ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೋದಿ ವಿರುದ್ಧ ಅಮೆರಿಕದಿಂದ ಹಣಕಾಸು ನೆರವು: ಪ್ರಧಾನಿ ಬೆಂಬಲಕ್ಕೆ ನಿಲ್ಲುವಂತೆ ಭಾರತೀಯ ಯುವಕರಿಗೆ ಗಾಯಕಿ ಮೇರಿ ಮಿಲ್ಬೆನ್ ಕರೆ!

ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ವಿರೋಧಿಸುವ ಶಕ್ತಿಗಳಿಗೆ ಅಮೆರಿಕದ ಕೆಲವು ದೇಣಿಗೆದಾರರು ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಭಿಜೀತ್ ದಿಪ್ಕೆ ಮತ್ತು ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು ಉಲ್ಲೇಖಿಸಿರುವ ಅವರು, ಭಾರತದಲ್ಲಿ ಅಸ್ಥಿರತೆ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ದೂರಿದ್ದಾರೆ. ಪ್ರಧಾನಿ ಮೋದಿಯವರ ಬೆಂಬಲಕ್ಕೆ ನಿಲ್ಲುವಂತೆ ಹಾಗೂ ದೇಶದ ಪ್ರಜಾಪ್ರಭುತ್ವ ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಶಾಂತಿಯುತವಾಗಿ ಸಂಘಟಿತರಾಗುವಂತೆ ಭಾರತೀಯ ಯುವಕರಿಗೆ ಕರೆ ನೀಡಿದ್ದಾರೆ.

ಮೋದಿ - ಅಮೆರಿಕನ್ ಗಾಯಕಿ ಮೇರಿ ಮಿಲ್ಬೆನ್

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ನಾಯಕತ್ವವನ್ನು ವಿರೋಧಿಸುವ ಅಮೆರಿಕ ಮೂಲದ ದೇಣಿಗೆದಾರರು ಅಭಿಜೀತ್ ದಿಪ್ಕೆ (Abhijeet Dipke) ಮತ್ತು 'ಕಾಕ್ರೋಚ್ ಜನತಾ ಪಾರ್ಟಿ'ಗೆ (Cockroach Janta Party) ಭಾರಿ ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂದು ಖ್ಯಾತ ಅಮೆರಿಕನ್ ಗಾಯಕಿ ಮೇರಿ ಮಿಲ್ಬೆನ್ (Mary Millben) ಗಂಭೀರ ಆರೋಪ ಮಾಡಿದ್ದಾರೆ. ಭಾರತದ ಆಡಳಿತ ಮತ್ತು ಅಭಿವೃದ್ಧಿಯನ್ನು ಅಸ್ಥಿರಗೊಳಿಸಲು ಈ ಹಣವನ್ನು ವ್ಯವಸ್ಥಿತವಾಗಿ ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಈ ಕುರಿತು ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಪ್ರಧಾನಿ ಮೋದಿಯವರ ವಿರುದ್ಧ ನಡೆಯುತ್ತಿರುವ ಈ ಹುನ್ನಾರದ ವಿರುದ್ಧ ಧ್ವನಿ ಎತ್ತುವಂತೆ ಭಾರತದ ಯುವ ಪೀಳಿಗೆಗೆ ಕರೆ ನೀಡಿದ್ದಾರೆ. "ಭಾರತದ ಸುಂದರ ದೇಶಭಕ್ತ ಯುವಕರೇ, ಇದು ಮೌನವಾಗಿ ಕುಳಿತುಕೊಳ್ಳುವ ಸಮಯವಲ್ಲ. ಯಾವುದೇ ಕಾರಣಕ್ಕೂ ಹೆದರಬೇಡಿ" ಎಂದು ಹುರಿದುಂಬಿಸಿದ್ದಾರೆ.

