಂದ ದೇಶದ ಹಿತಾಸಕ್ತಿಗಾಗಿ ನೀವು ಇದನ್ನು ಮಾಡಬೇಕು ಎಂದು ಹೇಳಿಲ್ಲ. ಬದಲಾಗಿ ಯಾವಾಗಲೂ ಅಮೆರಿಕದ ಹಿತವನ್ನೇ ಬಯಸಿದ್ದಾರೆ. ಇಂತಹ ಮನಸ್ಥಿತಿಯು ಅಮೆರಿಕನ್ನರು ವಲಸಿಗರನ್ನು ಪ್ರೀತಿಯಿಂದ ಸ್ವಾಗತಿಸುವಂತೆ ಮಾಡುತ್ತದೆ," ಎಂದರು. ಡೊನಾಲ್ಡ್ ಟ್ರಂಪ್ ಆಡಳಿತವು ವಲಸೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವ್ಯಾನ್ಸ್ ಅವರ ಈ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ. ಅಮೆರಿಕದ ಹಿತಾಸಕ್ತಿ ಕಾಯುವ ವಲಸಿಗರಿಗೆ ಮಾತ್ರ ಇಲ್ಲಿ ಗೌರವ ಸಿಗಲಿದೆ ಎಂಬ ಸಂದೇಶವನ್ನು ಅವರು ಈ ಮೂಲಕ ನೀಡಿದ್ದಾರೆ.