ಜಗತ್ತಿನಾದ್ಯಂತ ಸಂಪ್ರದಾಯವಾದಿ ನಾಯಕರನ್ನು ಗುರಿಯಾಗಿಸಿಕೊಂಡು ಅಮೆರಿಕದ ಕೆಲವು ನಿರ್ದಿಷ್ಟ ದೇಣಿಗೆದಾರರು ಸಂಚು ರೂಪಿಸುವ ಮಾದರಿಯನ್ನು ಹೊಂದಿದ್ದಾರೆ ಎಂದು ಅವರು ದೂರಿದ್ದಾರೆ. "ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿದವರನ್ನು ಆಯ್ಕೆ ಮಾಡಿ, ಅವರನ್ನು ತೀವ್ರಗಾಮಿಗಳನ್ನಾಗಿ ಪರಿವರ್ತಿಸಿ, ಬಳಿಕ ತಮ್ಮ ಸ್ವದೇಶದಲ್ಲಿ ಅರಾಜಕತೆ ಹಾಗೂ ಗೊಂದಲ ಸೃಷ್ಟಿಸಲು ಹಣ ನೀಡಲಾಗುತ್ತದೆ. ಇಂತಹ ಕುತಂತ್ರಗಳು ಹಲವು ದೇಶಗಳ ಆಡಳಿತ ಮತ್ತು ಬೆಳವಣಿಗೆಗೆ ಅಡ್ಡಿಯುಂಟುಮಾಡಿವೆ" ಎಂದು ಮಿಲ್ಬೆನ್ ವಿಶ್ಲೇಷಿಸಿದ್ದಾರೆ.

ರಾಹುಲ್ ಗಾಂಧಿ ವೈರಲ್ ವಿಡಿಯೋ ವಿವಾದ: ಕರ್ನಾಟಕಕ್ಕೆ ಅವಮಾನ ಎಂದ ಬಿಜೆಪಿ, ಡಿಕೆ ಶಿವಕುಮಾರ್ ತಿರುಗೇಟು

ಪ್ರಧಾನಿ ಮೋದಿಯವರ ರಾಜಕೀಯ ಬದ್ಧತೆಯನ್ನು ಸಮರ್ಥಿಸಿಕೊಂಡಿರುವ ಅವರು, "25 ವರ್ಷಗಳಿಂದ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಹಾಗೂ ಸತತ ಮೂರು ಬಾರಿ ಜನರಿಂದ ಆಯ್ಕೆಯಾಗಿರುವ ಪ್ರಧಾನಿ ಮೋದಿ, ಅಮೆರಿಕದಿಂದ ಪ್ರೇರೇಪಿಸಲ್ಪಡುವ ಇಂತಹ ವಿಚ್ಛಿದ್ರಕಾರಕ ಶಕ್ತಿಗಳಿಗೆ ಎಂದಿಗೂ ಮಣಿಯುವುದಿಲ್ಲ" ಎಂದು ಪ್ರತಿಪಾದಿಸಿದ್ದಾರೆ.

ಭಾರತದ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಪ್ರತಿ-ಚಳವಳಿ ಅನಿವಾರ್ಯವಾಗಿದೆ ಎಂದಿರುವ ಅವರು, ಭಾರತದ ಮಣ್ಣಿನಲ್ಲೇ ಜನಿಸಿ ಬೆಳೆದಿರುವ ಯುವಕರು ಶಾಂತಿಯುತವಾಗಿ ಸಂಘಟಿತರಾಗಿ ಪ್ರತಿಭಟಿಸಬೇಕೆಂದು ಒತ್ತಾಯಿಸಿದ್ದಾರೆ. ಇಂತಹ ವಿದೇಶಿ ಹಸ್ತಕ್ಷೇಪ ಹಾಗೂ ಕುತಂತ್ರಗಳನ್ನು ಭಾರತೀಯರು ಒಗ್ಗಟ್ಟಿನಿಂದ ಮೆಟ್ಟಿ ನಿಲ್ಲಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2022ರ ಸ್ವಾತಂತ್ರ್ಯ ದಿನಾಚರಣೆ ಹಾಗೂ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸದ ವೇಳೆ ಭಾರತದ ರಾಷ್ಟ್ರಗೀತೆ ಹಾಡುವ ಮೂಲಕ ಭಾರತೀಯರ ಮನಗೆದ್ದಿದ್ದ ಮೇರಿ ಮಿಲ್ಬೆನ್, ಮೊದಲಿನಿಂದಲೂ ಮೋದಿಯವರ ನಾಯಕತ್ವಕ್ಕೆ ಬಹಿರಂಗವಾಗಿ ಅಪಾರ ಬೆಂಬಲ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ದೇಶದ ಹಿತಾಸಕ್ತಿಯನ್ನು ರಕ್ಷಿಸಲು ಪ್ರತಿಯೊಬ್ಬ ನಾಗರಿಕನೂ ಜಾಗೃತರಾಗಬೇಕೆಂದು ಅವರು ತಮ್ಮ ಸಂದೇಶದಲ್ಲಿ ಮನವಿ ಮಾಡಿದ್ದಾರೆ.